ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ | ಅನಧಿಕೃತ ಕ್ಲಿನಿಕ್‌ ಬಂದ್‌, ನಕಲಿ ವೈದ್ಯನ ಬಂಧನ

Published 25 ಜೂನ್ 2024, 16:04 IST
Last Updated 25 ಜೂನ್ 2024, 16:04 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಭಡಕಲ ಗಲ್ಲಿಯಲ್ಲಿ ಹಲವು ವರ್ಷಗಳಿಂದ ಇದ್ದ ‘ಶಿವಾ ಕ್ಲಿನಿಕ್’ ಎಂಬ ಅನಧಿಕೃತ ಕ್ಲಿನಿಕ್ ಮೇಲೆ ಅಧಿಕಾರಿಗಳು ದಾಳಿ ನಡೆಸಿ, ಬೀಗ ಜಡಿದಿದ್ದು ಅಲ್ಲದೇ ಉಮೇಶ ಆಚಾರ್ಯ ಎಂಬ ನಕಲಿ ವೈದ್ಯನನ್ನು ಬಂಧಿಸಿದರು.

‘ಶಿವಾ ಕ್ಲಿನಿಕ್‌ ತೆರೆಯಲು ನಿಯಮಾನುಸಾರ ಅನುಮತಿ ಪಡೆದಿಲ್ಲ. ಅಲ್ಲಿ ಅಗತ್ಯ ಸೂಕ್ತ ಸೌಕರ್ಯಗಳಿಲ್ಲ. ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಮಾಣಪತ್ರಗಳೂ ಇಲ್ಲ. ಸಿಬ್ಬಂದಿ ವೈದ್ಯಕೀಯ ಶಿಕ್ಷಣವೂ ಪಡೆದಿಲ್ಲ. ಈ ಅನಧಿಕೃತ ಕ್ಲಿನಿಕ್ ಪಕ್ಕದಲ್ಲೇ ದೊಡ್ಡ ಆಸ್ಪತ್ರೆ ಇದೆ. ಅದು ಅನಧಿಕೃತ ಎಂಬ ಸಂಶಯವಿದ್ದು, ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ ಕೋಣಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ದಾಳಿ ನಡೆಸಿದ ವೇಳೆ ಕ್ಲಿನಿಕ್‌ನಲ್ಲಿ ರೋಗಿಗಳನ್ನು ದಾಖಲು ಮಾಡಿಕೊಳ್ಳಲಾಗಿತ್ತು. ಕೂದಲು ಉದುರುವುದು, ನರ ದೌರ್ಬಲ್ಯ, ಸೌಂದರ್ಯ ವೃದ್ಧಿ ಸೇರಿ ಹಲವು ಸಮಸ್ಯೆಗಳಿಗೆ ಉಪಚಾರ ಮಾಡಿದ ದಾಖಲೆಗಳು ಸಿಕ್ಕಿವೆ. ವಿವಿಧ ರೀತಿಯ ಔಷಧಿ, ಮಾತ್ರೆ, ಪುಡಿಯನ್ನು ರೋಗಿಗಳಿಗೆ ನೀಡಿದ್ದಾರೆ’ ಎಂದರು.

ಬೆಳಗಾವಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಂಜಯ ಡುಮ್ಮಗೋಳ, ಜಿಲ್ಲಾ ಆಯುಷ್‌ ಅಧಿಕಾರಿ ಡಾ.ಶ್ರೀಕಾಂತ ಸುಣಧೋಳಿ, ನೋಡಲ್‌ ಅಧಿಕಾರಿ ಡಾ.ವಿಶ್ವನಾಥ ಭೋವಿ, ತಹಶೀಲ್ದಾರ್‌ ಸಿದ್ರಾಯ ಬೋಸಗಿ, ಉಪವಿಭಾಗಾಧಿಕಾರಿ ಬಸವಣ್ಣೆಪ್ಪ ಕಲಶೆಟ್ಟಿ ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸಿದರು.

ನಕಲಿ ವೈದ್ಯನಿಗೆ ₹1 ಲಕ್ಷ ದಂಡ, ಒಂದು ವಾರ ಜೈಲು

ಬೆಳಗಾವಿ: ಚಿಕ್ಕೋಡಿ ತಾಲ್ಲೂಕಿನ ಕೆರೂರಿನ ನಕಲಿ ವೈದ್ಯನಿಗೆ ಒಂದು ವಾರ ಜೈಲು ಶಿಕ್ಷೆ ಮತ್ತು ₹1 ಲಕ್ಷ ದಂಡ ವಿಧಿಸಿ ಜಿಲ್ಲಾ ಕೆಪಿಎಂಇ ನೋಂದಣಿ ಮತ್ತು ಕುಂದುಕೊರತೆ ಪರಿಹಾರ ಪರಿಹಾರ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ಮಂಗಳವಾರ ಆದೇಶ ಹೊರಡಿಸಿದ್ದಾರೆ.

ರಿಯಾಜ್‌ ಮುಲ್ಲಾ ಶಿಕ್ಷೆಗೆ ಗುರಿಯಾದವ. ಚಿಕ್ಕೋಡಿ ತಾಲ್ಲೂಕು ಆರೋಗ್ಯಾಧಿಕಾರಿ ಮಾರ್ಚ್‌ 23ರಂದು ಈ ಕ್ಲಿನಿಕ್‌ ಮೇಲೆ ದಾಳಿ ನಡೆಸಿದ್ದರು. ಆಲೋಪಥಿ ಔಷಧ ವಶಕ್ಕೆ ಪಡೆದಿದ್ದರು. ರಿಯಾಜ್‌ ವೈದ್ಯಕೀಯ ಪದವಿ ಮತ್ತು ಕೆಪಿಎಂಇ ನೋಂದಣಿ ಇಲ್ಲದೇ ಚಿಕಿತ್ಸೆ ನೀಡುತ್ತಿದ್ದ ಎಂದು ಜಿಲ್ಲಾ ಕೆಪಿಎಂಇ ನೋಂದಣಿ ಮತ್ತು ಕುಂದುಕೊರತೆ ಪರಿಹಾರ ಪರಿಹಾರ ಪ್ರಾಧಿಕಾರಕ್ಕೆ ಮಾರ್ಚ್‌ 25ರಂದು ವರದಿ ಸಲ್ಲಿಸಿದ್ದರು. ಪ್ರಾಧಿಕಾರ ಸಮಿತಿ ವಿಚಾರಣೆ ನಡೆಸಿದಾಗ, ಆರೋಪಿ ತಪ್ಪೊಪ್ಪಿಕೊಂಡ.

ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನೋಂದಣಿ ಕಾಯ್ದೆ 2007, 2009, ಕಾಯ್ದೆಯ ತಿದ್ದುಪಡಿ ಅಧಿಸೂಚನೆ 2018ರ ನಿಯಮ 19 ಉಪನಿಯಮ 1ರ ತಿದ್ದುಪಡಿ ಅಧಿಸೂಚನೆ, 2018ರ ಅಧಿನಿಯಮ 17 ಸೆಕ್ಷನ್‌ 19ರ ಉಪನಿಯಮದಂತೆ ಶಿಕ್ಷೆ ವಿಧಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT