ಮಂಗಳವಾರ, ಸೆಪ್ಟೆಂಬರ್ 28, 2021
24 °C
ಕೆಎಲ್‌ಇ ಸಂಸ್ಥೆಯಿಂದ ಚಿಕ್ಕೋಡಿಯಲ್ಲಿ ಸ್ಥಾಪನೆ

ಗಡಿ ಭಾಗದ ಚಿಕ್ಕೋಡಿಯಲ್ಲಿ ತಾಂತ್ರಿಕ ಶಿಕ್ಷಣ

ಸುಧಾಕರ ತಳವಾರ Updated:

ಅಕ್ಷರ ಗಾತ್ರ : | |

Prajavani

ಚಿಕ್ಕೋಡಿ: ಗಡಿ ಭಾಗದ ಚಿಕ್ಕೋಡಿಯಲ್ಲಿ 1984ರಲ್ಲಿ ಕೆಎಲ್ಇ ಸಂಸ್ಥೆಯು ಪ್ರಾರಂಭಿಸಿರುವ ಚಿದಾನಂದ ಬಸಪ್ರಭು ಕೋರೆ ಪಾಲಿಟೆಕ್ನಿಕ್ ಕಾಲೇಜು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಮಟ್ಟದ ತಾಂತ್ರಿಕ ಶಿಕ್ಷಣ ನೀಡುತ್ತಿದೆ.

ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರ ಕನಸಿನಂತೆ ಆರಂಭವಾದ ಈ ಕಾಲೇಜು ಗುಣಾತ್ಮಕ ಶಿಕ್ಷಣ ನೀಡುವ ಮೂಲಕ ಅತ್ಯುತ್ತಮ ಪಾಲಿಟೆಕ್ನಿಕ್ ಎಂಬ ಪ್ರಶಸ್ತಿಗೆ ಭಾಜನವಾಗಿದೆ. ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಹೆಸರು ಮಾಡುತ್ತಿದೆ.

ಇಲ್ಲಿ ಸದ್ಯ 767 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 95 ಜನ ಶಿಕ್ಷಕ, ಶಿಕ್ಷಕೇತರರು ಮಕ್ಕಳಿಗೆ ತಾಂತ್ರಿಕ ಶಿಕ್ಷಣ ನೀಡುತ್ತಿದ್ದಾರೆ. ವಿದ್ಯಾರ್ಥಿಗಳ ಸರ್ವಾಂಗೀಣ ವಿಕಸನಕ್ಕಾಗಿ ರಾಷ್ಟ್ರಮಟ್ಟದ ಕಾರ್ಯಾಗಾರಗಳನ್ನು, ‘ನೀವೇ ಮಾಡಿ ನೀಡಿ’ ರಾಜ್ಯಮಟ್ಟದ ತಾಂತ್ರಿಕ ವಸ್ತುಪ್ರದರ್ಶನ, ರಾಜ್ಯಮಟ್ಟದ ಅಂತರ ಪಾಲಿಟೆಕ್ನಿಕ್ ಕ್ರೀಡಾಕೂಟಗಳನ್ನು ನಡೆಸಲಾಗುತ್ತಿದೆ. ವಿದ್ಯಾರ್ಥಿಗಳ ಕೌಶಲ ವೃದ್ಧಿಗೂ ಆದ್ಯತೆ ನೀಡಲಾಗುತ್ತಿದೆ.

ಈ ಪಾಲಿಟೆಕ್ನಿಕ್ ಅಖಿಲ ಭಾರತ ತಾಂತ್ರಿಕ ಪರಿಷತ್‌ನಿಂದ ಮಾನ್ಯತೆ ಪಡೆದಿದೆ. ರಾಜ್ಯ ಸರ್ಕಾರದ ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದಲ್ಲಿ ನೋಂದಣಿಯಾಗಿ, ಅನುಮೋದನೆಯನ್ನೂ ಗಳಿಸಿದೆ. ಇಲ್ಲಿ 8 ಕೋರ್ಸ್‌ಗಳಿವೆ. ಆರ್ಕಿಟೆಕ್ಚರ್, ಎಂಜಿನಿಯರಿಂಗ್, ಆಟೊಮೊಬೈಲ್ ಎಂಜಿನಿಯರಿಂಗ್, ಸಿವಿಲ್ ಎಂಜಿನಿಯರಿಂಗ್,  ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್‌ ಎಂಜಿನಿಯರಿಂಗ್, ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್, ಮೆಕ್ಯಾನಿಕಲ್ ಎಂಜಿನಿಯರಿಂಗ್, ಮೆಕಾಟ್ರಾನಿಕ್ಸ್‌ ಎಂಜಿನಿಯರಿಂಗ್‌ ಕೋರ್ಸ್‌ಗಳ ಮೂಲಕ ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತಿದೆ.

ಡಿಪ್ಲೊಮಾ ಕೋರ್ಸ್‌ ಜೊತೆಗೆ ವಾಹನ ಚಾಲನಾ ತರಬೇತಿ, ಸಿಎನ್‌ಸಿ ಮಷಿನ್‌ ಆಪರೇಟ್ ತರಬೇತಿ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಮೂಲಕ ತರಬೇತಿಗಳನ್ನು ನಿರ್ವಹಿಸಿಕೊಂಡು ಬರುತ್ತಿದೆ. ಇದು ‘ಸೆಂಟರ್ ಫಾರ್ ಎಕ್ಸಲೆನ್ಸ್’ ಎಂದೂ ಗುರುತಿಸಿಕೊಂಡು ಗಮನಸೆಳೆದಿದೆ.

‘2019-20ನೇ ಸಾಲಿನಲ್ಲಿ 210 ವಿದ್ಯಾರ್ಥಿಗಳು ವಿವಿಧ ಕಂಪನಿಗಳು ನಡೆಸಿದ ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾಗಿ ವಿವಿಧೆಡೆ ಕೆಲಸ ಕಂಡುಕೊಂಡಿದ್ದಾರೆ. 2021-22ನೇ ಸಾಲಿನಲ್ಲೂ ಈಗಾಗಲೇ 130 ವಿದ್ಯಾರ್ಥಿಗಳು ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾಗಿದ್ದು, ಇನ್ನೂ ಪ್ರಕ್ರಿಯೆ ಪ್ರಗತಿಯಲ್ಲಿದೆ. ಇಲ್ಲಿ ವಿದ್ಯಾರ್ಥಿಗಳ ಏಳಿಗೆಗೆ ಹಾಗೂ ಸುಧಾರಿತ ತಾಂತ್ರಿಕ ಶಿಕ್ಷಣಕ್ಕೆ ಬೇಕಾದ ಸೌಕರ್ಯಗಳಿವೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಇದನ್ನು ಬಳಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳುತ್ತಿದ್ದಾರೆ’ ಎಂದು ಪ್ರಾಚಾರ್ಯ ದರ್ಶನಕುಮಾರ ಬಿಳ್ಳೂರ ಹೇಳುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು