ಬೆಳಗಾವಿ: ನಗರಕ್ಕೆ ಪ್ರವಾಸಿ ಭವನ ಮಂಜೂರಾಗಿ ಆರು ವರ್ಷ ಕಳೆದಿದೆ. ಆದರೆ, ಕಾಮಗಾರಿ ಕೈಗೊಳ್ಳಲು ಇಂದಿಗೂ ಜಾಗವೇ ಸಿಕ್ಕಿಲ್ಲ.
ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕರ ಕಚೇರಿಗೆ ಬೆಳಗಾವಿಯಲ್ಲಿ ಸ್ವಂತ ಕಟ್ಟಡವಿಲ್ಲ. ಜಿಲ್ಲೆಯ ಪ್ರವಾಸಿ ತಾಣಗಳ ಕುರಿತು ಸಮಗ್ರವಾಗಿ ಮಾಹಿತಿ ನೀಡಲು ಸೂಕ್ತ ವ್ಯವಸ್ಥೆಯೂ ಇಲ್ಲ. ಇದಕ್ಕೆ ಪರಿಹಾರ ಒದಗಿಸಲೆಂದು ರಾಜ್ಯ ಸರ್ಕಾರ 2018–19ನೇ ಸಾಲಿನಲ್ಲಿ ಬೆಳಗಾವಿಗೆ ಪ್ರವಾಸಿ ಭವನ ಮಂಜೂರುಗೊಳಿಸಿ, ₹2 ಕೋಟಿ ಅನುದಾನ ಘೋಷಿಸಿತ್ತು. ಪ್ರಥಮ ಹಂತವಾಗಿ ₹1 ಕೋಟಿ ಬಿಡುಗಡೆಗೊಳಿಸಿತ್ತು. ಆದರೆ, ಜಾಗದ ಅಲಭ್ಯತೆಯಿಂದ ಕಾಮಗಾರಿಯೇ ಹಿನ್ನಡೆಯಾಗಿದೆ.
‘ಬೆಳಗಾವಿಯಲ್ಲಿ ನಿರ್ಮಾಣವಾಗಲಿರುವ ಪ್ರವಾಸಿ ಭವನದಲ್ಲಿ ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕರ ಕಚೇರಿ, ಉಪ ನಿರ್ದೇಶಕರ ಕಚೇರಿ, ಇನ್‌ಫಾರ್ಮೇಷನ್ ಕಿಯಾಸ್ಕ್, ಜಿಲ್ಲೆಯ ಪ್ರವಾಸಿ ತಾಣಗಳ ಕುರಿತು ಸಂಕ್ಷಿಪ್ತವಾಗಿ ಮಾಹಿತಿ ನೀಡಬಲ್ಲ ಮ್ಯೂಸಿಯಂ, ಕಾನ್ಫರೆನ್ಸ್ ಹಾಲ್ ಮತ್ತಿತರ ಕಾಮಗಾರಿ ಕೈಗೊಳ್ಳಲು ಉದ್ದೇಶಿಸಿದ್ದೆವು. ಆದರೆ, ಸೂಕ್ತ ಜಾಗ ಸಿಗದ್ದರಿಂದ ಕಾಮಗಾರಿ ಆರಂಭಿಸಲಾಗಿಲ್ಲ’ ಎಂದು ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.
ಸುವರ್ಣಸೌಧದಲ್ಲೇ ಕಾರ್ಯನಿರ್ವಹಣೆ: ಈ ಹಿಂದೆ ಬೆಳಗಾವಿ ನಗರದಲ್ಲೇ ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕರ ಕಚೇರಿ ಕಾರ್ಯನಿರ್ವಹಿಸುತ್ತಿತ್ತು. ಆದರೆ, ಬಾಡಿಗೆ ಕಟ್ಟಡದಲ್ಲಿ ಇದ್ದ ಕಾರಣ ಮೂರು ವರ್ಷಗಳ ಹಿಂದೆ ಸುವರ್ಣ ವಿಧಾನಸೌಧಕ್ಕೆ ಅದನ್ನು ಸ್ಥಳಾಂತರಿಸಲಾಗಿದೆ. ನೆಲಮಹಡಿಯ ಜಾಗದಲ್ಲಿ ಕಚೇರಿ ಕೆಲಸ ಮಾಡುತ್ತಿದೆ. ಜಂಟಿ ನಿರ್ದೇಶಕರ ಕೊಠಡಿ ಮಾತ್ರ ಸೌಧದ ಮೂರನೇ ಮಹಡಿಯಲ್ಲಿದೆ.
ವಿವಿಧ ಕೆಲಸಗಳ ನಿಮಿತ್ತ ಪ್ರವಾಸೋದ್ಯಮ ಇಲಾಖೆಯ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಗದಗ, ಹಾವೇರಿ, ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಅಧಿಕಾರಿಗಳು ಇಲ್ಲಿಗೆ ಆಗಮಿಸುತ್ತಾರೆ. ವಿವಿಧ ಯೋಜನೆಗಳಡಿ ಅರ್ಜಿ ಸಲ್ಲಿಸಲು ಮತ್ತು ಮಾಹಿತಿ ಪಡೆಯಲು ಸಾರ್ವಜನಿಕರೂ ಬರುತ್ತಾರೆ.
ಆದರೆ, ಅಧಿಕಾರಿಗಳು ಮತ್ತು ಸಿಬ್ಬಂದಿ ನೆಲಮಹಡಿ ಹಾಗೂ ಮೂರನೇ ಮಹಡಿಯಲ್ಲಿ ಎರಡೂ ಕಡೆ ಇರುವ ಕಾರಣ ಅವರು ಎಡತಾಕುವಂತಾಗಿದೆ. ಈ ಕಚೇರಿ ಇಕ್ಕಟ್ಟಾದ ಜಾಗದಲ್ಲಿರುವ ಕಾರಣ, ಕಡತಗಳ ನಿರ್ವಹಣೆಗೂ ತೊಡಕಾಗಿದೆ.
ಬೆಳಗಾವಿಯಲ್ಲಿ ಪ್ರವಾಸಿ ಭವನ ನಿರ್ಮಾಣಕ್ಕಾಗಿ ನಿವೇಶನ ಒದಗಿಸುವಂತೆ ಮಹಾನಗರ ಪಾಲಿಕೆ ಹಾಗೂ ಬುಡಾದವರೊಂದಿಗೆ ಮಾತುಕತೆ ನಡೆಸಿದ್ದೇವೆಸೌಮ್ಯಾ ಬಾಪಟ್ ಜಂಟಿ ನಿರ್ದೇಶಕಿ ಪ್ರವಾಸೋದ್ಯಮ ಇಲಾಖೆ ಬೆಳಗಾವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.