ಭಾನುವಾರ, ಜೂನ್ 20, 2021
29 °C

ವಿಎಚ್‌ಪಿಯಿಂದ ಮಠ–ಮಂದಿರ ರಕ್ಷಣೆ: ರುದ್ರಕೇಸರಿ ಮಠದ ಹರಿಗುರು ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಮಠ-ಮಂದಿರಗಳು ಹಾಗೂ ಗೋವುಗಳ ರಕ್ಷಣೆಯಲ್ಲಿ ವಿಶ್ವ ಹಿಂದೂ ಪರಿಷತ್- ಬಜರಂಗ ದಳ ಪ್ರಮುಖ ಪಾತ್ರ ವಹಿಸುತ್ತಿದೆ’ ಎಂದು ಇಲ್ಲಿನ ರುದ್ರಕೇಸರಿ ಮಠದ ಹರಿಗುರು ಸ್ವಾಮೀಜಿ ಹೇಳಿದರು.

ವಿಶ್ವ ಹಿಂದೂ ಪರಿಷತ್–ಬಜರಂಗ ದಳದ ವತಿಯಿಂದ ಈಚೆಗೆ ನಡೆದ ‘ಅಖಂಡ ಭಾರತ ಸಂಕಲ್ಪ ದಿವಸ್’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಈ ಸಂಘಟನೆಯ ಕಾರ್ಯಕರ್ತರು ಕುಟುಂಬ ನಿರ್ವಹಣೆಯ ಜೊತೆಗೆ ಸಮಾಜದ ಜವಾಬ್ದಾರಿಯನ್ನೂ ಸಂಕಲ್ಪವಾಗಿ ಸ್ವೀಕರಿಸಿದ್ದಾರೆ. ಲವ್ ಜಿಹಾದ್ ತಡೆಯಲು ಶ್ರಮಿಸುತ್ತಿದ್ದಾರೆ’ ಎಂದರು.

ಜಿಲ್ಲಾ ಸಂಯೋಜಕ ಬಾವುಕಣ್ಣ ಲೋಹಾರ, ‘ಬೆಂಗಳೂರಿನಲ್ಲಿ ನಡೆದ ಗಲಭೆಯಂತಹ ಘಟನೆಗಳು ಮುಂದುವರಿದರೆ ಸಂಘಟನೆಯ ಕಾರ್ಯಕರ್ತರು ಸುಮ್ಮನೆ ಕೂರುವುದಿಲ್ಲ. ಪರಿಣಾಮ ತೀವ್ರವಾಗಿರುತ್ತದೆ’ ಎಂದು ಹೇಳಿದರು.

ನಗರ ಘಟಕದ ಅಧ್ಯಕ್ಷ ಬಸವರಾಜ ಬಾಬೂಜಿ ಮಾತನಾಡಿ, ‘ಮುಂದಿನ ದಿನಗಳಲ್ಲಿ ಭಾರತ ಅಖಂಡ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ಒಂದೆಡೆ ಪಾಕಿಸ್ತಾನ ಇನ್ನೊಂದೆಡೆ ಚೀನಾ ನಮ್ಮ ದೇಶದ ಮೇಲೆ ಆಕ್ರಮಣ ಮಾಡುತ್ತಿವೆ. ಅಪಾಯಕಾರಿ ಚೀನಾ ನಮ್ಮ ಗಡಿಯೊಳಗೆ ಬರುವ ಸಾಹಸ ಮಾಡುತ್ತಿದೆ. ಇದನ್ನು ಎದುರಿಸಲು ನಮ್ಮ ಸೈನಿಕರ ಆತ್ಮಬಲ ಹೆಚ್ಚಿಸುವ ಕೆಲಸವನ್ನು ನಾವು ಮಾಡಬೇಕು. ಆತ್ಮನಿರ್ಭರ ಭಾರತಕ್ಕಾಗಿ ಚೀನಾ ವಸ್ತುಗಳನ್ನು ಬಹಿಷ್ಕರಿಸಬೇಕು. ಸ್ವದೇಶಿ ಚಿಂತನೆ ರೂಢಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಪ್ರಾಂತ ಕೋಶಾಧ್ಯಕ್ಷರಾದ ಕೃಷ್ಣ ಭಟ್, ಶ್ರೀಕಾಂತ ಕದಂ, ಜಿಲ್ಲಾ ಘಟಕದ ಅಧ್ಯಕ್ಷ ಸತೀಶ ಚಳಕೇರಿ, ಕಾರ್ಯದರ್ಶಿ ವಿಜಯ ಜಾಧವ, ನಗರ ಘಟಕದ ಕಾರ್ಯದರ್ಶಿ ಹೇಮಂತ ಹವಳ, ನಗರ ಘಟಕದ ಸಂಯೋಜಕ ಆದಿನಾಥ ಗಾವಡೆ, ಬಸವರಾಜ ಹಳಿಂಗಳಿ, ಬಸವರಾಜ ಗಾಣಿಗಿ, ಆನಂದ ಕರಲಿಂಗನ್ನವರ, ಶ್ಯಾಮ ಬತ್ತುಲ್ಕರ, ಅರ್ಜುನ ರಜಪೂತ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು