ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳವು: ಇಬ್ಬರು ಅಂತರರಾಜ್ಯ ಕಳ್ಳರ ಬಂಧನ

Published 6 ಜನವರಿ 2024, 13:40 IST
Last Updated 6 ಜನವರಿ 2024, 13:40 IST
ಅಕ್ಷರ ಗಾತ್ರ

ಬೆಳಗಾವಿ: ‘ಜಿಲ್ಲೆಯ ವಿವಿಧೆಡೆ ನಡೆದ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ, ಇಬ್ಬರು ಅಂತರರಾಜ್ಯ ಕಳ್ಳರನ್ನು ಬೈಲಹೊಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ. ₹15 ಲಕ್ಷ ಮೌಲ್ಯದ 300 ಗ್ರಾಂ ತೂಕದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಹೇಳಿದರು.

‘ಮಹಾರಾಷ್ಟ್ರದ ದೀಪಕ ಪವಾರ ಹಾಗೂ ರಾಹುಲ‌ ಜಾಧವ ಅವರನ್ನು ಬಂಧಿಸಲಾಗಿದೆ. ಬೈಲಹೊಂಗಲ, ನೇಸರಗಿ, ಹುಕ್ಕೇರಿ ಮತ್ತು ಸಂಕೇಶ್ವರದಲ್ಲಿ ಮನೆ ಕಳ್ಳತನ ಮಾಡಿರುವುದಾಗಿ ಅವರು ಒಪ್ಪಿಕೊಂಡಿದ್ದಾರೆ. ತಲೆಮರೆಸಿಕೊಂಡಿರುವ ಈ ಗುಂಪಿನ ನಾಯಕನ ಪತ್ತೆಗಾಗಿ ಹುಡುಕಾಟ ಆರಂಭಿಸಿದ್ದೇವೆ’ ಎಂದು ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘2023ರ ನವೆಂಬರ್, ಡಿಸೆಂಬರ್‌ನಲ್ಲಿ ಬೈಲಹೊಂಗಲ ಹಾಗೂ ಚಿಕ್ಕೋಡಿ ತಾಲ್ಲೂಕುಗಳಲ್ಲಿ ಮನೆ ಕಳ್ಳತನ ಪ್ರಕರಣ ವರದಿಯಾಗಿದ್ದವು. ಆರೋಪಿಗಳ ಪತ್ತೆಗಾಗಿ ಪೊಲೀಸರ ವಿಶೇಷ ತಂಡ ರಚಿಸಲಾಗಿತ್ತು. ಬೆಳಗಾವಿಯಲ್ಲಿ ವಿಧಾನಮಂಡಲ ಚಳಿಗಾಲದ ಅಧಿವೇಶನ ನಡೆದಿದ್ದರಿಂದ ಈ ತಂಡಗಳನ್ನು ಬೇರೆ ರಾಜ್ಯಗಳಿಗೆ ಕಳುಹಿಸಲು ವಿಳಂಬವಾಗಿತ್ತು. ಬೈಲಹೊಂಗಲ ಪೊಲೀಸ್ ಇನ್‌ಸ್ಪೆಕ್ಟರ್‌ ಪಿ.ವಿ.ಸಾಲಿಮಠ ನೇತೃತ್ವದ ತಂಡ ಮಹಾರಾಷ್ಟ್ರದ ಜಾಲ್ನಾ ಜಿಲ್ಲೆಯಲ್ಲಿ ಈಗ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ’ ಎಂದು ಹೇಳಿದರು.

‘ನಾವು ಹಗಲಿನಲ್ಲಿ ಆಯಾ ಪ್ರದೇಶದಲ್ಲಿ ಸುತ್ತಾಡಿ ಮನೆಗಳ ಮಾಹಿತಿ ಕಲೆಹಾಕುತ್ತಿದ್ದೆವು. ರಾತ್ರಿ ಮನೆ ಮುರಿದು ಕಳ್ಳತನ ಮಾಡುತ್ತಿದ್ದೆವು ಎಂದು ಆರೋಪಿಗಳು ವಿಚಾರಣೆ ವೇಳೆ ತಿಳಿಸಿದ್ದಾರೆ. ಇಬ್ಬರ ಬಂಧನದಿಂದ 10 ಮನೆ ಕಳ್ಳತನ ಪ್ರಕರಣ ಭೇದಿಸಲಾಗಿದೆ. ತನಿಖೆ ಪೂರ್ಣಗೊಂಡ ಬಳಿಕ ಇನ್ನಷ್ಟು ಪ್ರಕರಣ ಗೊತ್ತಾಗುವ ಸಾಧ್ಯತೆಯಿದೆ’ ಎಂದರು.

‘ಜಿಲ್ಲೆಯಲ್ಲಿ ಕಳ್ಳತನ ಪ್ರಕರಣಗಳಿಗೆ ಕಡಿವಾಣ ಹಾಕಲು ಅಗತ್ಯ ಕ್ರಮ ಕೈಗೊಂಡಿದ್ದೇವೆ. ಮಧ್ಯರಾತ್ರಿ 1ರಿಂದ ನಸುಕಿನ ಜಾವ 4ರವರೆಗೆ ಪೊಲೀಸರು ಗಸ್ತು ತಿರುಗುತ್ತಿದ್ದಾರೆ’ ಎಂದು ಹೇಳಿದರು.

‘ಬೆಳಗಾವಿ ನಗರದಲ್ಲಿ ನಡೆದ ಮನೆ ಕಳ್ಳತನ ಪ್ರಕರಣಗಳಲ್ಲಿ ಮಹಾರಾಷ್ಟ್ರದ ಆರೋಪಿಗಳ ಪಾತ್ರವಿರುವುದು ಕಂಡುಬಂದಿಲ್ಲ. ಕಬ್ಬು ಕಟಾವಿಗಾಗಿ ಮಹಾರಾಷ್ಟ್ರದಿಂದ ಹಲವು ತಂಡಗಳು ಜಿಲ್ಲೆಗೆ ಬಂದು ಬೀಡುಬಿಟ್ಟಿದ್ದು, ಅವರ ಮೇಲೂ ನಿಗಾ ವಹಿಸಿದ್ದೇವೆ’ ಎಂದರು.

‘ಅಪರಾಧಗಳ ಪ್ರಮಾಣ ತಗ್ಗಿಸಲು ಜಿಲ್ಲೆಯಾದ್ಯಂತ ಹೆಚ್ಚಿನ ಸಿ.ಸಿ.ಟಿ.ವಿ ಕ್ಯಾಮೆರಾಗಳು ಅಗತ್ಯವಿರುವ ಹಾಳಾಗಿರುವ ಕ್ಯಾಮೆರಾ ಬದಲಿಸಲು ಮತ್ತು ಕಣ್ಗಾವಲಿಗಾಗಿ ಹೊಸ ಕ್ಯಾಮೆರಾ ಅಳವಡಿಸಲು ಸ್ಥಳೀಯ ಸಂಸ್ಥೆಗಳು ಹೆಚ್ಚಿನ ಅನುದಾನ ಮೀಸಲಿಡಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದೇವೆ’ ಎಂದು ಪ್ರಶ್ನಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT