ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಟಿಯು: ಪ್ರಾಜೆಕ್ಟ್‌ಗಳ ಸೆಮಿನಾರ್ ಮತ್ತು ಪ್ರದರ್ಶನ 12ರಿಂದ

Last Updated 10 ಆಗಸ್ಟ್ 2022, 13:20 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು)ದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ(ಕೆಎಸ್‌ಸಿಎಸ್‌ಟಿ) ಸಹಯೋಗದಲ್ಲಿ ಆ.12, 13ರಂದು ವಿದ್ಯಾರ್ಥಿ ಯೋಜನಾ ಕಾರ್ಯಕ್ರಮದ ಪ್ರಾಜೆಕ್ಟ್‌ಗಳ ಸೆಮಿನಾರ್- ಪ್ರದರ್ಶನ ನಡೆಯಲಿದೆ ಎಂದು ಕೆಎಸ್‌ಸಿಎಸ್‌ಟಿ ಕಾರ್ಯನಿರ್ವಾಹಕ ಕಾರ್ಯದರ್ಶಿ ಎಚ್‌.ಹೇಮಂತ್‌ಕುಮಾರ್‌ ಹೇಳಿದರು.

ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ರಾಜ್ಯದ ಅಭಿವೃದ್ಧಿಗೆ ಪೂರಕವಾದ ವಿಜ್ಞಾನ ಮತ್ತು ತಂತ್ರಜ್ಞಾನದ ಆವಿಷ್ಕಾರಗಳನ್ನು ಗುರುತಿಸುವುದು, ಈ ಕ್ಷೇತ್ರಗಳಿಗೆ ಸಂಬಂಧಿಸಿ ನೀತಿ–ನಿಯಮಾವಳಿ ರೂಪಿಸಲು ಸರ್ಕಾರಕ್ಕೆ ಸಲಹೆ ನೀಡುವುದೇ ನಮ್ಮ ಉದ್ದೇಶ. ಹಾಗಾಗಿ 1978ರಿಂದ ಇಂತಹ ಚಟುವಟಿಕೆ ಕೈಗೊಳ್ಳಲಾಗುತ್ತಿದೆ‘ ಎಂದರು.

‘ವಿಟಿಯುದಲ್ಲಿ ಪ್ರಾಜೆಕ್ಟ್‌ಗಳ ಪ್ರದರ್ಶನಕ್ಕೆ ರಾಜ್ಯದ 170 ಎಂಜಿನಿಯರಿಂಗ್ ಕಾಲೇಜುಗಳಿಂದ 5,191 ಅರ್ಜಿ ಸಲ್ಲಿಕೆಯಾಗಿದ್ದವು. ಈ ಪೈಕಿ ಅತ್ಯುತ್ತಮವಾದ 190 ಪ್ರಾಜೆಕ್ಟ್‌ಗಳನ್ನು ಪ್ರದರ್ಶನಕ್ಕೆ ಹಾಗೂ 142 ಪ್ರಾಜೆಕ್ಟ್‌ಗಳನ್ನು ಸೆಮಿನಾರ್‌ಗೆ ಆಯ್ಕೆ ಮಾಡಲಾಗಿದೆ. ಎಂಜಿನಿಯರಿಂಗ್‌ ಕಾಲೇಜಿನ 800ಕ್ಕೂ ಹೆಚ್ಚು ವಿದ್ಯಾರ್ಥಿಗಳು, 120ಕ್ಕೂ ಅಧಿಕ ಉಪನ್ಯಾಸಕರು ಹಾಗೂ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ ಹಾಗೂ ಇತರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಗಳ 50 ಪರಿಣಿತರು ಭಾಗವಹಿಸುವರು’ ಎಂದು ತಿಳಿಸಿದರು.

‘ಆ.12ರಂದು ಬೆಳಿಗ್ಗೆ 10.30ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ, ಕೆಎಸ್‌ಸಿಎಸ್‌ಟಿ ಕಾರ್ಯದರ್ಶಿ ಪ್ರೊ.ಅಶೋಕ ರಾಯಚೂರ ಆಗಮಿಸುವರು. ವಿಟಿಯು ಕುಲಪತಿ ಡಾ.ಕರಿಸಿದ್ದಪ್ಪ ಅಧ್ಯಕ್ಷತೆ ವಹಿಸುವರು. 13ರಂದು ಮಧ್ಯಾಹ್ನ 12ಕ್ಕೆ ಪ್ರೊ.ಅಮೃತೂರು ಭಾರದ್ವಾಜ ತಾಂತ್ರಿಕ ಉಪನ್ಯಾಸ ನೀಡುವರು. 2.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ’ ಎಂದರು.

ಕುಲಪತಿ ಕರಿಸಿದ್ದಪ್ಪ, ‘ನಮ್ಮಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗೆ ಪ್ರತಿವರ್ಷ ₹10 ಕೋಟಿ ಖರ್ಚು ಮಾಡಲಾಗುತ್ತಿದೆ. ಹೊಸ ಸಂಶೋಧನೆಗಳನ್ನು ಪ್ರೋತ್ಸಾಹಿಸಲು ಶೀಘ್ರ ಕೆಎಸ್‌ಸಿಎಸ್‌ಟಿ ಜೊತೆ ಒಪ್ಪಂದ ಮಾಡಿಕೊಳ್ಳಲಾಗುವುದು’ ಎಂದು ಕುಲಪತಿ ಡಾ.ಕರಿಸಿದ್ದಪ್ಪ ಹೇಳಿದರು.

‘ಈ ಪ್ರದರ್ಶನದಲ್ಲಿ ಆಯ್ಕೆಯಾದ 75 ಅತ್ಯುತ್ತಮ ಪ್ರಾಜೆಕ್ಟ್‌ಗಳು, ಸಾಧನೆ ಮೆರೆದ ಕಾಲೇಜಿಗೆ ಸಮಾರೋಪ ಕಾರ್ಯಕ್ರಮದಲ್ಲಿ ಬಹುಮಾನ ನೀಡಲಾಗುವುದು’ ಎಂದರು.

ವಿಟಿಯು ಕುಲಸಚಿವ ಪ್ರೊ.ಆನಂದ ದೇಶಪಾಂಡೆ, ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಈ.ರಂಗಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT