ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯುಷ್ಮಾನ್‌ ಯೋಜನೆಗೆ ‘ಬಾಲಗ್ರಹ‌’

ಎರಡೂವರೆ ತಿಂಗಳಾದರೂ ಫಲಾನುಭವಿಗಳಿಗೆ ಸಿಗದ ಚೀಟಿ
Last Updated 7 ಜನವರಿ 2019, 11:23 IST
ಅಕ್ಷರ ಗಾತ್ರ

ಬೆಳಗಾವಿ: ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ‘ಆಯುಷ್ಮಾನ್‌ ಭಾರತ್‌–ಕರ್ನಾಟಕ ಯೋಜನೆ’ ಜಾರಿಯಾಗಿ ಎರಡೂವರೆ ತಿಂಗಳು ಕಳೆದಿದ್ದರೂ, ಫಲಾನುಭವಿಗಳಿಗೆ ಸ್ಮಾರ್ಟ್‌ ಕಾರ್ಡ್‌ ವಿತರಣೆ ಕಾರ್ಯದಲ್ಲಿ ಗಮನಾರ್ಹ ಪ್ರಗತಿಯಾಗಿಲ್ಲ. ಚೀಟಿ ದೊರೆಯದ ಕಾರಣ, ಫಲಾನುಭವಿ ಗುರುತಿಸುವಿಕೆಯಲ್ಲಿ ಗೊಂದಲ ಏರ್ಪಟ್ಟಿದೆ. ಇದರಿಂದಾಗಿ ‘ಬಾಲಗ್ರಹ’ಪೀಡಿತವಾಗಿದೆ.

‌ಆಯುಷ್ಮಾನ್‌ ಭಾರತ್‌ ಜತೆ ಆರೋಗ್ಯ ಕರ್ನಾಟಕ ಯೋಜನೆಯು ವಿಲೀನವಾಗಿ ಅ.30ರಿಂದ ಜಾರಿಯಾಗಿದೆ. ಎಲ್ಲ ವರ್ಗದ ರೋಗಿಗಳಿಗೂ ಗುಣಮಟ್ಟದ ಚಿಕಿತ್ಸೆ ಕಲ್ಪಿಸುವ ಉದ್ದೇಶದಿಂದ ಜಾರಿಗೊಂಡಿರುವ ಯೋಜನೆ ಇದು.

ಗುರುತಿಸಿದ ರೋಗಿಗಳಿಗೆ ಯೋಜನೆಯಡಿ ಕಾರ್ಡ್‌ಗಳನ್ನು ವಿತರಿಸಬೇಕು. ಚೀಟಿ ಹೊಂದಿರುವ ಬಿಪಿಎಲ್‌ ವರ್ಗದವರಿಗೆ ಚಿಕಿತ್ಸೆಯನ್ನು ಉಚಿತವಾಗಿಯೂ, ಎಪಿಎಲ್‌ ವರ್ಗದವರಿಗೆ ಶೇ. 30ರಷ್ಟು ವೆಚ್ಚದ ಚಿಕಿತ್ಸೆಯನ್ನು ಉಚಿತವಾಗಿ ಒದಗಿಸಲಾಗುವುದು ಎಂದು ಯೋಜನೆಯಲ್ಲಿ ಘೋಷಿಸಲಾಗಿದೆ. ಚೀಟಿಗಳು ಕೈಸೇರದೇ ಇರುವುದು ಫಲಾನುಭವಿಗಳಲ್ಲಿ ನಿರಾಸೆ ಮೂಡಿಸಿದೆ. ಅಲ್ಲದೇ, ಎಲ್ಲಿ ನೋಂದಾಯಿಸಬೇಕು ಹಾಗೂ ಕಾರ್ಡ್‌ಗಳನ್ನು ಪಡೆದುಕೊಳ್ಳುವುದು ಹೇಗೆ ಎನ್ನುವ ಕುರಿತು ಆರೋಗ್ಯ ಇಲಾಖೆಯಿಂದ ಪ್ರಚಾರ ಮಾಡುವ ಕಾರ್ಯವೂ ಪರಿಣಾಮಕಾರಿಯಾಗಿ ನಡೆದಿಲ್ಲ.

ನಿರ್ದಿಷ್ಟ ಆಸ್ಪತ್ರೆಗಳಲ್ಲಿ:

ಎಲ್ಲ ವರ್ಗದವರಿಗೂ ಈ ಯೋಜನೆಯಿಂದ ಅನುಕೂಲವಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಲಭ್ಯವಿಲ್ಲದ ಸಂದರ್ಭದಲ್ಲಿ ಮಾತ್ರ ರೆಫರಲ್‌ ಕಾರ್ಡ್‌ ಪಡೆದು ಹತ್ತಿರದ ನೋಂದಾಯಿತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು. ತೀವ್ರ ತುರ್ತು ಚಿಕಿತ್ಸೆಗಾಗಿ ನೇರವಾಗಿ ನಿರ್ದಿಷ್ಟ (ಎಂಪ್ಯಾನಲ್ಡ್‌) ಖಾಸಗಿ ಆಸ್ಪತ್ರೆಗೆ ಹೋಗಬಹುದು. ಈ ಯೋಜನೆಯಡಿ ಹಲವು ಚಿಕಿತ್ಸೆಗಳು ಲಭ್ಯ ಇವೆ.

ನೋಂದಾಯಿಸಿದ ಬಿಪಿಎಲ್‌ ಕುಟುಂಬಗಳ ಸದಸ್ಯರಿರುವ ಒಂದು ಅರ್ಹತಾ ಕುಟುಂಬಕ್ಕೆ ಪ್ರಾಥಮಿಕ, ನಿರ್ದಿಷ್ಟ ದ್ವಿತೀಯ ಹಾಗೂ ತೃತೀಯ ಹಂತದ ಚಿಕಿತ್ಸೆಗಾಗಿ ವಾರ್ಷಿಕ ₹ 5 ಲಕ್ಷವರೆಗಿನ ಚಿಕಿತ್ಸೆ ಉಚಿತವಾಗಿ ದೊರೆಯಲಿದೆ. ಎಪಿಎಲ್‌ ಫಲಾನುಭವಿಗಳನ್ನು ಸಾಮಾನ್ಯ ರೋಗಿ ಎಂದು ಪರಿಗಣಿಸಲಾಗುತ್ತದೆ. ಎಪಿಎಲ್‌ ವರ್ಗದವರಿಗೆ ಚಿಕಿತ್ಸಾ ವೆಚ್ಚವನ್ನು ಶೇ. 30ಕ್ಕೆ ಮಿತಿಗೊಳಿಸಲಾಗಿದೆ. ಇನ್ನುಳಿದ ಶೇ.70ರಷ್ಟು ವೆಚ್ಚವನ್ನು ರೋಗಿಯೇ ಭರಿಸಬೇಕಾಗುತ್ತದೆ. ಇದರ ವಾರ್ಷಿಕ ಮಿತಿ ₹ 1.5 ಲಕ್ಷ ಮಾತ್ರ.

ನೋಂದಣಿಗೆ ಕ್ರಮ:

‘ಸ್ಮಾರ್ಟ್‌ ಕಾರ್ಡ್‌ ನೀಡುವ ಕಾರ್ಯದಲ್ಲಿ ವಿಳಂಬವಾಗಿದೆ. ಸದ್ಯಕ್ಕೆ ನಗರದ 4 ಬೆಳಗಾವಿ ಒನ್‌ ಕೇಂದ್ರಗಳಲ್ಲಿ ‌ನೋಂದಣಿ ಮಾಡಿಸಬಹುದಾಗಿದೆ. ಆಧಾರ್‌, ಬಿಪಿಎಲ್‌ ಚೀಟಿ ತೆಗೆದುಕೊಂಡು ಹೋಗಿ ನೋಂದಾಯಿಸಬಹುದು. ಇದಕ್ಕಾಗಿ ಕೇಂದ್ರದವರು ₹ 35 ಶುಲ್ಕ ವಿಧಿಸುತ್ತಾರೆ. ಭಾವಚಿತ್ರವಿರುವ ಸ್ಮಾರ್ಟ್‌ ಕಾರ್ಡ್‌ ಮುದ್ರಿಸಿ ಕೊಡುತ್ತಾರೆ’ ಎಂದು ಡಿಎಚ್‌ಒ ಡಾ.ಅಪ್ಪಾಸಾಬ ನರಹಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿಲ್ಲೆಯಲ್ಲಿ ಕೆಎಲ್‌ಇ ಸೇರಿದಂತೆ ವಿವಿಧ 21 ಖಾಸಗಿ ಆಸ್ಪತ್ರೆಗಳನ್ನು ಯೋಜನೆಯಡಿ ಗುರುತಿಸಲಾಗಿದೆ. ಫಲಾನುಭವಿಗಳಿಗೆ ಅಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ. ಈವರೆಗೆ 4ಸಾವಿರ ಮಂದಿ ನೋಂದಾಯಿಸಿ, ಕಾರ್ಡ್‌ ಪಡೆದುಕೊಂಡಿದ್ದಾರೆ. ಸರ್ಕಾರದ ಸೂಚನೆ ಪ್ರಕಾರ, ಜಿಲ್ಲಾಸ್ಪತ್ರೆ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ನೋಂದಣಿ ಕೇಂದ್ರ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ಇದಕ್ಕಾಗಿ ಕಂಪ್ಯೂಟರ್‌ ಮೊದಲಾದ ಪರಿಕರಗಳನ್ನು ಖರೀದಿಸಲಾಗುತ್ತಿದೆ. ಜ. 25ರ ಒಳಗೆ ಎಲ್ಲ ನೋಂದಣಿ ಕಾರ್ಯ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT