ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸಿ ಕಚೇರಿಯಲ್ಲಿ ಮೂವರು ಹೆಣ್ಣುಮಕ್ಕಳಿಗೆ ಫಿನೈಲ್ ಕುಡಿಸಿ, ತಾನೂ ಕುಡಿದ ಮಹಿಳೆ

ಜಿಲ್ಲಾಧಿಕಾರಿ ಕಚೇರಿಯಲ್ಲೇ ಮಕ್ಕಳೊಂದಿಗೆ ಆತ್ಮಹತ್ಯೆ ಯತ್ನ
Last Updated 8 ಮಾರ್ಚ್ 2023, 18:08 IST
ಅಕ್ಷರ ಗಾತ್ರ

ಬೆಳಗಾವಿ: ಜೀವನ ನಿರ್ವಹಣೆ ಕಷ್ಟವಾದ ಕಾರಣಕ್ಕೆ ಮಹಿಳೆಯೊಬ್ಬರು ಬುಧವಾರ, ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮೂವರು ಹೆಣ್ಣುಮಕ್ಕಳಿಗೆ ಪಿನೈಲ್‌ ಕುಡಿಸಿ ತಾವೂ ಕುಡಿದು ಆತ್ಮಹತ್ಯೆಗೆ ಯತ್ನಿಸಿದರು. ತಕ್ಷಣ ಕಾರ್ಯ‍ಪ್ರವೃತ್ತರಾದ ಸಿಬ್ಬಂದಿ ನಾಲ್ವರನ್ನೂ ಜಿಲ್ಲಾಸ್ಪತ್ರೆಗೆ ದಾಖಲಿಸಿದರು.

ನಗರದ ಅನಗೋಳದ ನಿವಾಸಿ ಸರಸ್ವತಿ ಅದೃಶ್ಯಪ್ಪ ಹಂಪಣ್ಣವರ (40) ಆತ್ಮಹತ್ಯೆಗೆ ಯತ್ನಿಸಿದವರು. ಮಕ್ಕಳಾದ ಸೃಷ್ಟಿ (14), ಸಾಕ್ಷಿ (8) ಹಾಗೂ ಸಾನ್ವಿ (3) ನಾಲ್ವರೂ ಅಸ್ವಸ್ಥರಾಗಿದ್ದಾರೆ.

ಬೈಲಹೊಂಗಲ ಜನತಾ ಪ್ಲಾಟ್‌ನಲ್ಲಿ ವಾಸವಾಗಿದ್ದ ಸರಸ್ವತಿ ಹಾಗೂ ಅದೃಶ್ಯಪ್ಪ ಅವರ ಕುಟುಂಬ ಕೆಲವು ವರ್ಷಗಳ ಹಿಂದೆ ಬೆಳಗಾವಿ ನಗರಕ್ಕೆ ಬಂದು ನೆಲೆಸಿದೆ. ಕಟಿಂಗ್‌ ಸೆಲೂನ್‌ನಲ್ಲಿ ಕೆಲಸ ಮಾಡುತ್ತಿದ್ದ ಅದೃಶ್ಯಪ್ಪ ಬಾಡಿಗೆ ಮನೆ ಮಾಡಿಕೊಂಡು ಕುಟುಂಬ
ಸಲಹುತ್ತಿದ್ದರು.

ಜೀವನ ನಿರ್ವಹಣೆಗಾಗಿ ಅದೃಶ್ಯ‍ಪ್ಪ ಸಾಕಷ್ಟು ಜನರ ಕಡೆ ಸಾಲ ಮಾಡಿದ್ದಾರೆ. ಸಾಲಗಾರರ ಕಿರುಕುಳ ಹೆಚ್ಚಾಗಿದ್ದರಿಂದ 15 ದಿನಗಳ ಹಿಂದೆ ಪತ್ನಿ, ಮಕ್ಕಳನ್ನು ಬಿಟ್ಟು ತಲೆಮರೆಸಿಕೊಂಡಿದ್ದಾರೆ. ಇತ್ತ, ಸಾಲಗಾರರು ದಿನವೂ ಸರಸ್ವತಿ ಅವರಿಗೆ ಕಿರುಕುಳ ನೀಡಲು ಆರಂಭಿಸಿದ್ದರು ಎಂದು ಮಹಿಳೆ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.

ಸಾಲಗಾರರ ಕಿರುಕುಳ, ಮಕ್ಕಳಿಗೆ ಊಟಕ್ಕೂ ಗತಿ ಇಲ್ಲದ ಸ್ಥಿತಿ. ಬೇಸರ ಗೊಂಡ ಸರಸ್ವತಿ ಜೀವನ ನಿರ್ವಹಣೆಗೆ ಸಹಾಯ ಕೋರಿ ಬುಧವಾರ ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದರು.

ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ಅನ್ಯಕಾರ್ಯ ನಿಮಿತ್ತ ಕಚೇರಿಯಿಂದ ಹೊರಗಿದ್ದರು. ಕಚೇರಿ ಆವರಣದಲ್ಲಿ ಮಹಿಳೆ ಕಾದು ಕುಳಿತರು. ಆಗ ಮಕ್ಕಳು ಅಸ್ವಸ್ಥರಾಗಿ, ವಾಂತಿ ಮಾಡತೊಡಗಿದರು. ಕಚೇರಿ ಸಿಬ್ಬಂದಿ ಮಕ್ಕಳಿಗೆ ನೀರು ಕೊಟ್ಟು ಉಪಚರಿಸಲು ಮುಂದಾದರು.

‘ನಮ್ಮ ತಾಯಿ ಜ್ಯೂಸ್‌ ಎಂದು ಏನನ್ನೋ ಕುಡಿಸಿದ್ದಾಳೆ’ ಎಂದು ಹಿರಿಯ ಪುತ್ರಿ ಸೃಷ್ಟಿ ಸಿಬ್ಬಂದಿಗೆ ತಿಳಿಸಿದಳು. ಅಗ ಎಚ್ಚೆತ್ತುಕೊಂಡ ಸಿಬ್ಬಂದಿ ಪರಿಶೀಲಿಸಿದಾಗ ಎಲ್ಲರೂ ಪಿನೈಲ್‌ ಕುಡಿದಿದ್ದು ಗಮನಕ್ಕೆ ಬಂತು. ಸ್ಥಳಕ್ಕೆ ಧಾವಿಸಿದ ಪೊಲೀಸರು ತಕ್ಷಣ ಅವರನ್ನು ಹತ್ತಿರದಲ್ಲೇ ಇರುವ ಜಿಲ್ಲಾಸ್ಪತ್ರೆಗೆ ದಾಖಲಿಸಿದರು.

ಬೆಳಗಾವಿಯ ಮಾರ್ಕೆಟ್ ಠಾಣೆ ಪೊಲೀಸರು ಮಹಿಳೆಯಿಂದ ಹೇಳಿಕೆ ಪಡೆದಿದ್ದಾರೆ. ಪ್ರಕರಣ ದಾಖಲಾಗಿಲ್ಲ.

‘ಅಸ್ವಸ್ಥರಾಗಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ’ ಎಂದು ಆಸ್ಪತ್ರೆ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ, ‘ಚುನಾವಣಾ ಕೆಲಸದ ಕಾರಣ ನಾನು ಕಚೇರಿಯಿಂದ ಹೊರಗಿದ್ದೇನೆ. ಘಟನೆ ನಮ್ಮ ಕಚೇರಿಯಲ್ಲಿ ನಡೆದಿಲ್ಲ. ಕಚೇರಿ ಮುಂದಿನ ಬಸ್‌ ನಿಲ್ದಾಣದಲ್ಲಿ ನಡೆದಿದೆ. ಮಹಿಳೆ ಕಚೇರಿಗೆ ಬರುವ ಮುನ್ನವೇ ಪಿನೈಲ್‌ ಕುಡಿದಿದ್ದಾಗಿ ಸಿಬ್ಬಂದಿ ತಿಳಿಸಿದ್ದಾರೆ. ಹತ್ತಿರದಲ್ಲಿದ್ದವರು ಅವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಇದೂವರೆಗೆ ಮಹಿಳೆ ಅಥವಾ ಅವರ ಕಡೆಯಿಂದ ಯಾರೂ ಮನವಿ ನೀಡಿಲ್ಲ. ಆದರೂ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡಲು ತಿಳಿಸಿದ್ದೇನೆ’ ಎಂದು ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT