ಕೌಜಲಗಿ: ‘ದೇಶದ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಸಂಕಲ್ಪ ಮಾಡಿದ್ದಾರೆ. ಹಿಂದುಳಿದ ವರ್ಗಗಳ ಆಯೋಗಕ್ಕೆ ಹೆಚ್ಚಿನ ಶಕ್ತಿ ನೀಡಿದ್ದಾರೆ’ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ ಸಿಂಗ್ ಚವ್ಹಾಣ ಹೇಳಿದರು.
ಪಟ್ಟಣದಲ್ಲಿ ಗುರುವಾರ ಜರುಗಿದ ಬಿಜೆಪಿಯ ಬೆಳಗಾವಿ ಲೋಕಸಭಾ ಕ್ಷೇತ್ರದ ಹಿಂದುಳಿದ ವರ್ಗಗಳ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಹಿಂದುಳಿದ ವರ್ಗಗಳ ಅಭಿವೃದ್ಧಿ ಕೇವಲ ಬಿಜೆಪಿಯಿಂದ ಸಾಧ್ಯ’ ಎಂದರು.
‘ದೇವರು ಮೋದಿ ಅವರ ರೂಪದಲ್ಲಿ ಈ ದೇಶಕ್ಕೆ ಸಿಕ್ಕಿದ್ದಾರೆ. ಇಡೀ ವಿಶ್ವ ಮೋದಿ ಅವರ ಆಡಳಿತ ವೈಖರಿ ಮೆಚ್ಚಿದೆ. ಜಗತ್ತಿನ ಶಕ್ತಿಶಾಲಿ ದೇಶಗಳಲ್ಲಿ ಭಾರತ ನಿಲ್ಲುವಂತೆ ಮಾಡುವುದು ಅವರ ಕನಸು’ ಎಂದರು.
‘ಭಾರತ್ ಜೋಡೋ ಮಾಡಿದ ರಾಹುಲ್ ಗಾಂಧಿ ಅವರು ವಿದೇಶಕ್ಕೆ ಹೋದ ಸಂದರ್ಭದಲ್ಲಿ ಭಾರತದ ಬಗ್ಗೆ ಅವಹೇಳನಕಾರಿ ಆಗಿ ಮಾತನಾಡುತ್ತಾರೆ. ಇಂಥವರು ದೇಶಭಕ್ತ ಆಗಲು ಸಾಧ್ಯವೇ ಇಲ್ಲ. ರಾಹುಲ್ ಗಾಂಧಿ ದೇಶ ಭಕ್ತಿಯ ಬಗ್ಗೆ ನಮಗೆ ಸಂದೇಹ ಉಂಟಾಗಿದೆ’ ಎಂದರು.
‘ಮಧ್ಯಪ್ರದೇಶದಲ್ಲಿ ಯಾವುದೇ ಕಾರ್ಯಕ್ರಮವನ್ನು ಕನ್ಯಾಪೂಜೆಯಿಂದ ಆರಂಭಿಸುವ ಸಂಪ್ರದಾಯವಿದೆ. ಹೆಣ್ಣು ಮಕ್ಕಳಿಗೆ ಎಲ್ಲಿ ಗೌರವ– ಸನ್ಮಾನಗಳು ಸಿಗುತ್ತವೆಯೋ ಅಲ್ಲಿ ದೇವರು ವಾಸ ಮಾಡುತ್ತಾನೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಮಹಿಳೆಯರ ಸರ್ವಾಂಗೀಣ ಅಭ್ಯುದಯ ಮತ್ತು ಕಲ್ಯಾಣಕ್ಕಾಗಿ ಯೋಜನೆಗಳನ್ನು ರೂಪಿಸಿದೆ’ ಎಂದು ಹೇಳಿದರು.
ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ‘ಅರಭಾವಿ ಕ್ಷೇತ್ರದಲ್ಲಿ ಕಳೆದ 19 ವರ್ಷಗಳಿಂದ ಸಾಕಷ್ಟು ಅಭಿವೃದ್ಧಿ ಕೈಗೊಳ್ಳಲಾಗಿದೆ. ವಿರೋಧಿಗಳು ಜನರನ್ನು ಯಾಮಾರಿಸುತ್ತಿದ್ದಾರೆ. ವದಂತಿಗಳನ್ನು ಸೃಷ್ಟಿಸುತ್ತಿದ್ದಾರೆ. ಅಭಿವೃದ್ದಿ ವಿಷಯಗಳಿಗೆ ಸಂಬಂಧಿಸಿದಂತೆ ಬಹಿರಂಗ ಚರ್ಚೆಗೆ ಬನ್ನಿ’ ಎಂದರು.
ವೇದಿಕೆಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ, ಮಾಜಿ ಸಚಿವ ಶಶಿಕಾಂತ ನಾಯಿಕ, ಮಾಜಿ ಶಾಸಕರಾದ ಜಗದೀಶ ಮೆಟಗುಡ್ಡ, ಡಾ.ವಿಶ್ವನಾಥ ಪಾಟೀಲ, ಯುವ ಧುರೀಣ ಸರ್ವೋತ್ತಮ ಭೀಮಶಿ ಜಾರಕಿಹೊಳಿ, ಒಬಿಸಿ ಜಿಲ್ಲಾ ಮೋರ್ಚಾ ಅಧ್ಯಕ್ಷ ಉಮೇಶ ಪುರಿ, ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯ ಲಕ್ಷ್ಮಣ ತಪಸಿ, ಮಲ್ಲಣ್ಣ ಯಾದವಾಡ, ಅರಭಾವಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ, ಒಬಿಸಿ ಮಂಡಲ ಅಧ್ಯಕ್ಷ ಸಂಗಣ್ಣ ಕಂಟಿಕಾರ ಒಬಿಸಿ ಮೋರ್ಚಾ ಜಿಲ್ಲಾ ಪ್ರಬಾರಿ ಗೋವಿಂದ ಕೊಪ್ಪದ, ಮುಖಂಡರಾದ ರಾಜೇಂದ್ರ ಸಣ್ಣಕ್ಕಿ, ಪ್ರಭಾ ಶುಗರ್ ನಿರ್ದೇಶಕ ಎಂ.ಆರ್.ಭೋವಿ ಇತರರು ಇದ್ದರು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.