ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಿತ್ತೂರು ಉತ್ಸವ | ಈ ಬಾರಿ ವಿದೇಶದ ಮಹಿಳಾ ಕಲಿಗಳ ಕಾದಾಟ

ಕಿತ್ತೂರು ಉತ್ಸವದ ದ್ವಿಶತಮಾನೋತ್ಸವಕ್ಕೆ ಅಂತರರಾಷ್ಟ್ರೀಯ ಮಹಿಳಾ ಕುಸ್ತಿ
Published : 18 ಸೆಪ್ಟೆಂಬರ್ 2024, 5:09 IST
Last Updated : 18 ಸೆಪ್ಟೆಂಬರ್ 2024, 5:09 IST
ಫಾಲೋ ಮಾಡಿ
Comments

ಬೆಳಗಾವಿ: ಮ್ಯಾಟ್‌ ಕುಸ್ತಿಯೇ ಜನಪ್ರಿಯವಾಗುತ್ತಿರುವ ಈ ಕಾಲಘಟ್ಟದಲ್ಲೂ, ಸಾಂಪ್ರದಾಯಿಕವಾಗಿ ಮಣ್ಣಿನ ಕಣದಲ್ಲಿ ಅಂತರರಾಷ್ಟ್ರೀಯ ಮಹಿಳಾ ಕುಸ್ತಿ ಪಂದ್ಯಾವಳಿ ಆಯೋಜನೆಗೆ ತಯಾರಿ ನಡೆದಿದೆ. ಈ ಬಾರಿ ಕಿತ್ತೂರು ಉತ್ಸವದಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ವಿದೇಶದ ಮಹಿಳಾ ಕಲಿಗಳು ಕಾದಾಟ ನಡೆಸಲಿದ್ದಾರೆ. 

ಪ್ರತಿವರ್ಷ ಅಕ್ಟೋಬರ್‌ 23ರಿಂದ 25ರವರೆಗೆ ಕಿತ್ತೂರು ಉತ್ಸವ ವೈಭವದಿಂದ ನೆರವೇರುತ್ತದೆ. ಕೊನೆಯ ದಿನದಂದು ರಾಷ್ಟ್ರಮಟ್ಟದ ಪುರುಷರು ಮತ್ತು ಮಹಿಳೆಯರ ಕುಸ್ತಿ ಪಂದ್ಯಾವಳಿ ನಡೆಯುತ್ತಿತ್ತು. ಕಳೆದ ವರ್ಷ ಮೊದಲ ಬಾರಿ ನಡೆದಿದ್ದ ಅಂತರರಾಷ್ಟ್ರೀಯ ಪುರುಷರ ಕುಸ್ತಿ ಪಂದ್ಯಾವಳಿಯಲ್ಲಿ ವಿದೇಶದ ಇಬ್ಬರು ಜಟ್ಟಿಗಳು ಭಾಗವಹಿಸಿ, ಗಮನ ಸೆಳೆದಿದ್ದರು.

ರಾಷ್ಟ್ರಮಟ್ಟದ ಮಹಿಳೆಯರ ಕುಸ್ತಿಯಲ್ಲಿ ಕರ್ನಾಟಕ, ಮಹಾರಾಷ್ಟ್ರ, ಹರಿಯಾಣದ ಜಟ್ಟಿಗಳು ಭಾಗವಹಿಸಿದ್ದರು. ಈ ಬಾರಿ ಕಿತ್ತೂರು ಉತ್ಸವ ದ್ವಿಶತಮಾನೋತ್ಸವದ ಸಂಭ್ರಮದಲ್ಲಿದೆ. ಇದರ ಸವಿನೆನಪಿಗಾಗಿ ಇದೇ ಮೊದಲ ಬಾರಿ ಅಂತರರಾಷ್ಟ್ರೀಯ ಮಹಿಳಾ ಕುಸ್ತಿ ಆಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.  

ವಿವಿಧ ದೇಶದವರ ಸಂಪರ್ಕ:

‘ಈ ಸಲ ಅಂತರರಾಷ್ಟ್ರೀಯ ಮಟ್ಟದಲ್ಲಿ ಪುರುಷರು ಮತ್ತು ಮಹಿಳೆಯರ ಕುಸ್ತಿ ಪಂದ್ಯಾವಳಿ ಆಯೋಜನೆಗೆ ಯೋಜನೆ ಸಿದ್ಧಪಡಿಸಿದ್ದೇವೆ. ಇಲ್ಲಿ ಮಣ್ಣಿನ ಕಣದಲ್ಲಿ ಕುಸ್ತಿ ನಡೆಯುವುದರಿಂದ ಮ್ಯಾಟ್‌ ಕುಸ್ತಿ ಆಡುವವರನ್ನು ಕರೆಯಿಸಲಾಗದು. ಹಾಗಾಗಿ ಉಕ್ರೇನ್‌, ಬಲ್ಗೇರಿಯಾ, ಜಾರ್ಜಿಯಾ, ಇರಾನ್‌, ಉಜ್ಬೇಕಿಸ್ತಾನ್‌ನ ಪುರುಷ ಮತ್ತು ಮಹಿಳಾ ಕುಸ್ತಿಪಟುಗಳ ಮಾಹಿತಿ ಸಂಗ್ರಹಿಸಿ, ಈಗಿನಿಂದಲೇ ಸಂಪರ್ಕಿಸುತ್ತಿದ್ದೇವೆ’ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಬಿ.ಶ್ರೀನಿವಾಸ ‘ಪ್ರಜಾವಾಣಿ’ಗೆ ತಿಳಿಸಿದರು.

‘ಉತ್ಸವದ ದ್ವಿಶತಮಾನೋತ್ಸವದ ಕಾರಣಕ್ಕೆ ಈ ಬಾರಿ ಹೆಚ್ಚಿನ ಕುಸ್ತಿಪಟುಗಳನ್ನು ಕಿತ್ತೂರಿನತ್ತ ಸೆಳೆಯಲಿದ್ದೇವೆ. ಅಂತರರಾಷ್ಟ್ರೀಯ ಮಟ್ಟದ ಪುರುಷರ ವಿಭಾಗದಲ್ಲಿ ಕನಿಷ್ಠ 3 ಜೋಡಿ, ಮಹಿಳೆಯರ ವಿಭಾಗದಲ್ಲಿ ಕನಿಷ್ಠ 2 ಜೋಡಿ ಆಹ್ವಾನಿಸಲು ಪ್ರಯತ್ನಿಸುತ್ತಿದ್ದೇವೆ. ವಿವಿಧ ಕುಸ್ತಿಪಟುಗಳನ್ನು ಸಂಪರ್ಕಿಸಿ, ಅವರ ತೂಕ, ಎಲ್ಲೆಲ್ಲಿ ಪಂದ್ಯಾವಳಿಯಲ್ಲಿ ಆಡಿದ್ದಾರೆ, ಮಾಡಿದ ಸಾಧನೆ ಮತ್ತಿತರ ಮಾಹಿತಿ ಕಲೆಹಾಕುತ್ತಿದ್ದೇವೆ’ ಎಂದು ಕರ್ನಾಟಕ ರಾಜ್ಯ ಭಾರತೀಯ ಶೈಲಿ ಕುಸ್ತಿ ಸಂಘದ ಅಧ್ಯಕ್ಷ ರತನಕುಮಾರ್‌ ಮಠಪತಿ ಹೇಳಿದರು.

ಈ ಬಾರಿ ಕುಸ್ತಿ ಪಂದ್ಯಾವಳಿಯಲ್ಲಿ ಅಂತರರಾಷ್ಟ್ರೀಯ ಪಟುಗಳನ್ನು ಆಹ್ವಾನಿಸುವ ಜತೆಗೆ ಸ್ಥಳೀಯ ಕುಸ್ತಿಪಟುಗಳಿಗೂ ಆದ್ಯತೆ ಕೊಡುತ್ತೇವೆ.
ಬಿ.ಶ್ರೀನಿವಾಸ, ಉಪನಿರ್ದೇಶಕ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಳಗಾವಿ

‘ಕಳೆದ ಬಾರಿಯ ಉತ್ಸವದಲ್ಲಿ ಕುಸ್ತಿ, ವಾಲಿಬಾಲ್‌, ಕಬಡ್ಡಿ, ಸೈಕ್ಲಿಂಗ್‌, ಜಲಕ್ರೀಡೆ ಮೊದಲಾದ  ಕ್ರೀಡೆಗಳ ಆಯೋಜನೆಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಸರ್ಕಾರ ₹15 ಲಕ್ಷ ಅನುದಾನ ಕೊಟ್ಟಿತ್ತು. ಈ ಬಾರಿ ₹50 ಲಕ್ಷ ಅನುದಾನ ಕೊಟ್ಟರೆ, ವಿವಿಧ ಕ್ರೀಡೆಗಳನ್ನು ವ್ಯವಸ್ಥಿತವಾಗಿ ಆಯೋಜಿಸಬಹುದು’ ಎನ್ನುತ್ತಾರೆ ಅಧಿಕಾರಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT