ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಪೂರೈಕೆಯಲ್ಲಿ ತೊಂದರೆ ಆಗದಿರಲಿ: ಸಂಸದೆ ಮಂಗಲಾ ಅಂಗಡಿ

‘ದಿಶಾ’ ಸಭೆಯಲ್ಲಿ ಸಂಸದೆ ಮಂಗಲಾ ಅಂಗಡಿ ಸೂಚನೆ
Last Updated 7 ಮಾರ್ಚ್ 2022, 15:13 IST
ಅಕ್ಷರ ಗಾತ್ರ

ಬೆಳಗಾವಿ: ‘ಹಳ್ಳಿಗಳಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಇದಕ್ಕೆ ಪೂರಕವಾಗಿ ಬಾಕಿ ಇರುವ ಎಲ್ಲ ಯೋಜನೆಗಳ ಕಾಮಗಾರಿಗಳನ್ನೂ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು’ ಎಂದು ಸಂಸದೆ ಮಂಗಲಾ ಅಂಗಡಿ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ಜಿ.ಪಂ. ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ(ದಿಶಾ)ಯ 2021-22ನೇ ಸಾಲಿನ 3ನೇ ತ್ರೈಮಾಸಿಕ ಸಭೆಯಲ್ಲಿ ಅವರು ಮಾತನಾಡಿದರು.

‘ಯೋಜನೆಗಳಿಗೆ ಸರ್ಕಾರ ನೀಡಿದ ಅನುದಾನ ಸಮರ್ಪಕ ಬಳಕೆ ಮಾಡಬೇಕು. ಪ್ರತಿ ಗ್ರಾಮಗಳಿಗೆ ಕುಡಿಯುವ ನೀರಿನ ಟ್ಯಾಂಕ್‌ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಅಗತ್ಯವಿದ್ದಲ್ಲಿ ಟ್ಯಾಂಕ್‌ಗಳ ದುರಸ್ತಿ ಮಾಡಬೇಕು’ ಎಂದು ನಿರ್ದೇಶನ ನೀಡಿದರು.

ಪರಿಗಣಿಸಿ:

‘ಜಿಲ್ಲೆಯಲ್ಲಿ ಎಲ್ಲ ಫಲಾನುಭವಿಗಳಿಗೂ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಲ್ಲಿ ಸಬ್ಸಿಡಿಯಲ್ಲಿ ಅಡುಗೆ ಅನಿಲ ಸಿಲಿಂಡರ್‌ಗಳನ್ನು ಒದಗಿಸಬೇಕು. ಬೇಡಿಕೆ ಸಲ್ಲಿಸಿರುವವರನ್ನು ‍ಪರಿಗಣಿಸಬೇಕು’ ಎಂದರು.

‘ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ₹ 930 ಕೋಟಿ ಅನುದಾನ ಮೀಸಲಿಡಲಾಗಿದೆ. ಕೇಂದ್ರ ಸರ್ಕಾರದಿಂದ ₹ 392 ಕೋಟಿ ಹಾಗೂ ರಾಜ್ಯ ಸರ್ಕಾರದಿಂದ ₹ 396.5 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಕಾಮಗಾರಿಗಳಿಗೆ ಒಟ್ಟು ₹ 647.53 ಕೋಟಿ ಅನುದಾನ ಖರ್ಚಾಗಿದೆ’ ಎಂದು ಮಹಾನಗರಪಾಲಿಕೆ ಆಯುಕ್ತ ಡಾ.ರುದ್ರೇಶ್‌ ಘಾಳಿ ತಿಳಿಸಿದರು.

‘ಸ್ಮಾರ್ಟ್ ಸಿಟಿ ಯೋಜನೆಯಡಿ ಒಟ್ಟು 104 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಈವರೆಗೆ ಒಟ್ಟು ₹ 213.31 ಕೋಟಿ ಮೊತ್ತದ 46 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ₹ 715.57 ಕೋಟಿ ಮೊತ್ತದ 57 ಕಾಮಗಾರಿಗಳು ಪ್ರಗತಿಯಲ್ಲಿವೆ ಹಾಗೂ ₹ 1.12 ಕೋಟಿ ಮೊತ್ತದ 1 ಕಾಮಗಾರಿ ಟೆಂಡರ್ ಹಂತದಲ್ಲಿದೆ. ಬಾಕಿ ಇರುವ ಕಾಮಗಾರಿಗಳನ್ನು ಬೇಗನೆ ಪೂರ್ಣಗೊಳಿಸಬೇಕು’ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಸೂಚಿಸಿದರು.

ಕೂಡಲೇ ಕೈಗೆತ್ತಿಕೊಳ್ಳಿ:

‘ಸರ್ವ ಶಿಕ್ಷಣ ಅಭಿಯಾನದಲ್ಲಿ ಶಾಲೆಗಳ ಕೊಠಡಿ ನಿರ್ಮಾಣ ಮಾಡಲಾಗುತ್ತಿದೆ. ಚಿಕ್ಕೋಡಿ ತಾಲ್ಲೂಕಿನ ಅನೇಕ ಕಾಮಗಾರಿಗಳು ಬಾಕಿ ಇವೆ. ಈಗಾಗಲೇ ನಿಗದಿತ ಸಮಯ ಮೀರಿದ್ದು, ಕೂಡಲೇ ಕೈಗೆತ್ತಿಕೊಂಡು ಬಾಕಿ ಕೆಲಸ ಪೂರ್ಣಗೊಳಿಸಬೇಕು’ ಎಂದು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ತಿಳಿಸಿದರು.

‘ನರೇಗಾ ಯೋಜನೆಯಲ್ಲಿ ಕೆರೆಗಳ ಅಭಿವೃದ್ಧಿ, ಡಿಜಿಟಲ್ ಗ್ರಂಥಾಲಯಗಳ ಪ್ರಾರಂಭ, ಗ್ರಾಮ ಪಂಚಾಯ್ತಿಗಳಿಗೆ ಹೊಸ ಕಟ್ಟಡ, ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ಮೈದಾನ, ಕೊಠಡಿಗಳು, ಅಡಗೆ ಮನೆ ನಿರ್ಮಾಣ ಯೋಜನೆ ರೂಪಿಸಲಾಗಿದೆ’ ಎಂದು ಜಿ.ಪಂ. ಸಿಇಒ ಎಚ್‌.ವಿ. ದರ್ಶನ್‌ ಮಾಹಿತಿ ನೀಡಿದರು.

‘ನರೇಗಾ, ಫಸಲ್‌ ಭಿಮಾ, ಪಿಎಂ ಆವಾಸ್ ಯೋಜನೆ, ವಾಟರ್ ಟ್ಯಾಂಕ್ ನಿರ್ಮಾಣ, ಕೃಷಿ ಬೋರ್‌ವೆಲ್, ವ್ಯವಸ್ಥಿತ ಶಾಲೆ, ರಸ್ತೆ, ಚರಂಡಿ ನಿರ್ಮಾಣ ಹಾಗೂ ಪೋಷಣ್ ಅಭಿಯಾನ, ಸೇರಿದಂತೆ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಸಾರ್ವಜನಿಕರಿಗೆ ಸಮರ್ಪಕವಾಗಿ ಒದಗಿಸಬೇಕು‘ ಎಂದು ಅಣ್ಣಾಸಾಹೇಬ್‌ ಸೂಚಿಸಿದರು.

‘ಪೋಷಣ್ ಅಭಿಯಾನ ಅನುಷ್ಠಾನದಲ್ಲಿ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ಬಸವರಾಜ ವರವಟ್ಟೆ ತಿಳಿಸಿದರು.

ಡಿಎಚ್‌ಒ ಡಾ.ಶಶಿಕಾಂತ ಮುನ್ಯಾಳ ಇದ್ದರು.

ಅನುಕೂಲ ಕಲ್ಪಿಸಿ

ಯೋಜನೆಗಳಿಗೆ ಸರ್ಕಾರದಿಂದ ಬಿಡುಗೆಯಾದ ಅನುದಾನ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು. ಜನರಿಗೆ ಅನುಕೂಲ ಕಲ್ಪಿಸಬೇಕು.

–ಈರಣ್ಣ ಕಡಾಡಿ, ರಾಜ್ಯಸಭಾ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT