ಬೆಳಗಿನ ಜಾವದಲ್ಲಿ ಎದ್ದು ಭಗವಂತನ ನೆನೆಯುವುದರಿಂದ ನಮಗೆ ಯಾವುದೇ ರೀತಿಯ ಕಷ್ಟಗಳು ಬರುವುದಿಲ್ಲ. ನಮಗೆ ಆಗುವ ಅಪಾಯಗಳು ತಪ್ಪುತ್ತವೆ. ಸದಾಕಾಲ ಭಗವಂತನ ಸ್ಮರಣೆ ನಮ್ಮನ್ನು ಜಾಗೃತರನ್ನಾಗಿಸುತ್ತದೆ. ನಿರಂತರವಾಗಿ ಇಷ್ಟಲಿಂಗ ನೋಡುವುದರಿಂದ ನಮ್ಮಲ್ಲಿರುವ ಚೈತನ್ಯ ಶಕ್ತಿ ವೃದ್ಧಿಸುತ್ತದೆ. ನಮ್ಮನ್ನು ಕ್ರಿಯಾಶೀಲರನ್ನಾಗಿಸುತ್ತದೆ.
ಇಷ್ಟಲಿಂಗ ಪೂಜೆಯಾದ ನಂತರ ಜಂಗಮದಾಸೋಹ ಮಾಡಬೇಕು. ಅವಗ ನಮ್ಮ ಪೂಜೆ ಸಾರ್ಥಕವಾಗುತ್ತದೆ. ನಿತ್ಯವೂ ಸದಾಚಾರಿಯಾಗಿದ್ದುಕೊಂಡು ಸತ್ಯ ಶುದ್ಧ ಕಾಯಕ ಮಾಡುತ್ತ, ಶಿವಶರಣರ ಸೇವೆ ಮಾಡಬೇಕು. ಸೇವೆಯೊಂದಿಗೆ ಭಗವಂತನ ಮೇಲೆ ಅಪಾರವಾದ ನಂಬಿಕೆ ಇಡಬೇಕು. ಸಕಲವೂ ನೀನೆ, ಸರ್ವಸ್ವವೂ ನಿನ್ನದೇ ಎನ್ನುವ ಭಾವದೊಂದಿಗೆ ಜಂಗಮಪೂಜೆಯಾಗಬೇಕು. ಅಂದಾಗ ಕೂಡಲಸಂಗಮದೇವನನ್ನು ಕೂಡಿಕೊಳ್ಳಲು ಸಾಧ್ಯವಾಗುತ್ತದೆ. ಅದಕ್ಕೆ ಇಲ್ಲಿ ಜಂಗಮಾರ್ಚನೆಯ ಮಾಟ ಕೂಡಲಸಂಗನ ಕೂಟ ಎಂದು ಬಸವಣ್ಣನವರು ಹೇಳಿದ್ದಾರೆ.