ಬೆಳಗಾವಿ: ‘ವೀರಶೈವ ಲಿಂಗಾಯತ ಸಂಘಟನೆಯು ಸೆ.14ರಂದು ಸಂಜೆ 6ಕ್ಕೆ ಬೆಂಗಳೂರಿನ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಹಮ್ಮಿಕೊಂಡಿರುವ ವೀರಭದ್ರೇಶ್ವರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ‘ವೀರಭದ್ರೇಶ್ವರ ಪ್ರಶಸ್ತಿ’ ಪ್ರದಾನ ಮಾಡಲಾಗುವುದು’ ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
‘ಇದು ಮೊದಲ ಪ್ರಶಸ್ತಿಯಾಗಿದ್ದು, ಶ್ರೀಮಠದಿಂದ ನೀಡಲಾಗುತ್ತಿದೆ. ₹ 50 ಸಾವಿರ ಮೌಲ್ಯದ ವಸ್ತುವನ್ನು ಕಾಣಿಕೆಯಾಗಿ ನೀಡಲಾಗುವುದು. ತಮ್ಮ ಮನೆ ದೇವರು ವೀರಭದ್ರೇಶ್ವರ ಆಗಿರುವುದರಿಂದ ಅವರು ಪ್ರಶಸ್ತಿ ಸ್ವೀಕರಿಸಲು ಒಪ್ಪಿದ್ದಾರೆ. ಮಠ–ಮಾನ್ಯಗಳ ವಿಚಾರದಲ್ಲಿ ಸಹಾಯಕ್ಕೆ ಮುಂಚೂಣಿಯಲ್ಲಿ ಇರುವುದರಿಂದಾಗಿ ಅವರನ್ನು ಆಯ್ಕೆ ಮಾಡಲಾಗಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಹೇಳಿದರು.
‘ವೇದಿಕೆಯ ರಾಷ್ಟ್ರೀಯ ಅಧ್ಯಕ್ಷ ಪ್ರದೀಪ ಕಂಕಣವಾಡಿ ನೇತೃತ್ವದಲ್ಲಿ ಜಯಂತಿ ನಡೆಯಲಿದೆ. ರಂಭಾಪುರಿ ಪೀಠದ ವೀರಸೋಮೇಶ್ದರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಾಲ್ಗೊಳ್ಳುವರು. ಒಡೆದು ಹೋಗಿರುವ ಸಮಾಜವನ್ನು ಒಗ್ಗೂಡಿಸುವ ಕೆಲಸವನ್ನು ಈ ಕಾರ್ಯಕ್ರಮದ ಮೂಲಕ ಮಾಡಲಾಗುತ್ತಿದೆ’ ಎಂದು ತಿಳಿಸಿದರು.
‘ವೀರಭದ್ರೇಶ್ವರ ಇಡೀ ವೀರಶೈವ ಲಿಂಗಾಯತ ಸಮುದಾಯದ ಮೂಲ ಪುರುಷನಾಗಿದ್ದಾನೆ. ಅಂದು ಸಮುದಾಯದ ಎಲ್ಲರೂ ಗ್ರಾಮ, ಹೋಬಳಿ, ತಾಲ್ಲೂಕು ಮಟ್ಟದಲ್ಲಿ ಸೇರಿದಂತೆ ತಮ್ಮ ವ್ಯಾಪ್ತಿಯಲ್ಲಿ ಜಯಂತಿ ಆಚರಿಸಬೇಕು’ ಎಂದು ಸಲಹೆ ನೀಡಿದರು.
ಇದನ್ನೂ ಓದಿ... ಮೈತ್ರಿ ಕಸರತ್ತು: ಎಚ್.ಡಿ. ಕುಮಾರಸ್ವಾಮಿ ಭೇಟಿಯಾದ ಸಚಿವ ಅಶೋಕ್
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.