ಬುಧವಾರ, ಜುಲೈ 28, 2021
28 °C
ಚಿಕ್ಕೋಡಿ

ಪ್ರತ್ಯೇಕ ಜಿಲ್ಲೆ, ಯುವಜನರಿಗೆ ಉದ್ಯೋಗ: ನೂತನ ಸಂಸದ ಅಣ್ಣಾಸಾಹೇಬ ಜೊಲ್ಲೆ ಆದ್ಯತೆ

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಕ್ಷೇತ್ರದಲ್ಲಿನ ಬಹಳಷ್ಟು ಯುವಕ, ಯುವತಿಯರು ಉದ್ಯೋಗಕ್ಕಾಗಿ ಪರದಾಡುತ್ತಿದ್ದಾರೆ. ಕೆಲಸಕ್ಕಾಗಿ ಮಹಾರಾಷ್ಟ್ರದ ಕೊಲ್ಹಾಪುರ, ಪುಣೆ ಮೊದಲಾದ ಕಡೆಗಳಿಗೆ ಹೋಗುತ್ತಿದ್ದಾರೆ. ಇದನ್ನು ತಡೆಯುವುದು, ಇದಕ್ಕಾಗಿ ಇಲ್ಲಿಯೇ ಕೈಗಾರಿಕೆಗಳನ್ನು ಸ್ಥಾಪಿಸಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡುವುದು ನನ್ನ ಮೊದಲ ಆದ್ಯತೆಯಾಗಿದೆ ಹಾಗೂ ಮುಖ್ಯ ಕಾರ್ಯಸೂಚಿಯಾಗಿದೆ’ ಎಂದು ಚಿಕ್ಕೋಡಿಯ ನೂತನ ಸಂಸದ ಅಣ್ಣಾಸಾಹೇಬ ಜೊಲ್ಲೆ ತಿಳಿಸಿದರು.

‘ಪ್ರಜಾವಾಣಿ’ಗೆ ಶುಕ್ರವಾರ ನೀಡಿದ ಸಂದರ್ಶನದಲ್ಲಿ ಅವರು ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.

* ನಿಮ್ಮ ಗೆಲುವಿಗೆ ಕಾರಣಗಳೇನಿರಬಹುದು?

ಪ್ರಧಾನಿ ನರೇಂದ್ರ ಮೋದಿ ಅಲೆ ಮುಖ್ಯವಾಗಿ ನೆರವಾಗಿದೆ. ಮೂರು ದಶಕಗಳಿಂದಲೂ ನಾನು ಸಹಕಾರ ಕ್ಷೇತ್ರದಲ್ಲಿ ಮಾಡಿದ ಸೇವೆ, ಕೈಗೊಳ್ಳುತ್ತಿರುವ ಸಾಮಾಜಿಕ ಚಟುವಟಿಕೆಗಳು ಶ್ರೀರಕ್ಷೆಯಾಗಿವೆ. ಪಕ್ಷದ ಎಲ್ಲ ಕಾರ್ಯಕರ್ತರು, ಪದಾಧಿಕಾರಿಗಳು, ಶಾಸಕರು, ಮಾಜಿ ಶಾಸಕರು, ಸಂಸದರು, ಮಾಜಿ ಸಂಸದರು, ಜನಪ್ರತಿನಿಧಿಗಳು ಮಾಡಿದ ಟೀಂವರ್ಕ್‌ನಿಂದ ಗೆಲುವಾಗಿದೆ. ಇದು ನನ್ನ ಗೆಲುವಲ್ಲ; ಜನರ ಗೆಲುವು. ಜನರು ನನ್ನ ಮೇಲೆ ನಂಬಿಕೆ ಇಟ್ಟು ಅಭೂತಪೂರ್ವ ಮುನ್ನಡೆಯ ಜಯ ತಂದುಕೊಟ್ಟಿದ್ದಾರೆ.

* ತಕ್ಷಣದ ಕಾರ್ಯಯೋಜನೆ ಏನು?

ಸಂಸದನಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆಯೇ ಕ್ಷೇತ್ರದಾದ್ಯಂತ ಸಂಚಾರ ಶುರು ಮಾಡುತ್ತೇನೆ. ಪ್ರಚಾರಕ್ಕೆ ಹೋದಾಗ ಜನರು ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದರು. ಅವುಗಳು ಹಾಗೂ ಪ್ರವಾಸದ ವೇಳೆ ಕಂಡುಬರುವ ಬೇಡಿಕೆಗಳ ಈಡೇರಿಕೆ, ಸಮಸ್ಯೆಗಳಿಗೆ ಪರಿಹಾರಕ್ಕೆ ಹಂತ ಹಂತವಾಗಿ ಕೆಲಸ ಮಾಡುವ ಯೋಜನೆ ಇದೆ.

* ಚಿಕ್ಕೋಡಿಯನ್ನು ಪ್ರತ್ಯೇಕ ಜಿಲ್ಲೆ ಮಾಡಬೇಕೆಂಬ ಬೇಡಿಕೆಗೆ ನಿಮ್ಮ ಪ್ರತಿಕ್ರಿಯೆ ಏನು?

ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಯಾಗಬೇಕು ಎನ್ನುವುದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಇದಕ್ಕಾಗಿ ಹೋರಾಡುತ್ತೇನೆ. ನಮ್ಮ ಭಾಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜಿಲ್ಲೆಯ ಸ್ಥಾನಮಾನ ದೊರೆಯಬೇಕಾದ ಅಗತ್ಯವಿದೆ.

* ಮತ್ಯಾವ ಯೋಜನೆಗಳಿಗೆ ಆದ್ಯತೆ ಕೊಡುತ್ತೀರಿ?

ರೈತರಿಗೆ, ಕೃಷಿಗೆ ಅನುಕೂಲ ಮಾಡಿಕೊಡಲು ಮಹಾಲಕ್ಷ್ಮಿ ಏತ ನೀರಾವರಿ, ಕರಗಾಂವ ಏತ ನೀರಾವರಿ ಯೋಜನೆಗಳ ಅನುಷ್ಠಾನ. ಶಾಶ್ವತ ನೀರಾವರಿ ಯೋಜನೆಗಳನ್ನು ಮಾಡಿಸುವುದು. ಪ್ರತಿ ಬೇಸಿಗೆ ಸಂದರ್ಭದಲ್ಲೂ ಕೃಷ್ಣಾ ನದಿ ಬತ್ತುತ್ತದೆ. ಆಗ, ನೀರಿಗೆ ತೀವ್ರ ತೊಂದರೆ ಉಂಟಾಗುತ್ತದೆ. ಈ ಬಾರಿ ಮಹಾರಾಷ್ಟ್ರದಿಂದ ನೀರು ದೊರೆತಿಲ್ಲ. ಮುಂದಿನ ವರ್ಷಗಳಲ್ಲಿ ಹೀಗಾಗದಂತೆ ನೋಡಿಕೊಳ್ಳುವುದಕ್ಕಾಗಿ ಕ್ರಮ ಕೈಗೊಳ್ಳಬೇಕಾಗಿದೆ. ಸಂಸದನಾಗಿ ನನ್ನ ಹಂತದಲ್ಲೂ ಶ್ರಮಿಸುತ್ತೇನೆ. ರಾಜ್ಯ ಸರ್ಕಾರ ಮಹಾರಾಷ್ಟ್ರದೊಂದಿಗೆ ಒಪ್ಪಂದ ಮಾಡಿಕೊಳ್ಳುವ ನಿಟ್ಟಿನಲ್ಲಿ ಒತ್ತಡ ತರಲಾಗುವುದು. ಅಥಣಿ, ಕಾಗವಾಡ, ಚಿಕ್ಕೋಡಿ ಭಾಗದಲ್ಲಿ ಸವಳು–ಜವಳು ಸಮಸ್ಯೆಯಿಂದಾಗಿ ಮಣ್ಣು ಕೃಷಿಗೆ ಯೋಗ್ಯವಾಗಿಲ್ಲ. ಈ ಸಮಸ್ಯೆ ನಿವಾರಣೆಗೆ ಒತ್ತು ನೀಡಲಾಗುವುದು.

* ರೈಲ್ವೆ ಯೋಜನೆಗಳ ಅಗತ್ಯವಿಲ್ಲವೇ?

ಕರಾಡ–ನಿಪ್ಪಾಣಿ–ಧಾರವಾಡ ಮಾರ್ಗದ ರೈಲು ಯೋಜನೆ ಅನುಷ್ಠಾನಕ್ಕೆ ಮುಂದಾಗುತ್ತೇನೆ. ಪ್ರಣಾಳಿಕೆಯಲ್ಲೂ ಈ ಕುರಿತು ಪ್ರಸ್ತಾಪಿಸಿದ್ದೆ. ಈ ಮಾರ್ಗದ ಕಾರ್ಯಸಾಧ್ಯತೆ ಬಗ್ಗೆ ಹಿಂದೆ ಸಮೀಕ್ಷೆ ನಡೆದಿತ್ತು. ಹೊಸದಾಗಿ ಸಮೀಕ್ಷೆ ನಡೆಸಿ, ಅನುಷ್ಠಾನಕ್ಕೆ ತರುವಂತೆ ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸುತ್ತೇನೆ. ಈಗ ಹುಬ್ಬಳ್ಳಿ–ಕೊಲ್ಲಾಪುರ ರೈಲು ಲೋಂಡಾಕ್ಕೆ ಹೋಗಿ ಸುತ್ತು ಹಾಕಿಕೊಂಡು ಹೋಗುತ್ತಿದೆ. ನೇರವಾಗಿ ಸಂಪರ್ಕ ಕಲ್ಪಿಸಿದರೆ ಜನರಿಗೆ ಅನುಕೂಲವಾಗುತ್ತದೆ. ಈ ಭಾಗದ ಅಭಿವೃದ್ಧಿಯೂ ಸಾಧ್ಯವಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು