ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋರೆ ಹೇಳಿಕೆಗೆ ವಾಲ್ಮೀಕಿ ಸಮಾಜದವರ ಖಂಡನೆ

Last Updated 13 ಡಿಸೆಂಬರ್ 2019, 11:28 IST
ಅಕ್ಷರ ಗಾತ್ರ

ಬೆಳಗಾವಿ: ‘ಪರಿವಾರ ಮತ್ತು ಸಿದ್ದಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಸಂವಿಧಾನದ (ಪರಿಶಿಷ್ಟ ಪಂಗಡ) ಆದೇಶ (2ನೇ ತಿದ್ದುಪಡಿ) ಮಸೂದೆ ಮಂಡನೆ ನಂತರ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಅವರು, ‘ಉತ್ತರ ಕರ್ನಾಟಕದ ಇನ್ನೂ ಕೆಲವು ಜಾತಿಗಳನ್ನು ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಸೇರಿಸಬೇಕು’ ಎಂದು ಹೇಳಿರುವುದು ಖಂಡನೀಯ’’ ಎಂದು ವಾಲ್ಮೀಕಿ ನಾಯಕ ಸಮಾಜ ಜಿಲ್ಲಾ ಘಟಕ ತಿಳಿಸಿದೆ.

ಅಧ್ಯಕ್ಷ ರಾಜಶೇಖರ ತಳವಾರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಖಂಡನಾ ನಿರ್ಣಯ ಕೈಗೊಳ್ಳಲಾಯಿತು.

‘ಪ.ಪಂಗಡದ ಪಟ್ಟಿಯಲ್ಲಿ 51 ಜಾತಿಗಳಿವೆ. ಶೈಕ್ಷಣಿಕ ಹಾಗೂ ಉದ್ಯೋಗದಲ್ಲಿ ಶೇ. 3ರಷ್ಟು ಮೀಸಲಾತಿ ಜಾರಿಯಲ್ಲಿದೆ. ಇದು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ. ಹೀಗಾಗಿ, ಸಮಾಜದ ಮೀಸಲಾತಿಯನ್ನು ಶೇ 7.5ಕ್ಕೆ ಹೆಚ್ಚಿಸುವಂತೆ ಹೋರಾಟ ಮಾಡುತ್ತಿದ್ದೇವೆ. ಹೀಗಿರುವಾಗ ಮತ್ತಷ್ಟು ಜಾತಿಗಳನ್ನು ಸೇರಿಸುವುದು ಸರಿಯಲ್ಲ’ ಎಂದು ಮುಖಂಡರು ತಿಳಿಸಿದರು.

‘ಸಮಾಜದ ಬೇಡಿಕೆ ಕುರಿತು ಅಧ್ಯಯನಕ್ಕಾಗಿ ನಿವೃತ್ತ ನ್ಯಾ. ನಾಗಮೋಹನದಾಸ್‌ ಅಧ್ಯಕ್ಷತೆಯಲ್ಲಿ ಆಯೋಗ ರಚಿಸಿದೆ. ಯಾವುದೇ ಜಾತಿ ಪ. ಪಂಗಡದ ಪಟ್ಟಿಯಲ್ಲಿ ಸೇರ್ಪಡೆ ಆಗಬೇಕಾದರೆ ಆ ಜಾತಿಯ ಕುಲಶಾಸ್ತ್ರೀಯ ಅಧ್ಯಯನ ನಡೆದು ಅದು ಗಿರಿಜನ ಗುಣಲಕ್ಷಣಗಳು ಹೊಂದಿರಬೇಕು. ಹೀಗಿರುವಾಗ ರಾಜಕೀಯ ಉದ್ದೇಶಕ್ಕಾಗಿ ಹೇಳಿಕೆ ಕೊಡುವ ಮುನ್ನ ಯೋಚಿಸಬೇಕು’ ಎಂದು ಟೀಕಿಸಿದರು.

‘ಪ.ಪಂಗಡದ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದರೂ ಯಾವುದೇ ಲಾಭವಿಲ್ಲದೇ ಸಂಘರ್ಷ ನಡೆಸುತ್ತಿರುವ ವಾಲ್ಮೀಕಿ ನಾಯಕ ಸಮಾಜದ ಅಭಿವೃದ್ಧಿಗೆ ಕೊಡಲಿ ಪೆಟ್ಟು ಹಾಕುವುದು ಸರಿಯಲ್ಲ’ ಎಂದರು.

‘ಕೋರೆ ಅವರು ವಾರದೊಳಗಾಗಿ ಕ್ಷಮೆ ಕೇಳಬೇಕು. ಇಲ್ಲದಿದ್ದಲ್ಲಿ ಅವರ ಮನೆಗೆ ಘೇರಾವ್ ಹಾಕಲು ನಿರ್ಧರಿಸಲಾಗಿದೆ’ ಎಂದು ಪ್ರಧಾನ ಕಾರ್ಯದರ್ಶಿ ದಿನೇಶ್‌ ಬಾಗಡೆ ತಿಳಿಸಿದರು.

ಡಾ.ಅರ್ಜುನ ಪಂಗಣ್ಣವರ, ಬಿ.ಆರ್. ರಾಜವರ್ಧನ್, ಜಿ.ಬಿ. ನಾಯ್ಕರ, ಅಶೋಕ ನಾಯಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT