ಶನಿವಾರ, ಡಿಸೆಂಬರ್ 5, 2020
25 °C
ಬೆಳಗಾವಿಯ ವಾಲಿಬಾಲ್ ಪ್ರತಿಭೆಗೆ ’ಏಕಲವ್ಯ’ ಪ್ರಶಸ್ತಿ

ನೆರವಾಯ್ತು ಪ್ರತಿಭೆಯ ‘ಎತ್ತರ’

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಶಾಲೆಯಲ್ಲಿದ್ದಾಗ ಎತ್ತರವಿದ್ದೆ. ಹೀಗಾಗಿ, ಶಿಕ್ಷಕರು ನನ್ನನ್ನು ವಾಲಿಬಾಲ್‌ ತಂಡದಲ್ಲಿ ಸೇರಿಸಿಕೊಂಡಿದ್ದರು. ಈ ಕ್ರೀಡೆಯೇ ಇಂದು ನನಗೆ ಜೀವನ ನೀಡಿದೆ ಹಾಗೂ ಪ್ರಶಸ್ತಿ–ಪುರಸ್ಕಾರವನ್ನೂ ತಂದುಕೊಟ್ಟಿದೆ’.

ವಾಲಿಬಾಲ್ ಕ್ರೀಡೆಯಲ್ಲಿನ ಸಾಧನೆಗಾಗಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯಿಂದ 2017ನೇ ಸಾಲಿನ ‘ಏಕಲವ್ಯ’ ಪ್ರಶಸ್ತಿಗೆ ಭಾಜನವಾಗಿರುವ ಇಲ್ಲಿನ ಇಂಡಾಲ್ ನಗರದ ವಿನಾಯಕ ರೋಖಡೆ ಅವರು ಪ್ರತಿಕ್ರಿಯಿಸಿದ್ದು ಹೀಗೆ. 27 ವರ್ಷದ ಅವರು ಪ್ರಸ್ತುತ ಬೆಂಗಳೂರಿನಲ್ಲಿ ಅಂಚೆ ಇಲಾಖೆಯಲ್ಲಿ ಪೋಸ್ಟಲ್ ಅಸಿಸೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಾಲಿಬಾಲ್‌ನಲ್ಲಿ ರಾಜ್ಯ ಮತ್ತು ಭಾರತ ತಂಡವನ್ನು ಪ್ರತಿನಿಧಿಸಿ, ಸಾಧನೆ ತೋರಿದ್ದಾರೆ.

ಉತ್ತೇಜಿಸಿದರು: ಬಿ.ಕಾಂ. ಪದವೀಧರರಾದ ಅವರು, ಕ್ರೀಡೆಯಲ್ಲಿನ ಸಾಧನೆಯಿಂದಾಗಿಯೇ ಸರ್ಕಾರಿ ನೌಕರಿ ಪಡೆದಿದ್ದಾರೆ. ‘ಶಾಲೆಯಲ್ಲಿದ್ದಾಗ ಉಳಿದವರಿಗಿಂತ ಎತ್ತರವಾಗಿದ್ದೆ (ಈಗ 6.1 ಅಡಿ ಎತ್ತರ). ವಾಲಿಬಾಲ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದೆ. ಇದನ್ನು ಗಮನಿಸಿದ ಶಿಕ್ಷಕರು ಹಾಗೂ ಪೋಷಕರು ಉತ್ತೇಜನ ನೀಡುತ್ತಿದ್ದರು. ನಾನು ಬೆಂಗಳೂರಿನಲ್ಲಿ ಕ್ರೀಡಾ ವಿದ್ಯಾರ್ಥಿನಿಲಯಕ್ಕೆ ಸೇರಲು, ಬೆಳಗಾವಿಯಲ್ಲಿ ಮಾರ್ಗದರ್ಶಕರಾಗಿದ್ದ ಬಸವರಾಜ ಹೊಸಮಠ ಕಾರಣ. ಬೆಂಗಳೂರಿನಲ್ಲಿ ಕೋಚ್ ಆಗಿದ್ದ ಕೃಷ್ಣೇಗೌಡ ಅವರು ನನ್ನನ್ನು ಮತ್ತಷ್ಟು ಸುಧಾರಿಸಿದರು. ಇವರೆಲ್ಲರಿಂದಾಗಿ ಸಾಧನೆ ಸಾಧ್ಯವಾಯಿತು’ ಎನ್ನುತ್ತಾರೆ ಅವರು.

ಹಿಂಡಾಲ್ಕೊ ಕಾರ್ಖಾನೆಯಲ್ಲಿ ಕೆಲಸ ಮಾಡಿ ನಿವೃತ್ತರಾಗಿರುವ ಲಕ್ಷ್ಮಿಕಾಂತ ರೋಖಡೆ–ರಾಧಾ ದಂಪತಿಯ ಪುತ್ರ ಇವರು. 2009ರಿಂದ ಬೆಂಗಳೂರಿನ ಕ್ರೀಡಾ ಹಾಸ್ಟೆಲ್‌ನಲ್ಲಿದ್ದಾರೆ. ಹಲವು ಪಂದ್ಯಗಳಲ್ಲಿ ರಾಜ್ಯ ತಂಡ ಪ್ರತಿನಿಧಿಸಿದ್ದಾರೆ. ಸಾಧನೆ ತೋರುವ ಮೂಲಕ ಬೆಳಗಾವಿಯ ಕೀರ್ತಿ ಬೆಳಗಿಸಿದ್ದಾರೆ. 2015ರಿಂದ ಎರಡು ವರ್ಷಗಳು ಭಾರತ ತಂಡವನ್ನು ‍ಪ್ರತಿನಿಧಿಸಿ ಇರಾನ್‌ನಲ್ಲಿ ನಡೆದಿದ್ದ ಸೀನಿಯರ್‌ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಆಡಿದ್ದಾರೆ. ಮಾಯನ್ಮಾರ್‌ನಲ್ಲಿ ಜರುಗಿದ 23 ವರ್ಷ ವಯೋಮಿತಿಯವರ ತಂಡದಲ್ಲಿ ದೇಶ ಪ್ರತಿನಿಧಿಸಿದ್ದಾರೆ.

ದಾಖಲೆ: 2013ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಆಯೋಜಿಸಿದ್ದ ಎಕ್ಸ್‌ಪ್ಲೋರ್ ಟೂರ್ನಿಯಲ್ಲಿ (ಜೂನಿಯರ್) ಭಾರತವನ್ನು ಪ್ರತಿನಿಧಿಸಿದ್ದರು. 2013, 2014ರಲ್ಲಿ ಫೆಡರೇಷನ್‌ ಕಪ್‌ ಪಂದ್ಯದಲ್ಲಿ ಅವರು ಆಡಿದ್ದ ಕರ್ನಾಟಕ ತಂಡ ಮೊಟ್ಟ ಮೊದಲಿಗೆ ಪ್ರಥಮ ಸ್ಥಾನ ಗಳಿಸಿ ದಾಖಲೆ ಬರೆದಿದೆ. ಇದೇ ಟೂರ್ನಿಯಲ್ಲಿ 2016ರಲ್ಲಿ ಈ ತಂಡ   2ನೇ ಸ್ಥಾನ ಗಳಿಸಿದೆ. 2019ರಲ್ಲಿ ಸೀನಿಯರ್‌ ನ್ಯಾಷನಲ್ಸ್‌ನಲ್ಲಿ ಚಿನ್ನದ ಪದಕ ಪಡೆದರು. ಈ ಮೂಲಕ ಈ ಪಂದ್ಯದಲ್ಲಿ ಚಿನ್ನದ ಪದಕ ಪಡೆದ ರಾಜ್ಯದ ಮೊದಲ ಪಟು ಎನ್ನುವ ಹೆಗ್ಗಳಿಕೆಯೂ ಅವರದು. 2020ರಲ್ಲಿ ಫೆಡರೇಷನ್‌ ಕಪ್ ಟೂರ್ನಿಯಲ್ಲಿ ಅವರು ರಾಜ್ಯ ತಂಡವನ್ನು ಮುನ್ನಡೆಸಿದ್ದರು.

ಈವರೆಗೆ ಅವರು 3 ಚಿನ್ನದ ಪದಕ ಹಾಗೂ 1 ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ. 2017ರಲ್ಲಿ ಕರ್ನಾಟಕ ಒಲಿಂಪಿಕ್ಸ್‌ ಸಂಸ್ಥೆ ಪ್ರಶಸ್ತಿಗೂ ಭಾಜನವಾಗಿದ್ದಾರೆ.

‘ಏಕಲವ್ಯ ಪ್ರಶಸ್ತಿ ಸಿಕ್ಕಿರುವುದು ಖುಷಿ ತಂದಿದೆ. ಪೋಷಕರಿಗೆ ಹೆಮ್ಮೆ ನೀಡಿದ್ದು ಸಾರ್ಥಕ ಎನಿಸಿದೆ. ಏನಾದರೂ ಸಾಧನೆ ಮಾಡಬೇಕು ಎಂಬ ಛಲ ಹಿಂದಿನಿಂದಲೂ ಇತ್ತು. ಆ ಹಾದಿಯಲ್ಲಿ ಸಾಗುತ್ತಿದ್ದೇನೆ’ ಎಂದು ‘ಪ್ರಜಾವಾಣಿ’ಯೊಂದಿಗೆ ಸಂತಸ ಹಂಚಿಕೊಂಡರು.

***

ನನ್ನ ಶ್ರಮಕ್ಕೆ ಸರ್ಕಾರ ಪುರಸ್ಕಾರ ನೀಡಿರುವುದಕ್ಕೆ ಹೆಮ್ಮೆಯಾಗುತ್ತಿದೆ. ಮತ್ತಷ್ಟು ಸಾಧನೆಗೆ ಹುಮ್ಮಸ್ಸು ತುಂಬಿದಂತಾಗಿದೆ
ವಿನಾಯಕ ರೋಖಡೆ, ವಾಲಿಬಾಲ್ ಪಟು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.