ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಕೂಡದಲ್ಲಿ ಕೊಡ ನೀರಿಗಾಗಿ ಹೆಣಗಾಟ

ಬತ್ತಿದ ಜಲಮೂಲ: ಎತ್ತಿನಗಾಡಿ, ಟ್ರ್ಯಾಕ್ಟರ್‌ಗಳಲ್ಲಿ ದೂರದ ಊರುಗಳಿಂದ ನೀರು ತರುತ್ತಿರುವ ಜನ
ಚಂದ್ರಶೇಖರ ಎಸ್‌. ಚಿನಕೇಕರ
Published 26 ಮಾರ್ಚ್ 2024, 5:17 IST
Last Updated 26 ಮಾರ್ಚ್ 2024, 5:17 IST
ಅಕ್ಷರ ಗಾತ್ರ

ಚಿಕ್ಕೋಡಿ: ತಾಲ್ಲೂಕಿನ ನಾಗರಮುನ್ನೋಳಿ ಹೋಬಳಿ ವ್ಯಾಪ್ತಿಯಲ್ಲಿ ಬೇಸಿಗೆ ಆರಂಭದಲ್ಲೇ ಕುಡಿಯುವ ನೀರಿನ ಬವಣೆ ತಲೆದೋರಿದೆ. ಹೋಬಳಿ ವ್ಯಾಪ್ತಿಯ ಬಹುತೇಕ ಗ್ರಾಮಗಳಲ್ಲಿ ಹನಿ ನೀರಿಗಾಗಿ ಜನರು ಪರಿತಪಿಸುತ್ತಿದ್ದಾರೆ. ಅದರಲ್ಲೂ ಜಲಬವಣೆ ಹೇಳತೀರದಾಗಿದೆ.

ಬೆಳಕೂಡ ಗ್ರಾಮ ಪಂಚಾಯಿತಿಯಲ್ಲಿ ಇದೊಂದೇ ಗ್ರಾಮವಿದ್ದು, 10ಕ್ಕೂ ಅಧಿಕ ತೋಟಪಟ್ಟಿಗಳಿವೆ. 3,900 ಜನಸಂಖ್ಯೆ ಇದ್ದು, ಮೂರು ವಾರ್ಡ್‌ಗಳಿವೆ. ಇಲ್ಲಿ ಗ್ರಾಮ ಪಂಚಾಯಿತಿಗೆ ಸೇರಿದ 12 ಕೊಳವೆಬಾವಿ ಇವೆ. ಈ ಪೈಕಿ ನಾಲ್ಕರಲ್ಲಿ ನೀರು ಲಭ್ಯವಿಲ್ಲ. ಉಳಿದ ಎಂಟು ಕೊಳವೆಬಾವಿಗಳಲ್ಲೂ ಅರ್ಧ ಗಂಟೆ ನೀರು ಬಂದರೂ ಹೆಚ್ಚು.

ಕೊಟಬಾಗಿ ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆ ಮೂಲಕ ಈ ಊರಿಗೆ ನೀರು ಪೂರೈಸಲಾಗುತ್ತಿದೆ. ಆದರೆ, ಗ್ರಾಮಕ್ಕೆ ನಿಯಮಿತವಾಗಿ ನೀರು ಬಂದು ತಲುಪುವುದು ಅಷ್ಟಕ್ಕಷ್ಟೇ. ಇಲ್ಲಿ ಹೆಚ್ಚಿರುವ ತೋಟಪಟ್ಟಿಗಳಿಗೆ ನೀರು ಪೂರೈಸುವುದು ಗ್ರಾಮ ಪಂಚಾಯಿತಿಗೂ ಸವಾಲಾಗಿದೆ.

ಇಲ್ಲಿನ ಸೀಮಿಕೋಡಿ, ಬಸವ ನಗರದ ತೋಟಪಟ್ಟಿ, ಗ್ರಾಮದ ಹೊರವಲಯದಲ್ಲಿನ ಅಂಗನವಾಡಿ ಕೇಂದ್ರ ಹಾಗೂ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಟ್ಯಾಂಕರ್ ನೀರು ಪೂರೈಕೆ ಮಾಡಲಾಗುತ್ತಿದೆ. ಪ್ರತಿದಿನ ನಾಲ್ಕರಿಂದ ಐದು ಟ್ರಿಪ್ ನೀರು ಪೂರೈಕೆಯಾದರೂ ಸಾಲುತ್ತಿಲ್ಲ. ಇನ್ನೂ ಹೆಚ್ಚಿನ ಟ್ಯಾಂಕರ್‌ಗಳಿಂದ ನೀರು ಕೊಡಬೇಕೆಂಬ ಒತ್ತಾಯ ಕೇಳಿಬರುತ್ತಿದೆ.

ಸ್ನಾನಕ್ಕೂ ಪರದಾಟ: ತೋಟಪಟ್ಟಿಯಲ್ಲಿ ಇರುವ ಕೊಳವೆಬಾವಿ ಹಾಗೂ ಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಹೀಗಾಗಿ ತೋಟಪಟ್ಟಿ ನಿವಾಸಿಗಳು ಸ್ನಾನ ಮಾಡುವುದಕ್ಕೂ ಪರಿತಪಿಸಬೇಕಿದೆ. ವಿದ್ಯುತ್ ಕಣ್ಣಾಮುಚ್ಚಾಲೆ ಮಧ್ಯೆ, ತೋಟಪಟ್ಟಿಯಲ್ಲಿನ ಕೊಳವೆಬಾವಿಗಳಲ್ಲಿ ನಿತ್ಯ 8ರಿಂದ 10 ಕೊಡ ನೀರು ತುಂಬುವುದೇ ಕಷ್ಟವಾಗಿದೆ.

‘ತರಕಾರಿ, ಕಬ್ಬು ಸೇರಿದಂತೆ ವಿವಿಧ ಬೆಳೆ ಬಾಡಿದರೂ ಚಿಂತೆ ಇಲ್ಲ. ನಿತ್ಯ ಜಾನುವಾರುಗಳು ಕುಡಿಯುವಷ್ಟು ನೀರನ್ನಾದರೂ ನಮಗೆ ಪೂರೈಸಿ’ ಎಂದು ತೋಟಪಟ್ಟಿಯ ನಿವಾಸಿಗಳು ಆಗ್ರಹಿಸುತ್ತಾರೆ. ಅವರು ಟ್ರ್ಯಾಕ್ಟರ್, ಎತ್ತಿನಗಾಡಿ, ಸೈಕಲ್, ಬೈಕ್ ಮೂಲಕ ದೂರದ ಊರುಗಳಿಂದ ಕೊಡ, ಬ್ಯಾರೆಲ್‌ಗಳಲ್ಲಿ ನೀರು ತರುವುದು ಅನಿವಾರ್ಯವಾಗಿದೆ.

ನೀರು ತರುವುದೇ ಕಾಯಕ: ಗ್ರಾಮದ ತಾರದಳ್ಳಿ ತೋಟ, ಬಸವನಗರ, ಸೀಮಿಕೋಡಿ, ಗೌಡಾಡಿ ತೋಟ, ಮೋರೆ ತೋಟ, ಯಾದಗೂಡೆ ತೋಟ, ಬೆಳಕೂಡ ಗೇಟ್ ಪ್ರದೇಶ, ಮುಗಳಿ ತೋಟ, ನವನಾಳೆ ತೋಟ ಸೇರಿದಂತೆ ವಿವಿಧ ತೋಟಪಟ್ಟಿಯಲ್ಲಿಯ ಜನರು ನಿತ್ಯದ ಕೆಲಸಗಳನ್ನೆಲ್ಲ ಬಿಟ್ಟು, ನೀರು ತರುವುದರಲ್ಲೇ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಎಲ್ಲೆಲ್ಲಿ ನೀರು ಇದೆಯೋ, ಆಯಾ ತೋಟಗಳಿಗೆ ಹೋಗಿ ತರುವುದು ಕಂಡುಬರುತ್ತಿದೆ. ಕೆಲವೆಡೆ ಕಡಿದಾದ ಬಾವಿಗಳಿಗೆ ಇಳಿದು ನೀರು ತರಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ.

ಚಿಕ್ಕೋಡಿ ತಾಲ್ಲೂಕಿನ ಬೆಳಕೂಡದಲ್ಲಿ ಕುಡಿಯುವ ನೀರಿಗಾಗಿ ಕೊಡಗಳ ಸಾಲು...
ಚಿಕ್ಕೋಡಿ ತಾಲ್ಲೂಕಿನ ಬೆಳಕೂಡದಲ್ಲಿ ಕುಡಿಯುವ ನೀರಿಗಾಗಿ ಕೊಡಗಳ ಸಾಲು...
ಚಿಕ್ಕೋಡಿ ತಾಲ್ಲೂಕಿನ ಬೆಳಕೂಡದಲ್ಲಿ ಟ್ಯಾಂಕರ್‌ ನೀರಿಗೆ ಮುಗಿಬಿದ್ದ ಗ್ರಾಮಸ್ಥರು
ಚಿಕ್ಕೋಡಿ ತಾಲ್ಲೂಕಿನ ಬೆಳಕೂಡದಲ್ಲಿ ಟ್ಯಾಂಕರ್‌ ನೀರಿಗೆ ಮುಗಿಬಿದ್ದ ಗ್ರಾಮಸ್ಥರು

ನಮ್ಮೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಿದೆ. ನಮ್ಮ ಪರಿಸ್ಥಿತಿ ದೇವರಿಗೇ ಪ್ರೀತಿ ಎನ್ನುವಂತಾಗಿದೆ

- ಮುತ್ತುರಾಜ ಮಾಳಿ ಗ್ರಾಮಸ್ಥ

ಕುಡಿಯುವ ನೀರು ಸಂಗ್ರಹಿಸುವುದೇ ನಮಗೆ ನಿತ್ಯ ಸವಾಲಾಗಿದೆ. ಬೇಸಿಗೆ ಯಾವಾಗ ಮುಗಿಯುತ್ತದೆ ಮಳೆರಾಯ ಯಾವಾಗ ಕರುಣೆ ತೋರುತ್ತಾನೆ ಎಂದು ಕಾಯುತ್ತಿದ್ದೇವೆ

- ಲಕ್ಷ್ಮಿ ಅರಭಾವಿ ಗ್ರಾಮಸ್ಥೆ

ತೋಟಪಟ್ಟಿಗಳ ಜನರಿಗೆ ಪ್ರತಿದಿನ ಮೂರು ಟ್ಯಾಂಕರ್ ನೀರು ಪೂರೈಸುವಂತೆ ಮೇಲಧಿಕಾರಿಗಳ ಗಮನಕ್ಕೆ ಪತ್ರ ತರಲಾಗಿದೆ. ಜನರ ಸಂಕಷ್ಟಕ್ಕೆ ಸ್ಪಂದಿಸಲಾಗುತ್ತಿದೆ

- ಅಣ್ಣಪ್ಪ ಇಟ್ನಾಳೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬೆಳಕೂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT