ಶೈಕ್ಷಣಿಕ ಗುಣಮಟ್ಟ ಕಾಯ್ದುಕೊಳ್ಳಬೇಕು

ಬೆಳಗಾವಿ: ‘ಸಂಶೋಧನಾ ಪ್ರಕಟಣೆಗಳಲ್ಲಿ ವಿದ್ವತ್‌ಪೂರ್ಣ ಬರವಣಿಗೆ ಇರಬೇಕು ಮತ್ತು ಶೈಕ್ಷಣಿಕ ಗುಣಮಟ್ಟ ಕಾಯ್ದುಕೊಳ್ಳುವುದು ಅತ್ಯವಶ್ಯವಾಗಿದೆ’ ಎಂದು ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ (ಆರ್‌ಸಿಯು) ಕುಲಪತಿ ಪ್ರೊ.ಎಂ. ರಾಮಚಂದ್ರಗೌಡ ಹೇಳಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಆಂತರಿಕ ಸುಧಾರಣಾ ಕೋಶ ಹಾಗೂ ವಿಶ್ವವಿದ್ಯಾಲಯ ಗ್ರಂಥಾಲಯ ಮತ್ತು ಗ್ರಂಥಾಲಯ ಮಾಹಿತಿ ವಿಜ್ಞಾನ ವಿಭಾಗ ಸಹಯೋಗದೊಂದಿಗೆ ‘ಪರಾಮರ್ಶನ ಸೂಚಿ ನಿರ್ವಹಣೆ’ ಕುರಿತು ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ನಿರಂತರ ಸಂಶೋಧನೆ ಹಾಗೂ ಪ್ರಕಟಣೆಗಾಗಿ ಆಕರ ನಿರ್ವಹಣೆಯ ಜ್ಞಾನವೇ ಸದ್ಯದ ಆದ್ಯತೆಯಾಗಿದೆ. ಆಧುನಿಕ ತಂತ್ರಾಂಶಗಳ ಸಮರ್ಪಕ ಬಳಕೆಯ ಮುಖಾಂತರ ಸಂಶೋಧನೆಯ ಭಿನ್ನ ಉಪಕ್ರಮಗಳನ್ನು ಪ್ರಾಯೋಗಿಕವಾಗಿ ಅಳವಡಿಸಿಕೊಂಡು ಹೊಸ ಅನ್ವೇಷಣೆ, ನವ ಆವಿಷ್ಕಾರಗಳತ್ತ ಮುಖ ಮಾಡಬೇಕಿದೆ’ ಎಂದರು.
ವಿಶೇಷ ಉಪನ್ಯಾಸ ನೀಡಿದ ಕವಿವಿಯ ನಿವೃತ್ತ ಪ್ರಾಧ್ಯಾಪಕ ಪ್ರೊ.ಎಸ್.ಎಲ್. ಸಂಗಮ ಮಾತನಾಡಿ, ‘ಶೈಕ್ಷಣಿಕ ಅಭಿವೃದ್ಧಿಯ ಭಾಗವಾಗಿ ಪರಿಗಣಿಸಲಾಗುವ ಸಂಶೋಧನೆಯು ಉತ್ಕೃಷ್ಟ ಜ್ಞಾನ ಶಾಖೆಯಾಗಿದೆ. ಆಕರಗಳ ನಿರ್ಮಾಣ ಮತ್ತು ಅವುಗಳ ನೈಜ ಶೋಧದಿಂದ ಮಾತ್ರ ಸದ್ಯದ ಜಾಗತಿಕ ವಿದ್ಯಮಾನಗಳನ್ನು ಅರಿಯಲು ಸಾಧ್ಯ. ಸಂಶೋಧನಾ ಅಧ್ಯಯನಗಳು ವೈಜ್ಞಾನಿಕತೆಗೆ ಅನುಗುಣವಾಗಿ ಪೂರಕ ಪ್ರಸಾರದಲ್ಲಿ ಸಾಗಬೇಕು. ಪರಾಮರ್ಶನ ಸೂಚಿ ನಿರ್ವಹಣೆಯ ಮೂಲಕ ಸಂಶೋಧನಾ ವಿದ್ಯಮಾನಗಳು ಮತ್ತು ವಿಜ್ಞಾನದ ಅನ್ವೇಷಣೆಗಳು ಇಂದು ಜಗತ್ತಿನ ಪ್ರಮುಖ ಸಂಶೋಧನೆಗೆ ವೇದಿಕೆ ನಿರ್ಮಿಸಿದೆ’ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದ ಡಾ.ಗೋಪಕುಮಾರ, ಡಾ.ಸುನೀಲ, ಪ್ರೊ.ವಿನಾಯಕ ಬಂಕಾಪೂರ, ಡಾ.ಕಿರಣ ಸವಣೂರು ಉಪನ್ಯಾಸ ನೀಡಿದರು.
ಕುಲಸಚಿವರಾದ ಪ್ರೊ.ಬಸವರಾಜ ಪದ್ಮಸಾಲಿ, ಪ್ರೊ.ಎಸ್.ಎಂ. ಹುರಕಡ್ಲಿ, ಹಣಕಾಸು ಅಧಿಕಾರಿ ಪ್ರೊ.ಡಿ.ಎನ್. ಪಾಟೀಲ, ಪ್ರೊ.ಶಿವಾನಂದ ಗೊರನಾಳೆ ಇದ್ದರು.
ಪೂಜಾ ಹಲ್ಲಾಳ ಸ್ವಾಗತಿಸಿದರು. ಪ್ರೊ.ವಿನಾಯಕ ಬಂಕಾಪುರ ಪ್ರಾಸ್ತಾವಿಕ ಮಾತನಾಡಿದರು. ರಮೇಶ ಕುರಿ ನಿರೂಪಿಸಿದರು.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.