ಶುಕ್ರವಾರ, ಸೆಪ್ಟೆಂಬರ್ 17, 2021
31 °C
ಪಾಲಿಕೆ ಚುನಾವಣೆಯಲ್ಲಿ ಪಕ್ಷದ ಚಿಹ್ನೆಯಲ್ಲಿ ಸ್ಪರ್ಧೆ: ನಳಿನ್‌ಕುಮಾರ್‌ ಕಟೀಲ್ ಹೇಳಿಕೆ

ಕಾರ್ಯಕರ್ತರಿಗಾಗಿ ಸವಾಲು ಸ್ವೀಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಇಲ್ಲಿನ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪಕ್ಷದ ಚಿಹ್ನೆಯಲ್ಲಿ ಸ್ಪರ್ಧೆ ಮಾಡುವ ನಿರ್ಧಾರ ನಾಯಕರದ್ದಲ್ಲ; ಕಾರ್ಯಕರ್ತರದ್ದು. ಕಾರ್ಯಕರ್ತರಿಗಾಗಿ ಇದನ್ನು ಸವಾಲಾಗಿ ಸ್ವೀಕರಿಸಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ತಿಳಿಸಿದರು.

ಇಲ್ಲಿನ ಧರ್ಮನಾಥ ಭವನದಲ್ಲಿ ಸೋಮವಾರ ನಡೆದ ‘ಮಹಾನಗರ‍ಪಾಲಿಕೆ ಚುನಾವಣೆ ವಿಶೇಷ ಸಭೆ’ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಮಂಗಳೂರು ಮತ್ತು ಬೆಳಗಾವಿಗೆ ಬಹಳ ಸಾಮ್ಯತೆ ಇದೆ. ಮಂಗಳೂರಿನಲ್ಲಿ ಬಿಜೆಪಿ ಅಧಿಕಾರ ಹಿಡಿದಂತೆ ಬೆಳಗಾವಿಯಲ್ಲೂ ಆಗುತ್ತದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಇದ್ದಾಗ ಇಲ್ಲಿ ಸ್ಮಾರ್ಟ್ ಸಿಟಿ ಕೆಲಸಗಳು ನಡೆಯುತ್ತಿರಲಿಲ್ಲ. ಬಿ.ಎಸ್. ಯಡಿಯೂರಪ್ಪ ಬಂದ ನಂತರ ಸ್ಮಾರ್ಟ್ ಸಿಟಿ ಕಾಮಗಾರಿ ವೇಗ ಪಡೆದುಕೊಂಡಿತು. ದಿವಂಗತ ಸುರೇಶ ಅಂಗಡಿ ಅದ್ಭುತವಾದ ಕೆಲಸ ಮಾಡಿದ್ದಾರೆ. ಹೀಗಾಗಿ, ಅವರನ್ನು ಸ್ಮರಿಸಬೇಕಿದೆ’ ಎಂದರು.

ಹೆಚ್ಚು ಶಕ್ತಿ ಇದೆ: ‘ಶಾಸಕರಿಗೆ ಜವಾಬ್ದಾರಿ ನೀಡಲಾಗುವುದು. ಮಹಾನಗರ ಪಾಲಿಕೆ ಚುನಾವಣೆ ಮುಗಿಯುವವರೆಗೂ ಯಾವ ಶಾಸಕರೂ ಬೆಂಗಳೂರಿಗೆ ಹೋಗುವಂತಿಲ್ಲ’ ಎಂದು ಸೂಚಿಸಿದರು.

ಸಚಿವ ಗೋವಿಂದ ಕಾರಜೋಳ ಮಾತನಾಡಿ, ‘ನಮಗೆ ಅತಿ ಹೆಚ್ಚು ಶಕ್ತಿ ಇರುವ ಜಿಲ್ಲೆ ಬೆಳಗಾವಿ. 18 ವಿಧಾನಸಭಾ ಕ್ಷೇತ್ರಗಳ ಪೈಕಿ 13 ಶಾಸಕರಿದ್ದಾರೆ. ಇಬ್ಬರು ಸಂಸದರು ಇದ್ದಾರೆ. ಇಲ್ಲಿ ಸಿಂಹದಂತ ಕಾರ್ಯಕರ್ತರನ್ನು ಹೊಂದಿದ್ದೇವೆ’ ಎಂದು ಸಲಹೆ ನೀಡಿದರು.

ಪ್ರಚಾರಕ್ಕೆ ಯಡಿಯೂರಪ್ಪ: ‘ಪಕ್ಷದ ಗೆಲುವು ಕಾರ್ಯಕರ್ತರ ಮೇಲೆ ಅವಲಂಬಿತವಾಗಿರುತ್ತದೆ. ಟಿಕೆಟ್ ಯಾರಿಗೇ ಸಿಗಲಿ ಎಲ್ಲರೂ ತಾನೇ ಅಭ್ಯರ್ಥಿ ಎಂದು ಭಾವಿಸಿ ಕೆಲಸ ಮಾಡಿದರೆ 50 ವಾರ್ಡ್‌ಗಳಲ್ಲಿ ಗೆಲ್ಲುತ್ತೇವೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೂ ಪ್ರಚಾರದಲ್ಲಿ ಭಾಗಿಯಾಗುತ್ತಾರೆ’ ಎಂದು ತಿಳಿಸಿದರು.

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಉಮೇಶ ಕತ್ತಿ ಮಾತನಾಡಿ, ‘ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮದೇ ಸರ್ಕಾರ ಇದೆ. ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ದೇಶದಲ್ಲಿ ಸರಿಯಾದ ಅಭಿವೃದ್ಧಿ ಆಗಿರಲಿಲ್ಲ. ಬಿಜೆಪಿ ಬಂದ ನಂತರ ಅಭಿವೃದ್ಧಿ ಆಗುತ್ತಿದೆ. ಇದನ್ನು ಜನರಿಗೆ ತಿಳಿಸಬೇಕು’ ಎಂದರು.

ಕಾಂಗ್ರೆಸ್ ಕುತಂತ್ರ: ‘ಈ ಚುನಾವಣೆ ಜಾತಿ, ಹೆಸರು, ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮೇಲೆ ಆಗುವುದಿಲ್ಲ. ಲೋಕಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಕುತಂತ್ರದಿಂದ ಎಂಇಎಸ್ ಮತ ಪಡೆದಿತ್ತು. ಶಾಸಕರೆಲ್ಲರೂ ಸೇರಿ ಕೆಲಸ ಮಾಡಿದರೆ 58 ವಾರ್ಡ್‌ಗಳಲ್ಲಿ 50 ವಾರ್ಡ್ ಗೆಲ್ಲುವ ವಿಶ್ವಾಸವಿದೆ‌’ ಎಂದರು. 

ಸಂಸದರಾದ ಮಂಗಲಾ ಅಂಗಡಿ ಮತ್ತು ಈರಣ್ಣ ಕಡಾಡಿ, ಶಾಸಕರಾದ ಶ್ರೀಮಂತ ಪಾಟೀಲ, ಅಭಯ ಪಾಟೀಲ, ಅನಿಲ್ ಬೆನಕೆ, ಆನಂದ ಮಾಮನಿ, ಮಹಾದೇವಪ್ಪ ಯಾದವಾಡ, ದುರ್ಯೋಧನ ಐಹೊಳೆ, ಪಿ.ರಾಜೀವ್, ಮಹಾಂತೇಶ ದೊಡ್ಡಗೌಡರ, ಮುಖಂಡರಾದ ಪ್ರಭಾಕರ ಕೋರೆ, ಎಂ.ಬಿ. ಝಿರಲಿ, ಉಜ್ವಲಾ ಬಡವನ್ನಾಚೆ ಹಾಗೂ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ನಂತರ ಮುಖಂಡರು ಸಭೆ ನಡೆಸಿ ಕಾರ್ಯತಂತ್ರ ರೂಪಿಸಿದರು.

ಶಾಸಕ ಸಹೋದರರಾದ ರಮೇಶ ಜಾರಕಿಹೊಳಿ‌ ಮತ್ತು ಬಾಲಚಂದ್ರ ಜಾರಕಿಹೊಳಿ ಗೈರು ಹಾಜರಾದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು