ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ನಿ ಪ್ರತಿಮೆಗೆ ಬುಲೆಟ್‌ ‍ಪ್ರೂಫ್ ಗಾಜು, ನಿತ್ಯ ಪೂಜೆ ಸಲ್ಲಿಕೆ: ಹೀಗೊಬ್ಬ ಪತಿ

ಮನೆಯಲ್ಲಿ ಪ್ರತಿಷ್ಠಾಪನೆ, ನಿತ್ಯವೂ ಪೂಜೆ ಸಲ್ಲಿಕೆ
Last Updated 27 ನವೆಂಬರ್ 2021, 7:57 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಗ್ಯಾಂಗ್‌ವಾಡಿಯ ವ್ಯಕ್ತಿಯೊಬ್ಬರು ತಮ್ಮ ಪತ್ನಿಯ ಪ್ರತಿಮೆಯನ್ನು ಮನೆಯಲ್ಲಿ ಸ್ಥಾಪಿಸಿ ಗಮನಸೆಳೆದಿದ್ದಾರೆ.

ಅವರ ಹೆಸರು ಶಿವ ಚೌಗುಲೆ. ಮಹಾನಗರಪಾಲಿಕೆ ಮಾಜಿ ಸದಸ್ಯ. ಅವರ ಪತ್ನಿ ಮೈನಾಬಾಯಿ ಚೌಗುಲೆ ಕೂಡ ನಗರಪಾಲಿಕೆ ಸದಸ್ಯೆಯಾಗಿದ್ದರು. ನ್ಯುಮೋನಿಯಾ ಸಮಸ್ಯೆಯಿಂದ ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ನಿಧನರಾದರು. ಮೂವತ್ತು ವರ್ಷ ತಮ್ಮೊಂದಿಗೆ ಜೀವನ ಹಂಚಿಕೊಂಡಿದ್ದ ಮತ್ತು ಕಷ್ಟ–ಸುಖದಲ್ಲಿ ಭಾಗಿಯಾಗಿದ್ದ ಮೈನಾಬಾಯಿ ಅವರನ್ನು ಮರೆಯಲು ಅವಕಾಶ ಆಗದಿರಲೆಂದು ಪ್ರತಿಮೆ ಮಾಡಿಸಿ ಪ್ರತ್ಯೇಕ ಷೋಕೇಸ್ ಸಿದ್ಧಪಡಿಸಿ ಇಟ್ಟಿದ್ದಾರೆ.

ಅವರು ಪ್ರತಿಮೆಯನ್ನು ದೀಪಾವಳಿ ಅಂಗವಾಗಿ ಈಚೆಗೆ ಮನೆ ತುಂಬಿಸಿಕೊಂಡರು. ವಾದ್ಯಮೇಳಗಳೊಂದಿಗೆ ರಸ್ತೆಯಲ್ಲಿ ಮೆರವಣಿಗೆಯಲ್ಲ ತಂದು ಪ್ರತಿಷ್ಠಾಪಿಸಿದ್ದಾರೆ. ಪತ್ನಿ ಮೇಲಿರುವ ಪ್ರೀತಿಯನ್ನು ವಿಶೇಷವಾಗಿ ಅವರು ವ್ಯಕ್ತಪಡಿಸಿದ್ದಾರೆ. ಇದು ಬಡಾವಣೆಯ ಜನರ ಗಮನಸೆಳೆದಿದೆ.

ಭಾವ ಬರಲೆಂದು

ಕುರ್ಚಿ ಮೇಲೆ ಆಸೀನರಾಗಿರುವ‍ ಭಂಗಿಯಲ್ಲಿರುವ ಪ್ರತಿಮೆ ಮಾಡಿಸಿರುವ ಶಿವ ನಿತ್ಯವೂ ಎರಡು ಬಾರಿ ಗಂಧದ ಕಡ್ಡಿ, ಕರ್ಪೂರ ಬೆಳಗಿ ಪೂಜಿಸಿ ಪ್ರೀತಿ ವ್ಯಕ್ತ‍ಪಡಿಸುತ್ತಾರೆ.

ಕೊಲ್ಹಾಪುರ ಜಿಲ್ಲೆಯವರಾದ ಅತ್ತೆಯ ಮಗಳನ್ನೇ ಶಿವ ಮದುವೆಯಾಗಿದ್ದರು. ‘ಪತ್ನಿಯು ನನ್ನೊಂದಿಗೆ ಸದಾ ಇದ್ದಾರೆ ಎಂಬ ಭಾವ ಬರಬೇಕೆಂದು ಪ್ರತಿಮೆ ಮಾಡಿಸಿದ್ದೇನೆ. ಕಪಿಲೇಶ್ವರ ಬಡಾವಣೆಯ ಮೂರ್ತಿಕಾರದಿಂದ ತಯಾರಿಸಿದ್ದೇನೆ’ ಎನ್ನುತ್ತಾರೆ.

ಪತ್ನಿ ಬಳಸುತ್ತಿದ್ದ ಚಿನ್ನದ ಸರ, ಬಳೆ ಹಾಗೂ ತಾಳಿ ಸೇರಿ ಒಟ್ಟು 20 ತೊಲ ಬಂಗಾರವನ್ನು ಐದು ಅಡಿಯ ಆ ಪ್ರತಿಮೆಗೇ ಹಾಕಿದ್ದಾರೆ. ಪಕ್ಕದಲ್ಲಿ ಕಬೋರ್ಡ್ ಮಾಡಿಸಿದ್ದು ಪತ್ನಿಯ 400ಕ್ಕೂ ಹೆಚ್ಚು ಸೀರೆಗಳಿದ್ದು ಅಲ್ಲಿ ಜೋಡಿಸಿಡಲು ಯೋಜಿಸಿದ್ದಾರೆ.

ಪ್ರತಿಷ್ಠಾನ ಸ್ಥಾಪನೆ

ಪತ್ನಿ ಹೆಸರಿನಲ್ಲಿ ಪ್ರತಿಷ್ಠಾನವನ್ನು ಅವರು ಸ್ಥಾಪಿಸಿದ್ದಾರೆ. ಅದರ ಮೂಲಕ ಸಮಾಜ ಸೇವಾ ಕಾರ್ಯ ಮಾಡಲು ಯೋಜಿಸಿದ್ದಾರೆ. ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಬೇಕು. ಪತ್ನಿ ಹೆಸರಿನಲ್ಲಿ ಆಸ್ಪತ್ರೆ ಕಟ್ಟಿಸಿ ಬಡವರಿಗೆ ಉಚಿತವಾಗಿ ಸೇವೆ ಸಿಗುವಂತೆ ಮಾಡಬೇಕೆಂದು ಯೋಜಿಸಿದ್ದಾರೆ. ಇದಕ್ಕಾಗಿ ಅನುಮತಿ ಕೋರಿ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದ್ದಾರೆ 45 ವರ್ಷದ ಶಿವ.

ಜನವರಿಗೆ, ಬಡ ಜನರ ಅನುಕೂಲಕ್ಕಾಗಿ ಆಂಬ್ಯುಲೆನ್ಸ್ ಸೇವೆ ನೀಡಲು ಸಿದ್ಧತೆ ನಡೆಸಿದ್ದಾರೆ.

ಪತ್ನಿ ಪ್ರತಿಮೆಯ ಮೇಲೆ ಚಿನ್ನಾಭರಣ ಹಾಕಿರುವುದರಿಂದ ಮತ್ತು ಸುರಕ್ಷತೆ ದೃಷ್ಟಿಯಿಂದ ಬುಲೆಟ್ ಪ್ರೂಫ್ ಗ್ಲಾಸ್ ಅಳವಡಿಸಿದ್ದಾರೆ. ಅದನ್ನು ಮುಂಬೈನಿಂದ ತರಿಸಿದ್ದಾರೆ. ಸಂಪೂರ್ಣ ಸಾಗವಾನಿಯಿಂದ ಮಾಡಿದ ಕುರ್ಚಿಯನ್ನು ಕೂಡ ಮುಂಬೈನಿಂದ ತರಿಸಿದ್ದಾರೆ. ಸಿಸಿಟಿವಿ ಕ್ಯಾಮೆರಾ ಅಳವಡಿಸುವುದಕ್ಕೂ ತಯಾರಿ ನಡೆಸಿದ್ದಾರೆ.

‘ಪತ್ನಿ ಎಲ್ಲೂ ಹೋಗಿಲ್ಲ. ಇಲ್ಲೇ ಜೊತೆಯಲ್ಲೇ ಇರುವ ಭಾವನೆ ನನಗಿದೆ. ದೇವರೊಂದಿಗೆ ಪತ್ನಿಯ ಪ್ರತಿಮೆ ಪೂಜಿಸುತ್ತಿರುವುದರಿಂದ ನೆಮ್ಮದಿ ಸಿಗುತ್ತದೆ’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT