ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS Polls | 20ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ: ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಜಂಟಿ ಪತ್ರಿಕಾಗೋಷ್ಠಿ
Published 5 ಮೇ 2024, 12:36 IST
Last Updated 5 ಮೇ 2024, 12:36 IST
ಅಕ್ಷರ ಗಾತ್ರ

ಬೆಳಗಾವಿ: ‘ಗ್ಯಾರಂಟಿಗಳಿಂದಾಗಿ ಜನರಿಗೆ ಕಾಂಗ್ರೆಸ್‌ ಮೇಲೆ ನಂಬಿಕೆ, ವಿಶ್ವಾಸ ಮೂಡಿದೆ. ಈ ಬಾರಿ ದಕ್ಷಿಣ ಕರ್ನಾಟಕದಲ್ಲಿ ಹತ್ತು, ಉತ್ತರ ಕರ್ನಾಟಕದಲ್ಲಿ ಹತ್ತು ಸೇರಿ 20ಕ್ಕೂ ಹೆಚ್ಚು ಸ್ಥಾನಗಳನ್ನು ನಾವು ಗೆಲ್ಲುತ್ತೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

‘ಬಿಜೆಪಿಯವರಿಗೆ ಈ ಗ್ಯಾರಂಟಿಗಳನ್ನು ಕಂಡರೆ ಆಗುವುದಿಲ್ಲ. ಏನಾದರೂ ಮಾಡಿ ನಿಲ್ಲಿಸಬೇಕು ಎಂಬುದು ಬಿಜೆಪಿ ಹುನ್ನಾರ. ಬಡವರು, ರೈತರು, ಮಹಿಳೆಯರು, ಕಾರ್ಮಿಕರು, ದಲಿತರು ವಿರೋಧಿಗಳು ಅವರು. ಸಾಮಾನ್ಯ ಜನರ ಬಗ್ಗೆ ಯಾವತ್ತೂ ಅವರು ಯೋಚನೆ ಮಾಡುವುದಿಲ್ಲ’ ಎಂದು ಅವರು ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಕಿಡಿ ಕಾರಿದರು.

‘ಶಕ್ತಿ ಯೋಜನೆಯಲ್ಲಿ ಇಲ್ಲಿಯವರೆಗೆ ಮಹಿಳೆಯರು 202 ಕೋಟಿ ಟಿಕೆಟ್‌ ‍ಪಡೆದು ಉಚಿತ ಪ್ರಯಾಣ ಮಾಡಿದ್ದಾರೆ. ಅನ್ನಭಾಗ್ಯದ ಮೂಲಕ 1.18 ಕೋಟಿ ಬಡವರಿಗೆ ಅಕ್ಕಿ ನೀಡಲಾಗುತ್ತಿದೆ. ಗೃಹಜ್ಯೋತಿ ಮೂಲಕ 1.60 ಕೋಟಿ ಜನ ಉಚಿತ ವಿದ್ಯುತ್‌ ಪಡೆಯುತ್ತಿದ್ದಾರೆ. 1.21 ಕೋಟಿ ಕುಟುಂಬಗಳ ಯಜಮಾನಿಗೆ ತಲಾ ₹2000 ಕೊಡುತ್ತಿದ್ದೇವೆ. ಯುವನಿಧಿ ಮೂಲಕ ಪದವೀಧರರಿಗೆ ₹3,000, ಡಿಪ್ಲೊಮಾ ಪಡೆದವರಿಗೆ ₹1500 ಎರಡು ವರ್ಷ ಕೊಡುತ್ತಿದ್ದೇವೆ. ಎರಡು ವರ್ಷದೊಳಗೆ ಅವರಿಗೆ ಕೌಶಲ ಅಭಿವೃದ್ಧಿ ತರಬೇತಿ ನೀಡುತ್ತೇವೆ’ ಎಂದರು.

‘ಈವರೆಗೆ ₹44 ಸಾವಿರ ಕೋಟಿ ಗ್ಯಾರಂಟಿಗಳಿಗೆ ಖರ್ಚಾಗಿದೆ. 2023–24ರಲ್ಲಿ ₹36 ಸಾವಿರ ಕೋಟಿ ನೀಡಿದ್ದೇವೆ. ₹68 ಸಾವಿರ ಕೋಟಿಯನ್ನು ಅಭಿವೃದ್ಧಿಗೆ ನೀಡಿದ್ದೇವೆ. ₹3.71 ಲಕ್ಷ ಕೋಟಿಯ ಬಜೆಟ್‌ ಮಂಡಿಸಿದ್ದೇವೆ. ಗ್ಯಾರಂಟಿ ಹಾಗೂ ಅಭಿವೃದ್ಧಿ ಸೇರಿ ₹1.20 ಲಕ್ಷ ಕೋಟಿ ಇಟ್ಟಿದ್ದೇವೆ. ಆದರೆ, ಬಿಜೆಪಿಗರಿಗೆ ಇದು ಸಹನೆ ಆಗುತ್ತಿಲ್ಲ’ ಎಂದರು.

‘ಕೇಂದ್ರದಲ್ಲಿ ಕಾಂಗ್ರೆಸ್‌ ಸರ್ಕಾರ ಬಂದರೆ ಬಡ ಮಹಿಳೆಯರಿಗೆ ವರ್ಷಕ್ಕೆ ₹1 ಲಕ್ಷ, ಯುವಜನರಿಗೆ ₹1 ಲಕ್ಷ ಅಪ್ರೆಂಟಿಷಿಪ್‌ ಭತ್ಯೆ, ರೈತರ ಸಾಲ ಮನ್ನಾ, ಜಾತಿ ಗಣತಿ, ಬೆಂಬಲ ಬೆಲೆಗೆ ಕಾನೂನು ರಕ್ಷಣೆ ನೀಡಲಿದ್ದೇವೆ’ ಎಂದೂ ಪುನರುಚ್ಚರಿಸಿದರು.

ಸಚಿವ ಎಚ್‌.ಸಿ.ಮಹದೇವಪ್ಪ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪಸಿಂಗ್‌ ಸುರ್ಜೇವಾಲಾ, ಶಾಸಕ ಆಸೀಫ್‌ ಸೇಠ್‌, ಬಿಜೆಪಿ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ ಹಾಗೂ ಮುಖಂಡರು ಇದ್ದರು.

ಬಿಜೆಪಿಗೆ ಜನರ ಖುಷಿ ಬೇಕಿಲ್ಲ: ಶಿವಕುಮಾರ್‌

‘ಚುನಾವಣೆ ಬಳಿಕ ಗ್ಯಾರಂಟಿಗಳು ಸ್ಥಗಿತ ಆಗುತ್ತವೆ ಎಂದು ಬಿಜೆಪಿಯವರು ಭ್ರಮೆಯಲ್ಲಿದ್ದಾರೆ. ಜನರ ಖುಷಿ ನೋಡಲು ಅವರಿಗೆ ಆಗುತ್ತಿಲ್ಲ. ಆದರೆ, ಈಗಾಗಲೇ ₹56 ಸಾವಿರ ಕೋಟಿ ವರ್ಷಕ್ಕೆ ಘೋಷಿಸಿದ್ದೇವೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

‘ಪರಿಶಿಷ್ಟರ ಅನುದಾನ ಕಿತ್ತುಕೊಂಡು ಇನ್ಯಾರಿಗೋ ಕೊಡುತ್ತೇವೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಜನಸಂಖ್ಯೆಗೆ ಅನುಗುಣವಾಗಿ ಈ ಬಾರಿ ₹39 ಸಾವಿರ ಕೋಟಿ ಹೆಚ್ಚುವರಿ ಅನುದಾನವನ್ನು ಪರಿಶಿಷ್ಟರಿಗೆ ಇಟ್ಟಿದ್ದೇವೆ’ ಎಂದರು.

‘ಸಿ ಗ್ರೂಪ್‌ ದೇವಸ್ಥಾನಗಳಿಗೆ ಶೇ 10ರಷ್ಟು ಅನುದಾನ ಹಂಚಬೇಕು ಎಂದು ನಮ್ಮ ಸರ್ಕಾರ ನಿರ್ಧಾರಿಸಿದೆ. ದೊಡ್ಡ ದೇವಸ್ಥಾನಗಳ ಹಣ ತೆಗೆದು ಸಣ್ಣ ದೇವಸ್ಥಾನಳಿಗೆ ನೀಡುವುದು, ಅರ್ಚಕರಿಗೆ ನೆರವು ನೀಡುವುದು ನಮ್ಮ ಉದ್ದೇಶ. ಆದರೆ, ರಾಜ್ಯಪಾಲರಿಗೆ ದೂರು ನೀಡಿ ಇದನ್ನು ನಿಲ್ಲಿಸಿದ್ದಾರೆ. ಇವರು ಇನ್ಯಾವ ಧರ್ಮ ಕಾಪಾಡುತ್ತಿದ್ದಾರೆ. ನಿಜವಾಗಿ ನಾವು ಧರ್ಮ ಕಾಪಾಡುತ್ತಿದ್ದೇವೆ’ ಎಂದೂ  ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT