ಬುಧವಾರ, ಆಗಸ್ಟ್ 4, 2021
25 °C
ಉಪ ಚುನಾವಣೆ: ಪ್ರಚಾರಕ್ಕೆ ಬಿಜೆಪಿ ಚಾಲನೆ ನೀಡಿದ ಯಡಿಯೂರಪ್ಪ

ನೆರೆ ಸಂತ್ರಸ್ತರಿಗೆ ಮನೆ ಕಟ್ಟಿಸಿಕೊಡುವ ಭರವಸೆ ನೀಡಿ: ಬೆಳಗಾವಿಯಲ್ಲಿ ಬಿಎಸ್‌ವೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಬೆಳಗಾವಿಯೊಂದಿಗೆ ರಾಜ್ಯದ ಯಾವುದೇ ಕಡೆಗಳಲ್ಲಿ ನೆರೆಯಿಂದ ಹಾಳಾದ ಮನೆಗಳು ಪಟ್ಟಿಯಲ್ಲಿ ಬಿಟ್ಟು ಹೋಗಿದ್ದರೆ ಸೇರಿಸಿ, ₹ 5 ಲಕ್ಷ ಪರಿಹಾರವನ್ನು 24 ಗಂಟೆಗಳಲ್ಲಿ ಕೊಡಲು ಸಿದ್ಧವಿದ್ದೇನೆ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.

ನಗರದ ಗಾಂಧಿ ಭವನದಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಮಂಗಲಾ ಸುರೇಶ ಅಂಗಡಿ ಅವರ ಪರವಾಗಿ ಪಕ್ಷದಿಂದ ಮಂಗಳವಾರ ಆಯೋಜಿಸಿದ್ದ ಪ್ರಚಾರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಚುನಾವಣೆ ನಂತರ ಮನೆಗಳನ್ನು ಕಟ್ಟಿಸಿಕೊಡುತ್ತೇವೆ ಎಂದು ಕಾರ್ಯಕರ್ತರು ಸಂತ್ರಸ್ತರಿಗೆ ಭರವಸೆ ಕೊಡಬೇಕು. ಸರ್ಕಾರದ ಬೊಕ್ಕಸಕ್ಕೆ ಎಷ್ಟೇ ಭಾರವಾದರೂ ಪರವಾಗಿಲ್ಲ, ಎಲ್ಲರಿಗೂ ಮನೆ ಕಟ್ಟಿಸಿಕೊಡುತ್ತೇನೆ’ ಎಂದು ತಿಳಿಸಿದರು.

ನಮ್ಮದೆಂದು ಭಾವಿಸಿರಿ

‘ಇದು ಮಂಗಲಾ ಅವರದಲ್ಲ, ನಮ್ಮ ಚುನಾವಣೆ ಎಂದು ಭಾವಿಸಿ ಕಾರ್ಯಕರ್ತರು ಕೆಲಸ ಮಾಡಬೇಕು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತ ಚಲಾಯಿಸಬೇಕು. ಆಗ ನಮ್ಮ ಅಭ್ಯರ್ಥಿ 2.50 ಲಕ್ಷ ಮತಗಳ ಅಂತರದಿಂದ ಗೆಲ್ಲಬಹುದು. ಬೇರೆ ಪಕ್ಷದ ಅಭ್ಯರ್ಥಿ ಹೆಸರು ಪ್ರಸ್ತಾಪ ಮಾಡುವ ಅಗತ್ಯವಿಲ್ಲ. ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಮನೆ ಮನೆಗೆ ತಿಳಿಸುವ ಕೆಲಸ ಮಾಡಬೇಕು. ಮಹಿಳೆಯರಿಗೆ ನೀಡಿರುವ ಸೌಲಭ್ಯಗಳನ್ನು ತಿಳಿಸಬೇಕು. ಯಾವ ಪಕ್ಷದವರನ್ನೂ ಟೀಕಿಸದೆ, ಎಲ್ಲರೂ ನಮ್ಮವರು ಎಂದು ಭಾವಿಸಿ ಎಲ್ಲ ಸಮುದಾಯದವರ ಮನೆಗಳಿಗೂ ಹೋಗಿ ಪ್ರಚಾರ ಮಾಡಬೇಕು’ ಎಂದು ಸಲಹೆ ನೀಡಿದರು.

‘ನೇಕಾರ ಸಮ್ಮಾನ್ ಯೋಜನೆ ದೇಶದಲ್ಲೇ ಮೊದಲಿಗೆ ಮಾಡಿದ ಸರ್ಕಾರ ನಮ್ಮದು. ಹಣಕಾಸಿನ ಪರಿಸ್ಥಿತಿ ಸರಿ ಇಲ್ಲದಿದ್ದರೂ ಕಿಸಾನ್ ಸಮ್ಮಾನ್‌ ಯೋಜನೆಯಲ್ಲಿ ರೈತರಿಗೆ ಹಣ ಕೊಟ್ಟಿದ್ದೇವೆ. ಇದೆಲ್ಲವನ್ನೂ ಮನವರಿಕೆ ಮಾಡಿಕೊಡಬೇಕು’ ಎಂದು ತಿಳಿಸಿದರು.

ಕಣ್ಣೀರಿಟ್ಟ ಮಂಗಲಾಗೆ ಶಶಿಕಲಾ ಸಾಂತ್ವನ

ಬೆಳಗಾವಿ: ಪ್ರಚಾರ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಅವರು ಪತಿ ದಿವಂಗತ ಸುರೇಶ ಅಂಗಡಿ ಅವರನ್ನು ನೆನೆದು ಕಣ್ಣೀರಿಟ್ಟರು.

ದಿ.ಸುರೇಶ ಅಂಗಡಿ ಅವರಿಗೆ ಕಾರ್ಯಕರ್ತರು ನಿರಂತರವಾಗಿ ಜೈಕಾರ ಹಾಕುತ್ತಿದ್ದರು. ಈ ವೇಳೆ ದುಃಖ ತಡೆಯಲಾಗದೆ ಮಂಗಲಾ ಅತ್ತರು. ಅವರಿಗೆ, ಪಕ್ಕದಲ್ಲಿ ಕುಳಿತಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಸಾಂತ್ವನ ಹೇಳಿದರು. ಅವರ ಕಣ್ಣಾಲಿಗಳೂ ತುಂಬಿಬಂದಿದ್ದವು.

ಇದಕ್ಕೂ ಮುನ್ನ ಮಾತನಾಡಿದ ಮಂಗಲಾ, ‘ಪತಿಯು ಕೋವಿಡ್ ಸಂದರ್ಭದಲ್ಲೂ ಜನರ ಮಧ್ಯೆ ಇದ್ದು ಅವರ ಸಂಕಷ್ಟ ಪರಿಹಾರಕ್ಕೆ ಶ್ರಮಿಸಿದ್ದರು. ಅವರು ಕೊರೊನಾ ಸೇನಾನಿಯಾಗಿ ಹುತಾತ್ಮರಾದರು ಎಂದರೆ ತಪ್ಪಾಗುವುದಿಲ್ಲ. ಅವರ ಕನಸು ನನಸು ಮಾಡಲು ಈ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಬೇಕು. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕೈಬಲಪಡಿಸಬೇಕು’ ಎಂದು ಕೋರಿದರು.

**

‘6 ತಾಸಲ್ಲಿ ತಲುಪುವಂತೆ ಮಾಡ್ತೀವಿ’

‘ಸಾಧ್ಯವೇ ಇಲ್ಲದಿರುವಂತಹ ಅನೇಕ ಕೆಲಸಗಳನ್ನು ರೈಲ್ವೆ ಸಚಿವರಾಗಿ ದಿವಂಗತ ಸುರೇಶ ಅಂಗಡಿ ಮಾಡಿದ್ದಾರೆ. ಅದನ್ನು ನಾವು ಮುಂದುವರಿಸಿ, ಬೆಳಗಾವಿಯಿಂದ ಬೆಂಗಳೂರಿಗೆ ರೈಲು 6 ತಾಸುಗಳಲ್ಲಿ ತಲುಪುವಂತಹ ಮಾರ್ಗವನ್ನು ಮೂರ್ನಾಲ್ಕು ವರ್ಷಗಳಲ್ಲಿ ಸಿದ್ಧ‍ಪಡಿಸುತ್ತೇವೆ’ ಎಂದು ಪ್ರಲ್ಹಾದ ಜೋಶಿ ತಿಳಿಸಿದರು.

‘ಕಾಂಗ್ರೆಸ್‌ನವರಿಗೆ ಅಭ್ಯರ್ಥಿಯೇ ಇರಲಿಲ್ಲ. ಒಲ್ಲೆ ಎಂದರೂ ಸತೀಶ ಜಾರಕಿಹೊಳಿ ಅವರನ್ನು ಒತ್ತಡದಿಂದ ನಿಲ್ಲಿಸಿದ್ದಾರೆ’ ಎಂದು ವ್ಯಂಗ್ಯವಾಡಿದರು. ‘ಆ ಅಭ್ಯರ್ಥಿ ಓಡಿ ಹೋಗುವಂತೆ ಪಕ್ಷದವರು ಮಾಡಬೇಕು’ ಎಂದರು.

***

ಈಗಿರುವುದು ನಕಲಿ ಕಾಂಗ್ರೆಸ್. ಇರುವ ಗಾಂಧಿಗಳು ನಕಲಿ ಗಾಂಧಿಗಳು. ರಾಹುಲ್ ಗಾಂಧಿಗೆ ಗಂಭೀರತೆ ಇಲ್ಲ. ಕಾಂಗ್ರೆಸ್‌ಗೆ ದೇಶದ ಸುಪ್ರೀಂ ಕೋರ್ಟ್, ಚುನಾವಣಾ ಆಯೋಗದ ಮೇಲೂ ವಿಶ್ವಾಸ ಇಲ್ಲ

ಪ್ರಲ್ಹಾದ ಜೋಶಿ, ಕೇಂದ್ರ ಸಚಿವ

***

ಬಿಜೆಪಿಯಿಂದ ಅಲ್ಪಸಂಖ್ಯಾತರನ್ನು ನಿರ್ಲಕ್ಷ್ಯ ಮಾಡಲಾಗುತ್ತದೆ ಎನ್ನುವುದು ತಪ್ಪು ತಿಳಿವಳಿಕೆ. ದೊಡ್ಡ ಪ್ರಮಾಣದಲ್ಲಿ ಅವರಿಗೆ ಅನುದಾನ ನೀಡಲಾಗುತ್ತಿದೆ

ಶ್ರೀಮಂತ ಪಾಟೀಲ ಸಚಿವ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು