ಮಂಗಳವಾರ, ಡಿಸೆಂಬರ್ 7, 2021
19 °C

ಮತೀಯ ಗೂಂಡಾಗಿರಿ: ದಾಳಿಗೊಳಗಾಗಿದ್ದ ಕೋಳಿಯಂಗಡಿ ಮಾಲೀಕನಿಗೆ ದ್ವಿಚಕ್ರವಾಹನ ಡಿಕ್ಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಹೊರವಲಯದ ಯಮನಾಪುರ ಗ್ರಾಮದಲ್ಲಿ ಕೋಳಿಮಾಂಸದ ಅಂಗಡಿ ಇಟ್ಟುಕೊಂಡಿರುವ ಹಸನ್‌ಸಾಬ್‌ ದ್ವಿಚಕ್ರವಾಹನದಲ್ಲಿ ಹೋಗುವಾಗ, ಮತ್ತೊಂದು ದ್ವಿಚಕ್ರವಾಹನ ಡಿಕ್ಕಿಯಾಗಿ ಗಾಯಗೊಂಡು ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಮೀಪದ ದೇವಸ್ಥಾನದಲ್ಲಿ ನವರಾತ್ರಿ ಆಚರಣೆ ಕಾರ್ಯಕ್ರಮದ ಸಂದರ್ಭದಲ್ಲಿ ಕೋಳಿಮಾಂಸದ ಅಂಗಡಿ ತೆರೆದಿದ್ದ ಕಾರಣಕ್ಕೆ ಹಿಂದೂ ಯುವಕರ ಗುಂಪೊಂದು ಹಸನ್‌ ಅವರ ಅಂಗಡಿ ಮೇಲೆ ದಾಳಿ ಮಾಡಿ, ಬ್ಯಾನರ್‌ ಹರಿದುಹಾಕಿತ್ತು. ಆ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಇದರ ಬೆನ್ನಲ್ಲೇ ಮಂಗಳವಾರ ರಾತ್ರಿ ಅಪಘಾತಕ್ಕೆ ಒಳಗಾಗಿದ್ದಾರೆ.

ಅವರು ನಗರದಿಂದ ಪತ್ನಿಯೊಂದಿಗೆ ಯಮನಾಪುರ ಕಡೆಗೆ ಹೋಗುವಾಗ ಶ್ರೀನಗರ ಉದ್ಯಾನದ ಬಳಿಯಲ್ಲಿ ಈ ಘಟನೆ ನಡೆದಿದೆ. ‘ದ್ವಿಚಕ್ರವಾಹನದಲ್ಲಿ ವೇಗವಾಗಿ ಬಂದ ಇಬ್ಬರು ಡಿಕ್ಕಿ ಮಾಡಿದರು. ಇದರಿಂದ ನಾವಿಬ್ಬರೂ ಬಿದ್ದೆವು. ಪತಿಯ ಎಡಗಾಲು ಮತ್ತಿತರ ಕಡೆಗಳಲ್ಲಿ ಗಾಯವಾಗಿದೆ. ನನಗೆ ಸಣ್ಣಪುಟ್ಟ ಗಾಯವಾಗಿದೆ. ಡಿಕ್ಕಿ ಮಾಡಿದವರು ನಮ್ಮ ಕಡೆಗೆ ತಿರುಗಿಯೂ ನೋಡದೆ, ಸಹಾಯಕ್ಕೂ ಬಾರದೆ (ಹಿಟ್ ಅಂಡ್ ರನ್) ಹೋದರು. ಇದೊಂದು ಪೂರ್ವಯೋಜಿತ ಕೃತ್ಯದಂತೆ ಎನಿಸುತ್ತಿದೆ’ ಎಂದು ಹಸನ್ ಪತ್ನಿ ಅಫ್ಸಾನಾ ಆರೋಪಿಸಿದ್ದಾರೆ.

‘ಸ್ಥಳದಲ್ಲಿದ್ದ ಕೆಲವರ ಸಹಾಯದಿಂದ ನಾವು ಆಸ್ಪತ್ರೆಗೆ ಹೋದೆವು’ ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು