ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಹತ್ಯೆ ನಿಷೇಧ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಿ: ದಯಾನಂದ ಸ್ವಾಮೀಜಿ

Last Updated 16 ಅಕ್ಟೋಬರ್ 2021, 14:20 IST
ಅಕ್ಷರ ಗಾತ್ರ

ಬೆಳಗಾವಿ: ‘ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ (ಗೋಹತ್ಯೆ ನಿಷೇಧ) ಕಾಯ್ದೆ ಅನುಷ್ಠಾನಕ್ಕೆ ಜಿಲ್ಲೆಯೂ ಸೇರಿದಂತೆ ರಾಜ್ಯದಾದ್ಯಂತ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಬೇಕು’ ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಮತ್ತು ಬಸವ ಧರ್ಮ ಜ್ಞಾನ ಪೀಠದ ಅಧ್ಯಕ್ಷ ದಯಾನಂದ ಸ್ವಾಮೀಜಿ ಒತ್ತಾಯಿಸಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘35 ವರ್ಷಗಳ ಸತತ ಹೋರಾಟದ ಫಲಶ್ರುತಿಯಾಗಿ ಕಾಯ್ದೆ ತರಲಾಗಿದೆ. ಆ ಪ್ರಕಾರ, ರಾಜ್ಯದಲ್ಲಿ ಯಾರೂ, ಎಲ್ಲಿಯೂ, ಯಾವುದೇ ಕಾರಣಕ್ಕೂ ಯಾವುದೇ ವಯಸ್ಸಿನ ಆಕಳು (ಗೋವು), ಕರುಗಳು (ಗಂಡಿರಲಿ-ಹೆಣ್ಣಿರಲಿ), ಎತ್ತು-ಗೂಳಿ ಅಥವಾ ಗೋವಂಶದ ಹತ್ಯೆ ಮಾಡುವಂತಿಲ್ಲ’ ಎಂದರು.

‘13 ವರ್ಷದ ಒಳಗಿನ ಎಮ್ಮೆ ಮತ್ತು ಕೋಣ ಹಾಗೂ ಕರುಗಳನ್ನೂ ಕೊಲ್ಲುವಂತಿಲ್ಲ. ಅಲ್ಲದೇ 13 ವರ್ಷ ಮೇಲಿನ ಎಮ್ಮೆ-ಕೋಣಗಳನ್ನು ಕೊಲ್ಲಲು ರಾಜ್ಯ ಸರ್ಕಾರದ ಸಕ್ಷಮ ಪ್ರಾಧಿಕಾರದ ಪರವಾನಗಿಯನ್ನು ಕಡ್ಡಾಯವಾಗಿ ಪಡೆದಿರಬೇಕು. ಹತ್ಯೆಗಾಗಿ ಜಾನುವಾರು ಮಾರುವಂತಿಲ್ಲ; ಖರೀದಿಸುವಂತಿಲ್ಲ. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ರಾಜ್ಯದೊಳಗೆ ಮತ್ತು ಹೊರಗೆ ಸಾಗಿಸುವಂತಿಲ್ಲ. ಜಾನುವಾರುಗಳ ಸಂರಕ್ಷಣೆಗೆ ಅವಶ್ಯವಿರುವಲ್ಲಿ ಗೋಶಾಲೆ ಸ್ಥಾಪಿಸಬೇಕು. ಜಿಲ್ಲಾಡಳಿತಗಳು ಹಾಗೂ ಪೊಲೀಸ್ ಇಲಾಖೆಯವರು ಇದನ್ನು ಅನುಷ್ಠಾನಗೊಳಿಸಬೇಕು’ ಎಂದು ಒತ್ತಾಯಿಸಿದರು.

‘ಬೆಳಗಾವಿಯಿಂದ ಗೋವಾ, ಮಹಾರಾಷ್ಟ್ರ ಮೊದಲಾದ ಕಡೆಗಳಿಗೆ ಜಾನುವಾರು ಮಾರಾಟ-ಸಾಗಾಣಿಕೆ ಆಗದಂತೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು’ ಎಂದು ಕೋರಿದರು.

‘ಖಾನಾಪುರ ತಾಲ್ಲೂಕಿನ ಕಕ್ಕೇರಿ ಭಿಷ್ಠಾದೇವಿ ಜಾತ್ರೆಯಲ್ಲಿ ಪ್ರಾಣಿ ಬಲಿ ತಡೆ ಸಂಪೂರ್ಣ ಯಶಸ್ವಿಯಾಗಿದೆ. ಹಿಂದೆ ಅದು ರಕ್ತಸಿಕ್ತ ಕಟುಕರಕೇರಿ ಎನಿಸುತ್ತಿತ್ತು. ಈಗ ಪ್ರಾಣಿಬಲಿ ಮುಕ್ತ- ರಕ್ತಮುಕ್ತ ಸುಕ್ಷೇತ್ರವಾಗಿದೆ. ಮೌಢ್ಯ ಹಾಗೂ ಅಂಧಶ್ರದ್ಧೆ ಮೂಲಕ ಪ್ರಾಣಿ ಬಲಿ ಪರಂಪರೆಗೆ ಕಡಿವಾಣ ಬಿದ್ದಿದೆ. ಇದೊಂದು ಐತಿಹಾಸಿಕ ಬದಲಾವಣೆಯಾಗಿದೆ. ಇದಕ್ಕೆ ಸಹಕರಿಸಿದ ಎಲ್ಲರೂ ಅಭಿನಂದನಾರ್ಹರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT