ಬೆಳಗಾವಿ: ‘ಮುಡಾ ಪ್ರಕರಣದಿಂದ ನಾನು ಹೆದರಿದ್ದೇನೆ. ನನ್ನ ಕಾರಿನಲ್ಲೇ ದಾಖಲೆಗಳನ್ನು ಇಟ್ಟುಕೊಂಡು ಓಡಾಡುತ್ತಿದ್ದೇನೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದ್ದಾರೆ. ಬಹುಶಃ ಅವರಷ್ಟು ಸುಳ್ಳು ಹೇಳುವವರು ಈ ದೇಶದಲ್ಲೇ ಹುಟ್ಟಿಲ್ಲ. ಬೇಕಾದರೆ ನೀವೇ ನನ್ನ ಕಾರಿನಲ್ಲಿ ಬಂದು ನೋಡಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.
ನಗರದಲ್ಲಿ ಸೋಮವಾರ ಸಂಜೆ ಮಾತನಾಡಿದ ಅವರು, ‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನೇ ವಿಶೇಷ ತನಿಖಾ ಆಯೋಗ ರಚಿಸಿದ್ದೇನೆ. ಕುಮಾರಸ್ವಾಮಿ ಬಳಿ ದಾಖಲೆಯಿದ್ದರೆ, ಆ ಆಯೋಗಕ್ಕೆ ಕೊಡಲಿ. ಅವರು ಸುಮ್ಮನೇ ‘ಹಿಟ್ ಅಂಡ್ ರನ್’ ಮಾಡುತ್ತಾರೆ. ಯಾವುದನ್ನೂ ತಾರ್ತಿಕ ಅಂತ್ಯಕ್ಕೆ ಒಯ್ದ ಉದಾಹರಣೆ ಇಲ್ಲ’ ಎಂದರು.
‘ನನ್ನ ಪತ್ನಿಯ ಗಮನಕ್ಕೆ ತಾರದೇ ನಮ್ಮ ಭೂಮಿ ನಿವೇಶನವಾಗಿ ಪರಿವರ್ತಿಸಿ ಹಂಚಿಕೆ ಮಾಡಿದ್ದಾರೆ. ಅದನ್ನು ಹಂಚಿಕೆ ಮಾಡಿದವರು ಹಾಗೂ ಆಗ ಮುಡಾ ಅಧ್ಯಕ್ಷರಿದ್ದರಿದ್ದವರೂ ಬಿಜೆಪಿಯವರೇ. ಆಗ ಬಿಜೆಪಿಯದ್ದೇ ಸರ್ಕಾರ ಇತ್ತು. ಆದರೆ, ಈಗ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ’ ಎಂದರು.