ಬೆಳಗಾವಿ: ‘ಶಾಲೆಗಳಲ್ಲಿ ಸೆ.6ರಿಂದ 6–8ನೇ ತರಗತಿ ಮಕ್ಕಳಿಗೆ ಭೌತಿಕ ತರಗತಿಗಳು ಆರಂಭವಾಗಲಿವೆ. ಶಿಕ್ಷಕರು ಮಕ್ಕಳು ಮತ್ತು ಶಾಲೆಯ ಕಡೆಗೆ ಹೆಚ್ಚಿನ ಗಮನಹರಿಸಬೇಕು’ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಜಗದೀಶಗೌಡ ಪಾಟೀಲ ತಿಳಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಳಗಾವಿ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ಹಾಗೂ ನಗರ ಬಿಇಒ ಕಚೇರಿಗಳ ಸಹಯೋಗದಲ್ಲಿ ಇಲ್ಲಿನ ಮಹಾಂತ ಭವನದಲ್ಲಿ ಭಾನುವಾರ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಜಿಲ್ಲೆಯ ಎಲ್ಲರೂ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿ ಪಡೆಯುವ ನಿಟ್ಟಿನಲ್ಲಿ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.
‘ಶಿಕ್ಷಣ ಇಲಾಖೆಯ ಎಲ್ಲ ಅಧಿಕಾರಿಗಳು ಉತ್ತಮ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರಿ ನೌಕರರು, ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಂಘಗಳು ಒಂದೇ ನಾಣ್ಯದ ಎರಡು ಮುಖಗಳಾಗಿವೆ. ನಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಮತ್ತಷ್ಟು ಸಂಘಟಿತರಾಗಬೇಕು’ ಎಂದರು.
ಡಿಡಿಪಿಐ ಡಾ.ಎ.ಬಿ. ಪುಂಡಲೀಕ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಫೋಟೊಗೆ ಪೂಜೆ ಸಲ್ಲಿಸಿದರು. ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಿವೃತ್ತ ಶಿಕ್ಷಕರಿನ್ನು ಸತ್ಕರಿಸಲಾಯಿತು. ಎಸ್ಸೆಸ್ಸೆಲ್ಸಿ ಪರೀಕ್ಷೆ ವೇಳೆ ಉತ್ತಮ ಸೇವೆ ಸಲ್ಲಿಸಿದ ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಕರಿಗೆ ‘ಸೇವಾರತ್ನ ಪ್ರಶಸ್ತಿ’ ನೀಡಲಾಯಿತು.
ಡಯಟ್ ಪ್ರಾಚಾರ್ಯ ಎಂ.ಎಂ. ಸಿಂಧೂರ ಇದ್ದರು.
ವಿದ್ಯಾರ್ಥಿಗಳ ಸ್ವಾಗತಕ್ಕೆ ಶಾಲೆಗಳು ಸಜ್ಜು
ಬೆಳಗಾವಿ: ಕೋವಿಡ್-19 ಭೀತಿ ನಡುವೆಯೂ ಸೆ.6 (ಸೋಮವಾರ) ಜಿಲ್ಲೆಯಾದ್ಯಂತ ಹಿರಿಯ ಪ್ರಾಥಮಿಕ ಶಾಲೆ ಆರಂಭಗೊಳ್ಳಲಿವೆ. ವಿದ್ಯಾರ್ಥಿಗಳ ಸ್ವಾಗತಕ್ಕಾಗಿ ವಿದ್ಯಾಮಂದಿರಗಳು ಸಜ್ಜಾಗಿವೆ.
ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 1,232, ಚಿಕ್ಕೋಡಿಯಲ್ಲಿ 1,814 ಹಿರಿಯ ಪ್ರಾಥಮಿಕ ಶಾಲೆಗಳಿದ್ದು, 6ರಿಂದ 8ನೇ ತರಗತಿ ವಿದ್ಯಾರ್ಥಿಗಳು ಭೌತಿಕ ತರಗತಿಗೆ ಹಾಜರಾಗಲು ಅವಕಾಶ ನೀಡಲಾಗಿದೆ. ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಶಾಲಾ ಆಡಳಿತ ಮಂಡಳಿಗಳಿಗೆ ಇಲಾಖೆಯಿಂದ ನಿರ್ದೇಶನ ನೀಡಲಾಗಿದೆ. ಬಹುತೇಕ ಶಾಲೆಗಳಲ್ಲಿ ಸ್ವಚ್ಛತಾ ಕಾರ್ಯ ನಡೆದಿದೆ. ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗಿದೆ.
‘ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಎಲ್ಲ ಶಾಲೆಗಳನ್ನು ಸ್ಯಾನಿಟೈಸ್ ಮಾಡಲಾಗಿದೆ. ಪರಸ್ಪರ ಅಂತರ ಕಾಯ್ದುಕೊಂಡು ಕಲಿಕಾ ಚಟುವಟಿಕೆ ಕೈಗೊಳ್ಳಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಶಿಕ್ಷಕರು ಕೋವಿಡ್ ಲಸಿಕೆ ಪಡೆದಿದ್ದಾರೆ. ಮಕ್ಕಳು ನಿರ್ಭೀತಿಯಿಂದ ಶಾಲೆಗೆ ಹಾಜರಾಗಬೇಕು’ ಎಂದು ಡಿಡಿಪಿಐಗಳಾದ ಡಾ.ಎ.ಬಿ. ಪುಂಡಲೀಕ ಮತ್ತು ಗಜಾನನ ಮನ್ನಿಕೇರಿ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.