ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3 ಲಕ್ಷ ಡೋಸ್ ಲಸಿಕೆ ಗುರಿ: ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ

ವಿಶೇಷ ಮೇಳ ಆಯೋಜನೆ ನಾಳೆ; ಗುರಿ ಸಾಧನೆಗೆ ಸೂಚನೆ
Last Updated 15 ಸೆಪ್ಟೆಂಬರ್ 2021, 9:14 IST
ಅಕ್ಷರ ಗಾತ್ರ

ಬೆಳಗಾವಿ: ‘ಸರ್ಕಾರವು ಎಲ್ಲರಿಗೂ ಕೋವಿಡ್ ನಿರೋಧಕ ಲಸಿಕೆ ನೀಡುವ ಮಹತ್ವಾಕಾಂಕ್ಷೆಯೊಂದಿಗೆ ಶುಕ್ರವಾರ (ಸೆ.17) ವಿಶೇಷ ಮೇಳ ಆಯೋಜಿಸಿದೆ. ಜಿಲ್ಲೆಯಲ್ಲಿ ಅಂದು 3 ಲಕ್ಷ ಮಂದಿಗೆ ಡೋಸ್ ಕೊಡುವ ಗುರಿ ಇದ್ದು, ಅದನ್ನು ಸಾಧಿಸುವ ನಿಟ್ಟಿನಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಸೂಚಿಸಿದರು.

ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರರು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳ ಜೊತೆ ಬುಧವಾರ ನಡೆದ ವಿಡಿಯೊ ಸಂವಾದದಲ್ಲಿ ಅವರು ಮಾತನಾಡಿದರು.

‘ಬೆಂಗಳೂರು ಹೊರತುಪಡಿಸಿದರೆ ಜಿಲ್ಲೆಗೆ ಹೆಚ್ಚಿನ ಗುರಿ ನಿಗದಿಪಡಿಸಲಾಗಿದೆ. ಈ ಹಿಂದೆ ನಡೆದಿದ್ದ ವಿಶೇಷ ಲಸಿಕಾ ಅಭಿಯಾನದಲ್ಲಿ ಜಿಲ್ಲೆಯಲ್ಲಿ ಒಂದೇ ದಿನ ಲಕ್ಷ ಮಂದಿಗೆ ಲಸಿಕೆ ನೀಡಿದ್ದು ರಾಜ್ಯದ ಗಮನಸೆಳೆದಿತ್ತು. ಈ ಬಾರಿಯ ಗುರಿಯನ್ನೂ ತಲುಪಬೇಕು’ ಎಂದು ತಿಳಿಸಿದರು.

ಜನರಿಗೆ ಅನುಕೂಲ:

‘ನಗರ ಪ್ರದೇಶಗಳಲ್ಲಿ ಅಂದು ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಲಸಿಕೆ ನೀಡಬೇಕು. ಗ್ರಾಮೀಣ ಪ್ರದೇಶದಲ್ಲೂ ಕಾರ್ಯಕ್ರಮಕ್ಕೆ ವ್ಯವಸ್ಥೆ ಮಾಡಿಕೊಳ್ಳಬೇಕು. ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ‌ ನೀಡಲಾಗುವುದು. ಅಂತೆಯೇ ಪ್ರತಿ ಗ್ರಾಮ ಹಾಗೂ ನಗರದ ಪ್ರದೇಶಗಳಲ್ಲಿ ವಾರ್ಡ್‌ಗಳ ಮಟ್ಟದಲ್ಲಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು’ ಎಂದು ಮಾಹಿತಿ ನೀಡಿದರು.

‘ಬಿಮ್ಸ್, ಕೆ.ಎಲ್.ಇ. ಸೇರಿದಂತೆ ಪ್ರಮುಖ ಆಸ್ಪತ್ರೆಗಳ ನರ್ಸ್‌ಗಳನ್ನು ಪಡೆದುಕೊಳ್ಳಲಾಗುತ್ತಿದೆ. ಅಂತೆಯೇ ತಾಲ್ಲೂಕು ಕೇಂದ್ರಗಳಲ್ಲಿ ಖಾಸಗಿ ಆಸ್ಪತ್ರೆಗಳವರ ಜೊತೆ ಚರ್ಚಿಸಿ ನರ್ಸಿಂಗ್ ಸಿಬ್ಬಂದಿ ಬಳಸಿಕೊಳ್ಳಬೇಕು. ಪಾಲಕರು, ಅಲ್ಪಸಂಖ್ಯಾತ ಸಮುದಾಯದವರಿಗೆ ಕೊಡಿಸಲು ಕ್ರಮ ಕೈಗೊಳ್ಳಬೇಕು. ದೂರದ ಗ್ರಾಮಗಳವರಿಗೆ ಮೊಬೈಲ್ ಲಸಿಕಾ ವಾಹನಗಳನ್ನು ಬಳಸಬೇಕು’ ಎಂದರು.

ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ್ ಘಾಳಿ, ಉಪ ವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ‌ ನಿರ್ದೇಶಕ ಈಶ್ವರ ಉಳ್ಳಾಗಡ್ಡಿ, ಡಿಎಚ್‌ಒ ಡಾ.ಎಸ್.ವಿ. ಮುನ್ಯಾಳ, ಕೃಷಿ ಇಲಾಖೆಯ ಉಪ ನಿರ್ದೇಶಕ ಡಾ.ಎಚ್.ಡಿ. ಕೋಳೆಕರ, ಪಶುಪಾಲನೆ ಇಲಾಖೆಯ ಉಪ ನಿರ್ದೇಶಕ ಡಾ.ಅಶೋಕ‌ ಕೊಳ್ಳಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಬಸವರಾಜ ವರವಟ್ಟಿ, ವಾರ್ತಾ ಇಲಾಖೆಯ ಪ್ರಭಾರ ಉಪ ನಿರ್ದೇಶಕ ಗುರುನಾಥ ಕಡಬೂರ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ರವೀಂದ್ರ ಹಕಾಟಿ, ತಹಶೀಲ್ದಾರ್‌ ಆರ್‌.ಕೆ. ಕುಲಕರ್ಣಿ ಉಪಸ್ಥಿತರಿದ್ದರು.

‘ಸಮೀಕ್ಷೆ ಮೂಲಕ ಮಾಹಿತಿ’

‘ಹಳ್ಳಿಗಳಲ್ಲಿ ಲಸಿಕೆ ಪಡೆದವರು ಹಾಗೂ ಪಡೆಯದಿರುವವರ ಪ್ರಾಥಮಿಕ ಮಾಹಿತಿಯನ್ನು ಸಮೀಕ್ಷೆ ಮೂಲಕ ಸಂಗ್ರಹಿಸಲಾಗಿದೆ. ಅಂತೆಯೆ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲೂ ಸಂಗ್ರಹಿಸಿದರೆ‌ ಮೇಳ ಯಶಸ್ವಿಯಾಗಲಿದೆ. ತಂಡಗಳನ್ನು ರಚಿಸಿ ವಾಹನ ಮತ್ತಿತರ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಕನಿಷ್ಠ 1500 ತಂಡಗಳನ್ನು ನಿಯೋಜಿಸುವ ಅಗತ್ಯವಿದೆ’ ಎಂದು ಜಿ.ಪಂ. ಸಿಇಒ ಎಚ್‌.ವಿ. ದರ್ಶನ್ ತಿಳಿಸಿದರು.

‘ಶಿಕ್ಷಕರನ್ನು ಬಳಸಿಕೊಳ್ಳಿ’

‘ಮಾಹಿತಿ ಅಪ್‌ಲೋಡ್ ಮಾಡಲು‌ ಶಿಕ್ಷಕರನ್ನು ಬಳಸಿಕೊಳ್ಳಬೇಕು. ಆರೋಗ್ಯ ಇಲಾಖೆ‌ ಮಾತ್ರವಲ್ಲ; ಶಿಕ್ಷಣ, ಕಂದಾಯ, ಗ್ರಾಮೀಣಾಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ ಎಲ್ಲ ಅಧಿಕಾರಿಗಳೂ ಭಾಗವಹಿಸಿ ಮೇಳ ಯಶಸ್ವಿಗೊಳಿಸಲು ಕೈಜೋಡಿಸಬೇಕು. ಅಂಗನವಾಡಿ ಕಾರ್ಯಕರ್ತೆಯರು, ಮೇಲ್ವಿಚಾರಕಿಯರು ಜನರಿಗೆ ಮಾಹಿತಿ ನೀಡಿ‌ ಅವರನ್ನು ಕರೆದುಕೊಂಡು ಬರಬೇಕು’ ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಎಚ್ಚರ ವಹಿಸಬೇಕು

ನಿಯೋಜಿತ ಸಿಬ್ಬಂದಿ ಸರಿಯಾದ ಸಮಯಕ್ಕೆ ನಿಗದಿತ ಸ್ಥಳದಲ್ಲಿರಬೇಕು. ಯಾರೊಬ್ಬರೂ ಲಸಿಕೆಯಿಂದ ವಂಚಿತರಾಗದಂತೆ ಎಚ್ಚರಿಕೆ ವಹಿಸಬೇಕು.

–ಎಂ.ಜಿ. ಹಿರೇಮಠ, ಜಿಲ್ಲಾಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT