ಶುಕ್ರವಾರ, ಮಾರ್ಚ್ 31, 2023
26 °C
ಕನ್ನಡ ಪರ ಸಂಘಟನೆಗಳಿಂದ ಜಿಲ್ಲಾಧಿಕಾರಿಗೆ ಮನವಿ

ನಿಲ್ದಾಣಗಳಿಗೆ ಸೇನಾನಿಗಳ ಹೆಸರಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಸಾಂಬ್ರಾ ವಿಮಾನನಿಲ್ದಾಣಕ್ಕೆ ವೀರ ರಾಣಿ ಕಿತ್ತೂರು ಚನ್ನಮ್ಮ, ರೈಲು ನಿಲ್ದಾಣಕ್ಕೆ ಬೆಳವಡಿ ಮಲ್ಲಮ್ಮ ಹಾಗೂ ಕೇಂದ್ರ ಬಸ್ ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹೆಸರು ನಾಮಕರಣ ಮಾಡಬೇಕು’ ಎಂದು ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ಮುಖಂಡರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

‘ರಾಜ್ಯದ ಇತರೆಡೆ ಪ್ರಮುಖ ನಿಲ್ದಾಣಗಳಿಗೆ ಮಹಾಪುರುಷರ ಹೆಸರುಗಳನ್ನು ನಾಮಕರಣ ಮಾಡುವ ಕಾರ್ಯ ನಡೆಯುತ್ತಿದೆ. ಆದರೆ, ಬೆಳಗಾವಿಯ ಪ್ರಮುಖ ಸ್ಥಳಗಳಿಗೆ ನಾಮಕರಣ ಮಾಡುವ ಕಾರ್ಯ ಒಂದಿಲ್ಲೊಂದು ಕಾರಣದಿಂದಾಗಿ ಹಲವು ವರ್ಷಗಳಿಂದಲೂ ನನೆಗುದಿಗೆ ಬಿದ್ದಿದೆ. ಈ ಸಂಬಂಧ ಜನಪ್ರತಿನಿಧಿಗಳು ಗಡಿ ಭಾಗದ ಕನ್ನಡಿಗರು ಹಾಗೂ ಕನ್ನಡ ಸಂಘಟನೆಗಳಿಗೆ ನೀಡುತ್ತಾ ಬಂದಿರುವ ಆಶ್ವಾಸನೆಗಳು ಕೇವಲ ಭರವಸೆಗಳಾಗಿಯೇ ಉಳಿದಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ವಿಮಾನ ನಿಲ್ದಾಣಕ್ಕೆ ಚನ್ನಮ್ಮ ಹೆಸರಿಡಬೇಕೆಂಬ ಬೇಡಿಕೆ ಬಗ್ಗೆ ಕೇಂದ್ರಕ್ಕೆ ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಈವರೆಗೂ ಪ್ರಸ್ತಾವ ಹೋಗಿಲ್ಲ ಎನ್ನುವುದು ನಿಜಕ್ಕೂ ಆಘಾತಕರ ಸಂಗತಿಯಾಗಿದೆ. ಐದು ವರ್ಷಗಳಿಂದ ಈ ಬಗ್ಗೆ ಕೇವಲ ಚರ್ಚೆ ನಡೆದಿದೆಯೇ ಹೊರತು ಯಾವುದೇ ನಿರ್ದಿಷ್ಟ ಕ್ರಮ ಕೈಗೊಳ್ಳಲಾಗಿಲ್ಲ ಎನ್ನುವುದು ಖಂಡನೀಯ. ಕೂಡಲೇ ಪ್ರಸ್ತಾವ ಸಲ್ಲಿಸಿ ಆದಷ್ಟು ಬೇಗ ಹೆಸರು ನಾಮಕರಣ ಮಾಡಬೇಕು’ ಎಂದು ಒತ್ತಾಯಿಸಿದರು.

‘ರೈಲು ನಿಲ್ದಾಣಕ್ಕೆ ಬೈಲಹೊಂಗಲ ತಾಲ್ಲೂಕಿನ ಬೆಳವಡಿಯ ರಾಣಿಯಾಗಿದ್ದ ಮಲ್ಲಮ್ಮ ಅವರ ಹೆಸರಿಡಬೇಕೆಂಬ ಬೇಡಿಕೆ ನಮ್ಮದಾಗಿದೆ. ಭಾರತದ ಇತಿಹಾಸದಲ್ಲಿ ಮಹಿಳಾ ಸೈನ್ಯ ಕಟ್ಟಿದ ಏಕೈಕ ರಾಣಿಯಾದ ಮಲ್ಲಮ್ಮಗೆ ಛತ್ರಪತಿ ಶಿವಾಜಿಯೇ ಸೋತು ಶರಣಾಗಿರುವುದು ಆಕೆಯ ಶೌರ್ಯಕ್ಕೆ ಸಾಕ್ಷಿಯಾಗಿದೆ. ಆದರೆ, ಈವರೆಗೂ ಈ ಮಹಾರಾಣಿಯ ಹೆಸರನ್ನು ಯಾವುದೇ ಮಹತ್ವದ ಸ್ಥಳಗಳಿಗೆ ನಾಮಕರಣ ಮಾಡಿಲ್ಲ. ಇನ್ನಾದರೂ ಗಂಭೀರವಾಗಿ ಪರಿಗಣಿಸಬೇಕು’ ಎಂದು ಆಗ್ರಹಿಸಿದರು.

‘ಕಿಲ್ಲಾ ಕೆರೆಯ ಮಧ್ಯದಲ್ಲಿ ಮಹರ್ಷಿ ವಾಲ್ಮೀಕಿ ಪ್ರತಿಮೆಯನ್ನು ಪ್ರತಿಷ್ಠಾಪಿಸಬೇಕು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸಿಂಧೂರ ಲಕ್ಷ್ಮಣ ಹೆಸರನ್ನು ನಗರದ ಪ್ರಮುಖ ವೃತ್ತಕ್ಕೆ ನಾಮಕರಣ ಮಾಡಬೇಕು’ ಎಂದು ಒತ್ತಾಯಿಸಿದರು.

ಕನ್ನಡ ಹೋರಾಟಗಾರರಾದ ಅಶೋಕ ಚಂದರಗಿ, ದೀಪಕ ಗುಡಗನಟ್ಟಿ, ಸುರೇಶ ಗವನ್ನವರ, ಗಣೇಶ ರೋಖಡೆ, ರಾಜು ಕೋಲಾ, ಅಭಿಲಾಷ, ಬಾಳು ಜಡಗಿ, ಸಾಗರ ಬೋರಗಲ್ಲ, ವೀರೇಂದ್ರ ಗೋಬರಿ, ಕಿರಣ ಅನಗೋಳ, ನಿತಿನ ಮುಖರಿ, ಬೆಳವಾಡಿ ಗ್ರಾಮದ ಮುಖಂಡರು, ವಕೀಲ ಸಿದ್ದಗೌಡ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು