ಬುಧವಾರ, ಸೆಪ್ಟೆಂಬರ್ 29, 2021
21 °C

ತರಕಾರಿ ಬೆಲೆ ಕೊಂಚ ಇಳಿಕೆ, ಹೂವು, ಹಣ್ಣುಗಳ ಬೆಲೆ ಸ್ಥಿರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ನಗರದಲ್ಲಿ ಅಗತ್ಯ ತರಕಾರಿಗಳ ಬೆಲೆ ಇಳಿಕೆಯಾಗಿರುವುದರಿಂದ ಗ್ರಾಹರಿಗೆ ಅನುಕೂಲವಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಬಹುತೇಕ ತರಕಾರಿಗಳು ಕೆ.ಜಿ.ಗೆ ಸರಾಸರಿ ₹ 30ರ ಒಳಗೇ ದೊರೆಯುತ್ತಿವೆ.

ಕಳೆದ ವಾರಕ್ಕೆ ಹೋಲಿಸಿದರೆ ತರಕಾರಿಗಳ ಬೆಲೆ ಏರಿಕೆ ಕಂಡಿಲ್ಲ. ಹೂವು ಹಾಗೂ ಹಣ್ಣುಗಳ ಬೆಲೆ ಸ್ಥಿರವಾಗಿದೆ. ಹಗಲಿನಲ್ಲಿ ಬಿಸಿಲಿನ ತಾಪ ಹೆಚ್ಚಿರುವುದರಿಂದಾಗಿ ಪಾನೀಯಗಳಿಗೆ ಬೇಡಿಕೆ ಇರುವುದರಿಂದ ಕಲ್ಲಂಗಡಿ, ಮೂಸಂಬಿ, ಕಿತ್ತಳೆ ಹಾಗೂ ದ್ರಾಕ್ಷಿ ಹಣ್ಣಿಗೆ ಬೇಡಿಕೆ ಇದೆ. ಹಾಗೆಂದು ಬೆಲೆ ಹೆಚ್ಚಾಗಿಲ್ಲ. ಹೆಚ್ಚಿನ ಪ್ರಮಾಣದಲ್ಲಿ ಲಭ್ಯತೆ ಇರುವುದೇ ಇದಕ್ಕೆ ಕಾರಣ ಎನ್ನುತ್ತಾರೆ ವ್ಯಾಪಾರಿಗಳು.

ಈರುಳ್ಳಿ, ಟೊಮೆಟೊ, ಬೆಂಡಿಕಾಯಿ, ಬೀನ್ಸ್‌, ಕ್ಯಾರೆಟ್‌, ಮೆಣಸಿನಕಾಯಿ, ಆಲೂಗಡ್ಡೆ, ಬದನೆಕಾಯಿ ಮೊದಲಾದ ತರಕಾರಿಗಳ ಆವಕ ಹೆಚ್ಚಿರುವುದರಿಂದಾಗಿ ಬೆಲೆ ಇಳಿದಿದೆ ಎನ್ನುತ್ತಾರೆ ವ್ಯಾಪಾರಿಗಳು. ವಿವಿಧ ‌‌ಸೊಪ್ಪುಗಳು (ಸಣ್ಣ ಕಂತೆಗಳು) ₹ 10ಕ್ಕೆ 3ರಿಂದ 4 ದೊರೆಯುತ್ತಿವೆ.

‘ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಹಲವು ಜಾತ್ರೆಗಳು ನಡೆಯುತ್ತಿವೆ. ಗ್ರಾಮೀಣ ಪ್ರದೇಶಗಳ ಜನರೆಲ್ಲರೂ ಅಲ್ಲಿಗೆ ಹೋಗುತ್ತಿರುತ್ತಾರೆ. ಹೀಗಾಗಿ, ಮಾರುಕಟ್ಟೆಯಲ್ಲಿ ತರಕಾರಿಗಳಿಗೆ ಬೇಡಿಕೆ ಕುಸಿದಿದೆ. ಆದ್ದರಿಂದ ಬೆಲೆಯೂ ಕಡಿಮೆಯಾಗಿದೆ. ವ್ಯಾಪಾರವೂ ಅಷ್ಟಾಗಿ ಆಗುತ್ತಿಲ್ಲ’ ಎಂದು ವ್ಯಾಪಾರಿ ನದೀಂ ಬಾಗವಾನ ವಿಶ್ಲೇಷಿಸಿದರು.

ಸೇಬು ಹಣ್ಣು ಕೆ.ಜಿ.ಗೆ ಸರಾಸರಿ ₹ 100ರಿಂದ ₹ 250, ಮೂಸಂಬಿ, ಕಿತ್ತಳೆ ಮತ್ತು ದ್ರಾಕ್ಷಿಗೆ ತಲಾ ₹ 80 ಇದೆ. ಕಲ್ಲಂಗಡಿ ಹಣ್ಣು ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಿದೆ.

ಬ್ರಾಯ್ಲರ್‌ ಕೋಳಿ ಮಾಂಸ ಕೆ.ಜಿ.ಗೆ ₹ 180 ಇದೆ. ಮಟನ್‌ ಕೆ.ಜಿ.ಗೆ ₹ 540ರಿಂದ ₹ 600ರವರೆಗಿದೆ. ಹಲವು ದಿನಗಳಿಂದಲೂ ಬೆಲೆ ಸ್ಥಿರವಾಗಿದೆ. ಮೀನುಗಳ ಬೆಲೆಯಲ್ಲೂ ಹೆಚ್ಚಿನ ವ್ಯತ್ಯಾಸವೇನೂ ಕಂಡುಬಂದಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು