ಬೆಳಗಾವಿಯಲ್ಲಿ ಸುರೇಶ ಅಂಗಡಿ ರೋಡ್ ಷೋ, ಶಕ್ತಿ ಪ್ರದರ್ಶನ

ಶುಕ್ರವಾರ, ಏಪ್ರಿಲ್ 19, 2019
22 °C
ಮತ್ತೊಮ್ಮೆ ಮನವಿಪತ್ರ ಸಲ್ಲಿಕೆ

ಬೆಳಗಾವಿಯಲ್ಲಿ ಸುರೇಶ ಅಂಗಡಿ ರೋಡ್ ಷೋ, ಶಕ್ತಿ ಪ್ರದರ್ಶನ

Published:
Updated:
Prajavani

ಬೆಳಗಾವಿ: ಇಲ್ಲಿನ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸತತ 4ನೇ ಬಾರಿಗೆ ಆಯ್ಕೆ ಬಯಸಿರುವ ಹಾಲಿ ಸಂಸದ ಸುರೇಶ ಅಂಗಡಿ ಗುರುವಾರ ರೋಡ್‌ ಷೋ ನಡೆಸಿ, ಶಕ್ತಿ ಪ‍್ರದರ್ಶಿಸಿದರು. ಮತ್ತೊಮ್ಮೆ ನಾಮಪತ್ರ ಸಲ್ಲಿಸಿದರು.

ಸಮಾದೇವಿ ಗುಡಿಯ ಸಮಾದೇವಿ ಮಂದಿರದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದ ಅವರು ತೆರೆದ ವಾಹನದಲ್ಲಿ ಮುಖಂಡರೊಂದಿಗೆ ಖಡೇಬಜಾರ್, ಶನಿವಾರ ಖೂಟ್, ಕಾಕತಿವೇಸ್, ರಾಣಿ ಚನ್ನಮ್ಮ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದರು. ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಬೆಂಬಲಿಗರು ಹಾಗೂ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಮುಖವಾಡಗಳನ್ನು ಧರಿಸಿದ್ದರು. ಪಕ್ಷದ ಬಾವುಟಗಳನ್ನು ಹಿಡಿದು ಭಾಗವಹಿಸಿದ್ದರು. ಬಹುತೇಕರು ಕೇಸರಿ ಪೇಟ ಧರಿಸಿದ್ದರಿಂದ ರ‍್ಯಾಲಿಯು ಕೇಸರಿಮಯವಾಗಿತ್ತು.

ಪಕ್ಷದ ಮುಖಂಡರೆಲ್ಲರೂ ಭಾಗವಹಿಸಿ ಒಗ್ಗಟ್ಟು ಪ್ರದರ್ಶಿಸಿದರು.

ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ಶಾಸಕರಾದ ಜಗದೀಶ ಶೆಟ್ಟರ, ಶಾಸಕರಾದ ಅನಿಲ ಬೆನಕೆ, ಅಭಯ ಪಾಟೀಲ, ಆನಂದ ಮಾಮನಿ, ಮಹಾದೇವಪ್ಪ ಯಾದವಾಡ, ವಿಧಾನಪರಿಷತ್ ವಿರೋಧಪಕ್ಷದ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ಬಿಜೆಪಿ ರಾಜ್ಯ ಘಟಕದ ವಕ್ತಾರ ಎಂ.ಬಿ. ಝಿರಲಿ, ಜಿಲ್ಲಾ ಘಟಕದ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ, ನಗರ ಘಟಕದ ಅಧ್ಯಕ್ಷ ರಾಜೇಂದ್ರ ಹರಕುಣಿ, ಚಿಕ್ಕೋಡಿ ಲೋಕಸಭಾ ಕ್ಷೇತ್ರ ಬಿಜೆಪಿ ಉಸ್ತುವಾರಿ ಸಂಜಯ ಪಾಟೀಲ, ಮುಖಂಡರಾದ ಈರಣ್ಣ ಕಡಾಡಿ, ಶಂಕರಗೌಡ ಪಾಟೀಲ, ಕಿರಣ ಜಾಧವ, ಜಗದೀಶ ಮೆಟಗುಡ್ಡ, ಉಜ್ವಲಾ ಬಡವನಾಚೆ ಸಾಥ್ ನೀಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಂಗಡಿ, ‘ಭಾರತಕ್ಕಾಗಿ ನಡೆಯುತ್ತಿರುವ ಚುನಾವಣೆ ಇದು. ದೇಶದ ರಕ್ಷಣೆ ಹಾಗೂ ಅಭಿವೃದ್ಧಿಗಾಗಿ ಮತದಾರರು ಬಿಜೆಪಿ ಗೆಲ್ಲಿಸಲಿದ್ದಾರೆ. ನನ್ನನ್ನು ಬೆಂಬಲಿಸಲಿದ್ದಾರೆ’ ಎಂದು ವಿಶ್ವಾಶ ವ್ಯಕ್ತಪಡಿಸಿದರು.

ಕಾಂಗ್ರೆಸ್‌ಗೆ ನೆಲೆ ಇಲ್ಲ: ಕೋರೆ ಟೀಕೆ
‘ಕಾಂಗ್ರೆಸ್‌ಗೆ ಈಗ ದೇಶದಲ್ಲಿ ನೆಲೆ ಇಲ್ಲ. ಹೀಗಾಗಿಯೇ ಆ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಕ್ಷೇತ್ರದಲ್ಲಿ ಸೋಲುವ ಭೀತಿಯಿಂದ ಬೇರೆ ಕ್ಷೇತ್ರ ನೋಡಿಕೊಂಡಿದ್ದಾರೆ’ ಎಂದು ರಾಜ್ಯಸಭಾ ಸದಸ್ಯ, ಬಿಜೆಪಿಯ ಪ್ರಭಾಕರ ಕೋರೆ ಟೀಕಿಸಿದರು.

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ನರೇಂದ್ರ ಮೋದಿ ಅವರನ್ನು ಸೋಲಿಸಲು ಹುಟ್ಟಿಕೊಂಡಿರುವ ಮಹಾಘಟಬಂಧನದಲ್ಲಿ ಒಗ್ಗಟ್ಟೇ ಇಲ್ಲ. ರಾಹುಲ್ ಗಾಂಧಿ ಬಚ್ಚಾ, ಅಮೂಲ್‌ ಬೇಬಿ ಎಂದು ಪಶ್ಚಿಮ ಬಂಗಾಳ ಹಾಗೂ ಕೇರಳದ ಮುಖ್ಯಮಂತ್ರಿಗಳು ವ್ಯಂಗ್ಯ ಮಾಡಿದ್ದಾರೆ. ಅಂತಹ ವ್ಯಕ್ತಿ ಪ್ರಧಾನಿಯಾಗುತ್ತಾರೆಯೇ?’ ಎಂದು ಕೇಳಿದರು.

‘ರಾಜ್ಯದಲ್ಲೂ ಕಾಂಗ್ರೆಸ್‌ನವರಿಗೆ ಅಭ್ಯರ್ಥಿಗಳೇ ಸಿಗುತ್ತಿಲ್ಲ. ಧಾರವಾಡ, ದಾವಣಗೆರೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯ ವಿಚಾರದಲ್ಲಿ ಗೊಂದಲವಾಗಿದೆ. ಇದರಿಂದಾಗಿ ನಮಗೆ ಲಾಭವಾಗಲಿದೆ. ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರಿಗೆ ದೇವಸ್ಥಾನಗಳು ನೆನಪಾಗುತ್ತಿವೆ. ಮತಕ್ಕಾಗಿ ದೇವಸ್ಥಾನಕ್ಕೆ ಹೋಗುತ್ತಿದ್ದಾರೆ. ಅವರು ಏನೇ ಸಾಹಸ ಮಾಡಿದರೂ ಗೆಲುವು ನಮ್ಮದೇ. ಜಿಲ್ಲೆಯ ಎರಡು ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ’ ಎಂದು ವಿಶ್ವಾಸ ವ್ಯಕ್ತಪ‍ಡಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !