ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತನ ಬಾಳು ಬೆಳಗಿದ ‘ಕೃಷಿ ಹೊಂಡ’

ಸಮಗ್ರ ಬೇಸಾಯದಲ್ಲಿ ಖುಷಿ ಕಂಡ ಗೊಂತಮಾರದ ರೈತ
ಬಸವರಾಜ ಶಿರಸಂಗಿ
Published 16 ಮಾರ್ಚ್ 2024, 4:28 IST
Last Updated 16 ಮಾರ್ಚ್ 2024, 4:28 IST
ಅಕ್ಷರ ಗಾತ್ರ

ಸವದತ್ತಿ: ಈ ಹಿಂದೆ ನೀರಿನ ಕೊರತೆಯಿಂದ ಕೃಷಿ ಕಾಯಕದಲ್ಲಿ ಹಿನ್ನಡೆ ಅನುಭವಿಸುತ್ತಿದ್ದ ತಾಲ್ಲೂಕಿನ ಗೊಂತಮಾರದ ರೈತ ಬಸವರಾಜ ನೇಕಾರ, ಈಗ ಕೃಷಿ ಹೊಂಡದ ನೆರವಿನಿಂದ ಸಮೃದ್ಧವಾಗಿ ಕೃಷಿ ಮಾಡುತ್ತಿದ್ದಾರೆ. ಹೊಂಡದಲ್ಲಿ ಸಂಗ್ರಹವಾದ ಮಳೆ ನೀರನ್ನು ಬೇಡಿಕೆಯನುಸಾರ ವಿವಿಧ ಬೆಳೆಗಳಿಗೆ ಉಣಿಸಿ ಉತ್ತಮ ಆದಾಯ ಗಳಿಸುತ್ತಿದ್ದಾರೆ.

13 ಎಕರೆ ಜಮೀನು ಹೊಂದಿರುವ ಬಸವರಾಜ ಓದಿದ್ದು 9ನೇ ತರಗತಿಯಷ್ಟೇ. ಆದರೆ, ಕೃಷಿಯಲ್ಲಿ ಏನನ್ನಾದರೂ ಸಾಧಿಸುವ ತವಕ ಅವರಲ್ಲಿತ್ತು. ಮಳೆಗಾಲದಲ್ಲೇನೂ ಹೆಚ್ಚಿನ ಸಮಸ್ಯೆಯಾಗುತ್ತಿರಲಿಲ್ಲ. ಆದರೆ, ಬೇಸಿಗೆಯಲ್ಲೇ ಕೃಷಿಗೆ ನೀರಿನ ಕೊರತೆ ಕಾಡುತ್ತಿತ್ತು. ಆದರೆ, ‘ಕೃಷಿ ಭಾಗ್ಯ’ ಯೋಜನೆಯಡಿ ಹೊಂಡ ನಿರ್ಮಿಸಿದ ನಂತರ ಖುಷಿಯಿಂದ ಒಕ್ಕಲುತನ ಮಾಡುತ್ತಿದ್ದಾರೆ.

ಹತ್ತಿ, ಹೆಸರು, ಉದ್ದು, ಶೇಂಗಾ, ಜೋಳ, ಕಬ್ಬು, ಮೆಣಸಿನಕಾಯಿ, ಟೊಮ್ಯಾಟೊ, ಡೊಣ್ಣ ಮೆಣಸಿನಕಾಯಿ, ಬೀನ್ಸ್‌, ಹಿರೇಕಾಯಿ, ಬೆಳ್ಳುಳ್ಳಿ  ಹೀಗೆ... ವಿವಿಧ ಬೆಳೆಗಳನ್ನು ಬೆಳೆದು, ಉತ್ತಮ ಆದಾಯ ಗಳಿಸುತ್ತಿದ್ದಾರೆ. ಪದವೀಧರರಾದ ಪುತ್ರ ಆನಂದ ಅವರೂ, ತಂದೆಯ ಕೃಷಿ ಕಾಯಕಕ್ಕೆ ಸಾಥ್‌ ಕೊಡುತ್ತಿದ್ದಾರೆ. 

‘ಈ ಹಿಂದೆ ಮಳೆಯನ್ನೇ ಅವಲಂಬಿಸಿ ಕೃಷಿ ಮಾಡುತ್ತಿದ್ದೆ. ಕೆಲವೊಮ್ಮೆ ಬರ ಪರಿಸ್ಥಿತಿ ತಲೆದೋರಿದಾಗ ಬೆಳೆ ಬಾರದೆ, ಬಂಡವಾಳವೂ ಕೈಗೆಟುಕುತ್ತಿರಲಿಲ್ಲ. ಕೃಷಿ ಹೊಂಡ ನಿರ್ಮಾಣವಾದ ನಂತರ ಇಳುವರಿ ಹೆಚ್ಚಿದೆ. 21x21 ಮೀಟರ್‌ ಉದ್ದಗಲದ ಅಳತೆಯಲ್ಲಿ 2017ರಲ್ಲಿ ನಿರ್ಮಿಸಿದ ಹೊಂಡ ನನ್ನ ಬದುಕಿನ ಚಿತ್ರಣವನ್ನೇ ಬದಲಿಸಿದೆ’ ಎಂದು ಬಸಪ್ಪ ನೇಕಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಿತ್ತನೆಗೆ ಮುನ್ನ, ಜಮೀನಿಗೆ ತಿಪ್ಪೆಗೊಬ್ಬರ ಬಳಸುತ್ತೇನೆ. ನಂತರ ಭೂಮಿಯ ಫಲವತ್ತತೆ ಕಾಪಾಡಿಕೊಂಡು, ಯೋಜನಾಬದ್ಧವಾಗಿ ಕೃಷಿ ಮಾಡುತ್ತೇನೆ. ಅತಿಯಾದ ರಾಸಾಯನಿಕ ಬಳಕೆಯಿಂದ ದೂರ ಉಳಿದಿದ್ದೇನೆ. ತರಕಾರಿ ಬೆಳೆಗಳು ಕೀಟಬಾಧೆಗೆ ತುತ್ತಾಗದಂತೆ, ಎರಡು ಬಾರಿ ಕೀಟನಾಶಕ ಸಿಂಪಡಿಸುತ್ತೇನೆ. ಹಾಗಾಗಿ ವರ್ಷದಿಂದ ವರ್ಷಕ್ಕೆ ಇಳುವರಿ ಪ್ರಮಾಣ ಹೆಚ್ಚುತ್ತಿದೆ’ ಎಂದರು.

‘ಒಂದೇ ಬೆಳೆ ನೆಚ್ಚಿಕೊಂಡರೆ ಕುಳಿತರೆ, ಕೃಷಿ ಕಾಯಕದಲ್ಲಿ ಲಾಭ ಕಷ್ಟ. ಸಮಗ್ರ ಬೇಸಾಯ ಮಾಡಿದರೆ, ಒಂದಿಲ್ಲೊಂದು ಬೆಳೆ ಕೈಹಿಡಿದೇ ಹಿಡಿಯುತ್ತದೆ. ಉತ್ತಮ ಆದಾಯ ಖಾತ್ರಿಯಾಗುತ್ತದೆ. ನಷ್ಟಕ್ಕೀಡಾಗುವುದು ತಪ್ಪುತ್ತದೆ. ಹಾಗಾಗಿ ಹವಾಮಾನ ಮತ್ತು ಮಾರುಕಟ್ಟೆ ಬೇಡಿಕೆ ಆಧರಿಸಿ, ವಿವಿಧ ಬೆಳೆಗಳನ್ನು ನಿಯಮಿತವಾಗಿ ಬೆಳೆಯುತ್ತಿದ್ದೇನೆ’ ಎಂದು ಅವರು ಹೇಳಿದರು.

ಬಸವರಾಜ ನೇಕಾರ ಅವರು ತಮ್ಮ ಜಮೀನಿನಲ್ಲಿ ಬೆಳೆದ ಮೆಣಸಿನ ಬೆಳೆ
ಬಸವರಾಜ ನೇಕಾರ ಅವರು ತಮ್ಮ ಜಮೀನಿನಲ್ಲಿ ಬೆಳೆದ ಮೆಣಸಿನ ಬೆಳೆ
ಬಸವರಾಜ ನೇಕಾರ
ಬಸವರಾಜ ನೇಕಾರ

ಒಣ ಬೇಸಾಯ ಪದ್ಧತಿ ಅನುಸರಿಸುವಾಗ ಕೃಷಿ ಕಷ್ಟಕರವಾಗಿತ್ತು. ಕೃಷಿ ಹೊಂಡ ನಿರ್ಮಿಸಿದ ನಂತರ ಲಾಭದಲ್ಲಿದ್ದೇನೆ. ನನ್ನಂತೆ ಎಲ್ಲ ರೈತರೂ ಕೃಷಿಹೊಂಡ ನಿರ್ಮಿಸಿಕೊಂಡು ಇಳುವರಿ ಹೆಚ್ಚಿಸಿಕೊಳ್ಳಬಹುದು

- ಬಸವರಾಜ ನೇಕಾರ ರೈತ ಗೊಂತಮಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT