ತ್ಯಾಜ್ಯ ವಿಲೇವಾರಿ ನಿಯಮ ಕಟ್ಟುನಿಟ್ಟಾಗಿ ಪಾಲಿಸಿ

ಬೆಳಗಾವಿ: ‘ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದ ನಿಯಮ ಹಾಗೂ ಕಾನೂನುಗಳ ಬಗ್ಗೆ ಅಧಿಕಾರಿಗಳು ಅರಿತು ಅವುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು’ ಎಂದು ನಿವೃತ್ತ ನ್ಯಾಯಾಧೀಶ ಮತ್ತು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ರಾಜ್ಯ ಮಟ್ಟದ ಸಮಿತಿಯ ಅಧ್ಯಕ್ಷ ಸುಭಾಷ್ ಅಡಿ ಸೂಚಿಸಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಹಸಿ ಕಸದಿಂದ ಕಾಂಪೋಸ್ಟ್ ಗೊಬ್ಬರ ತಯಾರಿಕಗೆ ಕ್ರಮ ವಹಿಸಬೇಕು. ಕಡಿಮೆ ಆದಾಯ ಬರುವ ಕಂಪನಿಗಳ ಬದಲಿಗೆ ಹೆಚ್ಚಿನ ಆದಾಯ ನೀಡುವ ಕಂಪನಿಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಬೇಕು. ಒಂದು ವೇಳೆ ಕೃಷಿ ಇಲಾಖೆಯ ನೆರವು ಸಿಗದಿದ್ದಲ್ಲಿ ಕೇಂದ್ರ ರಸಗೊಬ್ಬರ ಸಚಿವಾಲಯದ ಸಹಾಯ ಪಡೆದು ಗೊಬ್ಬರ ಮಾರಾಟ ಮಾಡಬಹುದು’ ಎಂದು ತಿಳಿಸಿದರು.
ಎಲ್ಲರ ಕರ್ತವ್ಯ:
‘ಪ್ರತಿ ಮನೆ, ಹೋಟೆಲ್, ವಾಣಿಜ್ಯ ಮಳಿಗೆಗಳಿಂದ ಹಸಿ ಮತ್ತು ಒಣ ಕಸವನ್ನು ಮೂಲದಲ್ಲೇ ಬೇರ್ಪಡಿಸಬೇಕು. ಕಸ ವಿಂಗಡಣೆ ಮಾಡಿ ಸೂಕ್ತವಾಗಿ ವಿಲೇವಾರಿ ಮಾಡುವುದು ಪ್ರತಿ ನಾಗರಿಕನ ಆದ್ಯ ಕರ್ತವ್ಯವಾಗಿದೆ. ತಿಳಿವಳಿಕೆ ಇಲ್ಲದಿದ್ದರೆ ಅರಿವು ಮೂಡಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು’ ಎಂದು ಹೇಳಿದರು.
‘ಯಾವುದೇ ಹೊಸ ಯೋಜನೆಗೆ ಬಂಡವಾಳಕ್ಕಾಗಿ ಸರ್ಕಾರದಿಂದಲೇ ನಿರೀಕ್ಷಿಸದೆ ನಿಮ್ಮ ವ್ಯಾಪ್ತಿಯಲ್ಲಿ ಬರುವಂತಹ ಆದಾಯ ಬಳಸಬೇಕು. ದೂರದೃಷ್ಟಿಯಿಂದ ಯೋಜನೆ ರೂಪಿಸಬೇಕು’ ಸ್ಥಳೀಯ ಸಂಸ್ಥೆಗಳಿಗೆ ಸಲಹೆ ನೀಡಿದರು.
ಗೊಬ್ಬರ ತಯಾರಿಸಿ:
‘ಸ್ವಚ್ಛತೆ ಕುರಿತು ಮನೆಗಳಿಗೆ ಸೀಮಿತವಾಗದೆ ಮದುವೆ ಮಂಟಪ ಹಾಗೂ ಹೋಟೆಲ್‌ಗಳ ಮಾಲೀಕರು ಮತ್ತು ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯವರಿಗೂ ಜಾಗೃತಿ ಮೂಡಿಸಬೇಕು. ಸ್ವಚ್ಛ ಪರಿಸರ ಕಾಪಾಡುವ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಕಟ್ಟುನಿಟ್ಟಿನ ಆದೇಶ ನೀಡಬೇಕು’ ಎಂದು ಸೂಚಿಸಿದರು.
‘ಹಾಸ್ಟೆಲ್, ಪಿ.ಜಿ., ಶಾಲಾ-ಕಾಲೇಜುಗಳಲ್ಲಿ ಸಂಗ್ರಹವಾಗುವ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಸಂಗ್ರಹಿಸಲು ಸಫಾಯಿ ಕರ್ಮಚಾರಿಗಳ ಸುರಕ್ಷತೆಗಾಗಿ ಕೈವಗಸು ಮೊದಲಾದ ಪರಿಕರಗಳನ್ನು ನೀಡಬೇಕು. ಕೆಳಮಹಡಿಗಳಲ್ಲಿ ಕಸದ ತೊಟ್ಟಿ ಬಳಸಬೇಕು. ಸಗಟು ತರಕಾರಿ ಮಾರುಕಟ್ಟೆಯಲ್ಲಿ ದಿನವೂ 25 ಟನ್‌ನಷ್ಟು ಹಸಿ ಕಸ ದೊರೆಯುತ್ತಿದೆ. ಇದರಿಂದ ಉತ್ತಮ ಗುಣಮಟ್ಟದ ಕಾಂಪೋಸ್ಟ್ ಗೊಬ್ಬರ ತಯಾರಿಸಬಹುದು. ಇಂತಹ ಯೋಜನೆಗಳನ್ನು ರೂಪಿಸುವುದರಿಂದ ಹೆಚ್ಚಿನ ಲಾಭ ಪಡೆಯಬಹುದಾಗಿದೆ’ ಎಂದು ಸಲಹೆ ನೀಡಿದರು.
ಅಧಿಕಾರಿಗಳ ನೇಮಕಕ್ಕೆ ಕ್ರಮ:
‘ಅಧಿಕಾರಿಗಳ ಕೊರತೆ ಕುರಿತು ಸಂಬಂಧಿಸಿದ ಇಲಾಖೆ ಅಥವಾ ಸ್ಥಳೀಯ ಸಂಸ್ಥೆಗಳು ಪತ್ರದ ಮೂಲಕ ಮನವಿ ಸಲ್ಲಿಸಿದರೆ, ನೇಮಕಾತಿಗೆ ಕ್ರಮ ವಹಿಸಲಾಗುವುದು’ ಎಂದರು.
‘6 ತಿಂಗಳ ಒಳಗಾಗಿ ಸ್ವಚ್ಛತಾ ಕಾರ್ಯದ ಕುರಿತು ಪ್ರಗತಿ ಸಾಧಿಸಬೇಕು. ಗುರಿ ಸಾಧಿಸದಿದ್ದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
‘ಪ್ರಗತಿ ಕುರಿತಂತೆ ಶೀಘ್ರವೇ ಜಿಲ್ಲಾ ಮಟ್ಟದಲ್ಲಿ ಮತ್ತೊಂದು ಸಭೆ ನಡೆಸಲಾಗುವುದು’ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಎಎಸ್ಪಿ ಅಮರನಾಥ್ ರೆಡ್ಡಿ, ಡಿಸಿಪಿ ಪಿ.ವಿ. ಸ್ನೇಹಾ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಈಶ್ವರ ಉಳ್ಳಾಗಡ್ಡಿ, ಹಿರಿಯ ಪರಿಸರ ಅಧಿಕಾರಿ ವಿಜಯ ಕುಮಾರ್ ಉಪಸ್ಥಿತರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.