ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ ಜನವರಿ 15ರಿಂದ

Last Updated 2 ಜನವರಿ 2021, 11:59 IST
ಅಕ್ಷರ ಗಾತ್ರ

ಬೆಳಗಾವಿ: ‘ದೇಶದಾದ್ಯಂತ ಜ. 15ರಿಂದ ಫೆ. 5ರವರೆಗೆ ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ ನಡೆಯಲಿದೆ. ಶ್ರೀರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹಮ್ಮಿಕೊಂಡಿರುವ ಯೋಜನೆಯ ಅನ್ವಯ ಸಮಸ್ತ ಹಿಂದೂ ಸಮಾಜದಿಂದ ಮಂದಿರ ನಿರ್ಮಾಣಕ್ಕಾಗಿ ನಿಧಿ ಸಮರ್ಪಣೆಗೆ ತನ್ನ ಸಂಪೂರ್ಣ ಸಹಯೋಗ ನೀಡಲು ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ನಿರ್ಧರಿಸಿದೆ’ ಎಂದು ಸಂಘಟನೆಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಕೇಶವ ಹೆಗಡೆ ತಿಳಿಸಿದರು.

‘ಶ್ರೀರಾಮ ಮಂದಿರ ರಾಷ್ಟ್ರ ಮಂದಿರದ ಪ್ರತೀಕವಾಗಿದೆ. ಹೀಗಾಗಿ ಹಿಂದೂ ಸಂತರು, ಸನ್ಯಾಸಿಗಳು, ಸಮಾಜದವರು ಮತ್ತು ಶ್ರೀರಾಮ ಭಕ್ತರ ಸಹಯೋಗದಲ್ಲಿ ವಿಎಚ್‌ಪಿಯು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಹಾಗೂ ಅಲ್ಲಿನ ಇತರ ಸೌಲಭ್ಯಗಳಿಗೆ ಅನುಕೂಲ ಆಗುವಂತೆ ನಿಧಿ ಸಮರ್ಪಣಾ ಅಭಿಯಾನ ನಡೆಸಲಾಗುತ್ತಿದೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಅಭಿಯಾನದಲ್ಲಿ ದೇಶದ 500 ಜಿಲ್ಲೆ, ತಾಲ್ಲೂಕು, ಹೋಬಳಿ ಮತ್ತು 4 ಲಕ್ಷ ಹಳ್ಳಿಗಳಲ್ಲಿ ನೆಲೆಸಿರುವ 11 ಕೋಟಿ ಕುಟುಂಬಗಳನ್ನು ತಲುಪಲು ಯೋಜನೆ ರೂಪಿಸಲಾಗಿದೆ. ರಾಜ್ಯದ 27,500 ಹಳ್ಳಿಗಳನ್ನು ಮತ್ತು 90 ಲಕ್ಷ ರಾಮ ಭಕ್ತರನ್ನು ತಲುಪುವ ಮೂಲಕ ಯಶಸ್ವಿಗೊಳಿಸಲಾಗುವುದು’ ಎಂದು ಹೇಳಿದರು.

‘ಜಿಲ್ಲೆಯಲ್ಲಿ 1,400 ಗ್ರಾಮಗಳಲ್ಲಿ ನೆಲೆಸಿರುವ ಕುಟುಂಬಗಳನ್ನು ಅಭಿಯಾನದ ನಿಮಿತ್ತ ಸಂಪರ್ಕಿಸುವ ಯೋಜನೆ ರೂಪಿಸಲಾಗಿದೆ. ₹ 10, 100, ₹ 1000ವನ್ನು ಮುದ್ರಿತ ಕೂಪನ್‌ ಪಡೆದು ಸಮರ್ಪಿಸಬಹುದು. ₹ 2ಸಾವಿರ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತ ಅರ್ಪಿಸಿದವರಿಗೆ ರಸೀದಿ ನೀಡಲಾಗುವುದು. ಆದಾಯ ತೆರಿಗೆ ಕಾಯ್ದೆಯ 80ಜಿ ಸೆಕ್ಷನ್‍ನಲ್ಲಿ ತೆರಿಗೆ ವಿನಾಯಿತಿ ಸೌಲಭ್ಯ ಪಡೆಯಬಹುದು. ನಮ್ಮ ಕಾರ್ಯಕರ್ತರು ಮತ್ತು ಶ್ರೀರಾಮ ಭಕ್ತರು ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ’ ಎಂದರು.

‘ಸಾಧು– ಸಂತರ ನೇತೃತ್ವದಲ್ಲಿ ವಿಶ್ವ ಹಿಂದೂ ಪರಿಷತ್‍ ಕೈಗೊಂಡ ಅನೇಕ ಹೋರಾಟಗಳ ಫಲವಾಗಿ ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಮೂರ್ನಾಲ್ಕು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಶ್ರೀರಾಮ ಮಂದಿರದೊಂದಿಗೆ ಅಂತರರಾಷ್ಟ್ರೀಯ ದರ್ಜೆಯ ಗ್ರಂಥಾಲಯ, ದಾಖಲಾತಿಗಳ ಭಂಡಾರ, ವಸ್ತುಸಂಗ್ರಹಾಲಯ, ಸಂಶೋಧನಾ ಕೇಂದ್ರ, ಯಜ್ಞ ಶಾಲೆ, ವೇದ ಪಾಠಶಾಲೆ, ಸತ್ಸಂಗ ಭವನ, ಪ್ರಸಾದ ವಿನಿಯೋಗ ಸ್ಥಳ, ಆಫಿಥಿಯೇಟರ್, ಧರ್ಮಶಾಲೆ, ಪ್ರದರ್ಶನಾಲಯ, ಯಾತ್ರಿ ನಿವಾಸ ಮೊದಲಾದವು ಕೂಡ ನಿರ್ಮಾಣವಾಗಲಿವೆ. ಈ ಅಭಿಯಾನ ಹಾಗೂ ಮಂದಿರ ನಿರ್ಮಾಣವು ಜಾಗೃತ ಹಿಂದೂ ಶಕ್ತಿಯ ಪುನರುತ್ಥಾನದ ಸಂಕೇತವಾಗಿದೆ. ಸಮಾಜವನ್ನು ಮೇಲು–ಕೀಳು ಎಂಬ ಭಾವನೆಗಳಿಂದ ಮುಕ್ತಗೊಳಿಸುವ ಉದ್ದೇಶದಿಂದ ಕೂಡಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT