ಗುರುವಾರ, 8 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಗೋಜಿಕೊಪ್ಪ ಸರ್ಕಾರಿ ಶಾಲೆ ಮಾದರಿ: ಪಾಠದೊಂದಿಗೆ ಆಟದಲ್ಲೂ ಸೈ

Last Updated 20 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ರಾಮದುರ್ಗ(ಬೆಳಗಾವಿ): ತಾಲ್ಲೂಕಿನಲ್ಲಿ ಮಾದರಿ ಎನಿಸಿರುವ ಭಾಗೋಜಿಕೊಪ್ಪ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಠ್ಯದೊಂದಿಗೆ ಕ್ರೀಡೆಗಳಿಗೂ ಒತ್ತು ನೀಡುತ್ತಿದೆ. ಅದರಲ್ಲೂ ಖೋಖೋಆಟದಲ್ಲಿ ಹೆಚ್ಚಿನ ಹೆಸರು ಮಾಡಿದೆ.

ಶಾಲಾ ಪಠ್ಯಕ್ರಮದ ಪಾಠಗಳಲ್ಲಿ ಹೆಚ್ಚು ಹೆಸರು ಮಾಡಿದ ಇತರ ಶಾಲೆಗಳಿಗೆ ಪೈಪೋಟಿ ನೀಡಿರುವ ಶಾಲೆಯ ವಾತಾವರಣ ಮುದ ನೀಡುತ್ತದೆ. ಹಚ್ಚ ಹಸಿರಿನ ಸಿರಿ ಇದೆ. ಮಕ್ಕಳ ಆಟಕ್ಕೆ ಪ್ರಾಮುಖ್ಯತೆ ಕೊಡಲಾಗುತ್ತಿದೆ. ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹದ ನೀರೆರೆಯಲಾಗುತ್ತಿದೆ.

ಗ್ರಾಮವು ತಾಲ್ಲೂಕಿನ ಅಂಚಿನ ಊರು. ಎರಡೂವರೆಯಿಂದ ಮೂರು ಸಾವಿರ ಜನಸಂಖ್ಯೆ ಇಲ್ಲಿದೆ. ಈ ಗ್ರಾಮದಲ್ಲಿನ 100x100 ಅಡಿ ಜಾಗಯಲ್ಲಿ ಈ ಶಾಲೆಯಲ್ಲಿ 1ರಿಂದ 8ನೇ ತರಗತಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 233ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದೆ. ಅಚ್ಚುಕಟ್ಟಾದ ಶಾಲಾ ಕೊಠಡಿಗಳನ್ನು ಹೊಂದಿದೆ. ಜೊತೆಗೆ ಶಾಲಾ ಆವರಣದಲ್ಲೇಖೋಖೋಮೈದಾನ ನಿರ್ಮಿಸಿ ನಿತ್ಯವೂ ಮಕ್ಕಳಿಗೆ ತಾಲೀಮು ಮಾಡಿಸಲಾಗುತ್ತಿದೆ. ಶಾಲೆಯ ಸಹ ಶಿಕ್ಷಕ ಅಶೋಕ ಬೂದಿ ಖೋಖೋನಿರ್ಣಾಯಕರ ಪರೀಕ್ಷೆ ಪಾಸು ಮಾಡಿಕೊಂಡು 6 ಬಾರಿ ರಾಷ್ಟ್ರಮಟ್ಟದ ಖೋಖೋಕ್ರೀಡಾಕೂಟದಲ್ಲಿ ನಿರ್ಣಾಯಕರಾಗಿ ಭಾಗವಹಿಸಿದ್ದಾರೆ. ಅಲ್ಲಿನ ಅನುಭವವನ್ನು ಮಕ್ಕಳಿಗೆ ಧಾರೆ ಎರೆಯುತ್ತಿದ್ದಾರೆ.

8 ಕೊಠಡಿಗಳಿವೆ. ಎಂಟು ಜನ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ಈ ಶಾಲೆ ಇಷ್ಟೊಂದು ಕ್ರೀಡೆಗೆ ಮುಂದಾಗಲು ಹಿಂದೆ ಇದ್ದ ದೈಹಿಕ ಶಿಕ್ಷಣ ಶಿಕ್ಷಕ ಭಾಗವಾನ್‌ ಅವರ ಪ್ರೇರಣೆಯೇ ಹೆಚ್ಚು ಎನ್ನುತ್ತಾರೆ ಅಲ್ಲಿವರು. ಗ್ರಾಮಸ್ಥರು ಸಹ ಖೋಖೋಕ್ರೀಡೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಅದರ ಫಲವಾಗಿಯೇ ಶಾಲೆಯ ಬಸವರಾಜ ಮನಗುತ್ತಿ ಮತ್ತು ಮಹ್ಮದರಫೀಕ ಮುಲ್ಲಾ ಮಿನಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿ ಚಿನ್ನದ ಪದಕ ಗಳಿಸಿಕೊಂಡಿದ್ದಾರೆ. 14 ವರ್ಷದೊಳಗಿನವರಿಗೆ ನಡೆಯುವ ರಾಷ್ಟ್ರೀಯ ಮಟ್ಟದ ಖೋಖೋಕ್ರೀಡೆಗಳಲ್ಲಿ ಶಾಲೆಯ ಸಿದ್ಧಾರೂಢ ಕಪ್ಪತ್ತಿ 6 ಬಾರಿ, ಶರೀಪ ಯಲಿಗಾರ 4 ಬಾರಿ, ದರ್ಶನ ತಿಗಡಿ 2 ಬಾರಿ, ಮನೋಜ ಕೊಪ್ಪದ ಒಮ್ಮೆ ಪಾಲ್ಗೊಂಡು ಉತ್ತಮ ಪ್ರದರ್ಶನ ನೀಡಿದ್ದಾರೆ.

ಶಾಲೆಯ ಪ್ರಗತಿ ಗಮನಿಸಿದ ಸುತ್ತಲಿನ ಗ್ರಾಮಗಳ ಪಾಲಕರು ಮಕ್ಕಳನ್ನು ಇಲ್ಲಿಗೆ ಸೇರಿಸುತ್ತಿದ್ದಾರೆ. ಈ ವರ್ಷದ ಉತ್ತಮ ನಲಿಕಲಿ ಕಲಿಕಾ ಕೇಂದ್ರ ಎಂಬ ಪ್ರಶಸ್ತಿಯೂ ಶಾಲೆಗೆ ದೊರೆತಿದೆ. ಇದು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT