ಬುಧವಾರ, ಜನವರಿ 22, 2020
24 °C

ಆಮ್ಲಜನಕದಂತಾಗಿರುವ ಇಂಗ್ಲಿಷ್ ಭಾಷೆ: ಮುಖ್ಯಶಿಕ್ಷಕ ಐ.ಡಿ. ಹಿರೇಮಠ ಅಭಿಮತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಪ್ರಪಂಚದ ಮೂಲೆ ಮೂಲೆಗಳಿಗೆ ಹೋಗಿ ವ್ಯವಹರಿಸಲು, ಇಂಗ್ಲಿಷ್‌ ಭಾಷೆಯು ಆಮ್ಲಜನಕದಂತೆ ಕಾರ್ಯನಿರ್ವಹಿಸುತ್ತದೆ’ ಎಂದು ರಾಮತೀರ್ಥ ನಗರದ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಐ.ಡಿ. ಹಿರೇಮಠ ಅಭಿಪ್ರಾಯ ವ್ಯಕ್ತಪಡಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದಿಂದ ಇಲ್ಲಿನ ಉಷಾತಾಯಿ ಗೋಗಟೆ ಬಾಲಕಿಯರ ಪ್ರೌಢಶಾಲೆಯಲ್ಲಿ ನಗರ ವಲಯದ ದ್ವಿತೀಯ ಭಾಷೆ ಇಂಗ್ಲಿಷ್‌ ಶಿಕ್ಷಕರಿಗೆ ಮಂಗಳವಾರ ಆಯೋಜಿಸಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಇಂಗ್ಲಿಷ್ ಭಾಷೆಯ ಕಲಿಕೆ ಇಂದು ಅತ್ಯಂತ ಮಹತ್ವದ್ದಾಗಿದೆ. ಈ ಭಾಷೆ ಗೊತ್ತಿದ್ದರೆ ಯಾವುದೇ ಪ್ರದೇಶಕ್ಕೆ ಬೇಕಾದರೂ ಹಿಂಜರಿಕೆ ಇಲ್ಲದೇ ಹೋಗಿ ಬರಬಹುದು. ಸಂವಹನ ನಡೆಬಬಹುದು. ಹೀಗಾಗಿ, ಶಿಕ್ಷಕರು ಇಂಗ್ಲಿಷ್‌ ಭಾಷೆಯನ್ನು ಕೇವಲ ಬೋಧನಾ ಭಾಷೆಯಾಗಿ ಬೋಧಿಸದೇ ಸಂವಹನ ಭಾಷೆಯಾಗಿ ಕಲಿಸಬೇಕು. ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಬೇಕು. ಭಾಷಾ ಜ್ಞಾನ ನೀಡಬೇಕು. ಅದರ ಮಹತ್ವವನ್ನು ತಿಳಿಸಿಕೊಡಬೇಕು. ಅವರ ಶೈಕ್ಷಣಿಕ ಹಾಗೂ ದೈನಂದಿನ ಜೀವನವನ್ನು ಆತ್ಮವಿಶ್ವಾಸದೊಂದಿಗೆ ಪ್ರಗತಿದಾಯಕವಾಗಿಸಬೇಕು’ ಎಂದು ಸಲಹೆ ನೀಡಿದರು.

ಡಿಡಿಪಿಐ ಕಚೇರಿಯ ಇಂಗ್ಲಿಷ್‌ ಪರಿವೀಕ್ಷಕಿ ಎಂ.ಎನ್. ಪಾಟೀಲ ಮಾತನಾಡಿ, ‘ಇಂಗ್ಲಿಷ್‌ ಭಾಷೆಯನ್ನು ಸುಲಭವಾಗಿ ಕಲಿಯಬಹುದು ಎನ್ನುವುದನ್ನು ಶಿಕ್ಷಕರು ಮಕ್ಕಳ ಮನಸ್ಸಿನಲ್ಲಿ ಬಿತ್ತಬೇಕು. ಪ್ರಯತ್ನ, ಸಂವಹನ, ಆಸಕ್ತಿ ಎಂಬ ಸಾಧನಗಳನ್ನು ಪ್ರಯೋಗಿಸುವುದರ ಮೂಲಕ ಇಂಗ್ಲಿಷ್‌ ಸುಲಭ ಭಾಷೆಯೆಂಬ ಪೈರನ್ನು ನೆಡಬೇಕು. ಇದರಿಂದ ಅವರಿಗೆ ಭವಿಷ್ಯದಲ್ಲಿ ಒಳಿತಾಗುತ್ತದೆ’ ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿದ್ದ ಭಾಸ್ಕರ ದೇಶಪಾಂಡೆ ಅವರು ಇಂಗ್ಲಿಷ್‌ ಭಾಷೆಯನ್ನು ಸುಲಭ ಹಾಗೂ ಪರಿಪೂರ್ಣ ಭಾಷೆಯಾಗಿ ಬೋಧಿಸಲು ಶಿಕ್ಷಕರು ಯಾವ ತಂತ್ರಗಳನ್ನು ಬಳಸಬೇಕು ಮತ್ತು ಪರಿಣಾಮಕಾರಿ ಬೋಧನೆಯ ಕ್ರಮಗಳೇನು ಎನ್ನುವುದನ್ನು ತಿಳಿಸಿಕೊಟ್ಟರು.

ಸಂಪನ್ಮೂಲ ವ್ಯಕ್ತಿ ಎಂ.ಎಂ. ಕಡಕೊಳ ಅವರು ಭಾಷೆಯ ಮೂಲ ತಳಪಾಯ ವ್ಯಾಕರಣವನ್ನು ಉತ್ತಮ ಹಾಗೂ ಸರಳ ಉದಾಹರಣೆಗಳೊಂದಿಗೆ ಬೋಧಿಸುವ ಕೌಶಲಗಳ ಕುರಿತು ಮಾಹಿತಿ ನೀಡಿದರು.

ಮುಖ್ಯಶಿಕ್ಷಕ ಎಂ.ಕೆ. ಮಾದಾರ ಸ್ವಾಗತಿಸಿದರು. ಇಂಗ್ಲಿಷ್‌ ಭಾಷೆ ಶಿಕ್ಷಕ ಎಸ್.ಜೆ. ಪಾಟೀಲ ವಂದಿಸಿದರು. ನಗರ ವಲಯದ ಸರ್ಕಾರಿ, ಅನುದಾನಿತ, ಅನುದಾನರಹಿತ ಕನ್ನಡ ಮಾಧ್ಯಮ ಪ್ರೌಢಶಾಲೆಗಳ ಇಂಗ್ಲಿಷ್‌ ಭಾಷಾ ಶಿಕ್ಷಕರು ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು