ಶನಿವಾರ, ಅಕ್ಟೋಬರ್ 1, 2022
20 °C

ಮೋದಿ ಅವರಂಥ ದೇಶಭಕ್ತ ‍ಪ್ರಧಾನಿ ಇನ್ನೊಬ್ಬರಿಲ್ಲ: ಸಚಿವ ಗೋವಿಂದ ಕಾರಜೋಳ ಹೇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ದೇಶದಲ್ಲಿ ಇದೂವರೆ‌ಗಿನ ಯಾವುದೇ ಪ್ರಧಾನಿ, ನರೇಂದ್ರ ಮೋದಿ ಅವರಷ್ಟು ಪ್ರಖರ ದೇಶಭಕ್ತ ಆಗಿರಲಿಲ್ಲ. ಅವರ ಬಗ್ಗೆ ಮಾತನಾಡುವ ಅರ್ಹತೆ ಕಾಂಗ್ರೆಸ್ಸಿಗರಿಗೆ ಇಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದರು.

‘ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ನಾನು ಕಂಡ ಪ್ರಖರ ದೇಶಭಕ್ತ ಪ್ರಧಾನಿಯೆಂದರೆ ಅದು ಮೋದಿ ಅವರೇ. ಮಹಮ್ಮದ್‌ ಅಲಿ ಜಿನ್ನಾ ಜೊತೆ ಕೈ ಜೋಡಿಸಿದವರು ಕಾಂಗ್ರೆಸ್ಸಿಗರು. ದೇಶ ಒಡೆದವರು ಕಾಂಗ್ರೆಸ್ಸಿಗರು. ಇಂಥವರು ಹರ್‌ಘರ್‌ ತಿರಂಗಾ ಬಗ್ಗೆ ಮಾತನಾಡುವುದು ಸರಿಯೇ?’ ಎಂದು ಅವರು ನಗದಲ್ಲಿ ಬುಧವಾರ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

‘ಸಿದ್ದರಾಮಯ್ಯ ಅವರ ಈಗಿನ ಆರೋಪಗಳು ವಿಚಿತ್ರವಾಗಿವೆ. ಕಾಂಗ್ರೆಸ್ಸಿಗರಿಗೆ ಅಷ್ಟು ದೇಶಭಕ್ತಿ ಇದ್ದರೆ ದೇಶ ಹೋಳಾಗುತ್ತಿರಲಿಲ್ಲ. ತಾವು ಅಹಿಂದ ನಾಯಕ ಎಂದು ಪದೇಪದೇ ಹೇಳಿಕೊಳ್ಳುತ್ತಾರೆ. ಆದರೆ, ಮೋದಿ ಅವರು ಇವರಿಗಿಂತ ದೊಡ್ಡ ಅಹಿಂದ ನಾಯಕ’ ಎಂದರು.

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತಮ ಆಡಳಿತ ನೀಡುತ್ತಿದ್ದಾರೆ. ಇದನ್ನು ಅರಗಿಸಿಕೊಳ್ಳುವ ಸಾಮರ್ಥ್ಯ ಕಾಂಗ್ರೆಸ್‌ ನಾಯಕರಿಗೆ ಇಲ್ಲ. ಹೀಗಾಗಿ, ಮುಖ್ಯಮಂತ್ರಿ ಬದಲಾವಣೆಯ ಗಾಳಿಸುದ್ದಿ ಹರಡಿದ್ದಾರೆ. ಇವರಿಗೆಲ್ಲೋ ಭ್ರಮೆ’ ಎಂದೂ ಮೂದಲಿಸಿದರು.

‘ಶೇಕಡ 40 ಕಮಿಷನ್‌ ಸರ್ಕಾರ ಎಂದು ಪದೇಪದೇ ಆರೋಪಿಸುತ್ತಾರೆ. ಆದರೆ, ಇದರ ಬಗ್ಗೆ ಒಂದು ಪ್ರಕರಣ ಕೂಡ ಇಲ್ಲ. ನಾವು ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದ್ದೇವೆ. ಆರೋಪ ಮಾಡುವುದು ಅವರ ಹುಟ್ಟುಗುಣ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು