ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಸ್ವಾರ್ಥ ಸೇವೆ ರೆಡ್ ಕ್ರಾಸ್ ಜೀವಾಳ: ಗುರುನಾಥ ಕಡಬೂರ

Last Updated 10 ಮೇ 2020, 9:24 IST
ಅಕ್ಷರ ಗಾತ್ರ

ಬೆಳಗಾವಿ: ‘ಯುದ್ಧದಲ್ಲಿ ಗಾಯಗೊಂಡವರಿಗೆ ವೈದ್ಯಕೀಯ ಚಿಕಿತ್ಸೆ ನೀಡುವುದರೊಂದಿಗೆ ಜಿನಿವಾದಲ್ಲಿ ಜನ್ಮವೆತ್ತಿದ ರೆಡ್ ಕ್ರಾಸ್ ಸಂಸ್ಥೆಯು ತನ್ನ ನಿಸ್ವಾರ್ಥ ಸೇವೆಯಿಂದಾಗಿ ಈಗ ಜಗತ್ತಿನ 200ಕ್ಕೂ ಅಧಿಕ ದೇಶಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ’ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಭಾರ ಉಪ ನಿರ್ದೇಶಕ ಗುರುನಾಥ ಕಡಬೂರ ಅಭಿಪ್ರಾಯಪಟ್ಟರು.

ರೆಡ್ ಕ್ರಾಸ್ ಸಂಸ್ಥೆ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ವಾರ್ತಾಭವನದಲ್ಲಿ ಈಚೆಗೆ ನಡೆದ ವಿಶ್ವ ರೆಡ್ ಕ್ರಾಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಸ್ಥಾಪಕ ಹೆನ್ರಿ ಡುನಂಟ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ನೆರವೇರಿಸಿ ಅವರು ಮಾತನಾಡಿದರು.

‘ಯಾವುದೇ ತಾರತಮ್ಯವಿಲ್ಲದೆ ಗಾಯಾಳುಗಳಿಗೆ ತುರ್ತು ವೈದ್ಯಕೀಯ ಸೇವೆಯ ಒದಗಿಸಬೇಕು ಎಂಬ ಹೆನ್ರಿ ಅವರ ಧ್ಯೇಯೋದ್ದೇಶ ಪವಿತ್ರವಾಗಿದ್ದರಿಂದ ಇಂದು ಜಗತ್ತಿನಾದ್ಯಂತ ಪಸರಿಸಿದ್ದು, ಹೆಸರು ಗಳಿಸಿದೆ’ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆಯ ಕಾರ್ಯದರ್ಶಿ ಡಾ‌.ಡಿ.ಎನ್. ಮಿಸಾಳೆ, ‘ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದವರಿಗೆ ನೆರವು ನೀಡುವುದಲ್ಲದೇ ಉಳಿದ ಸಂದರ್ಭಗಳಲ್ಲಿ ರಕ್ತನಿಧಿ ಸಂಗ್ರಹ, ಪ್ರಥಮ ಚಿಕಿತ್ಸೆ ತರಬೇತಿ, ಆರೋಗ್ಯ ಜಾಗೃತಿ, ತಾಯಿ-ಮಗು ಕಲ್ಯಾಣ ಅಭಿವೃದ್ಧಿಗಾಗಿ ತಾರತಮ್ಯವಿಲ್ಲದೆ ಸಮಾಜ ಸೇವೆಯನ್ನು ಸಂಸ್ಥೆ ಮಾಡುತ್ತಿದೆ’ ಎಂದು ಹೇಳಿದರು.

‘ಈ ಎಲ್ಲ ಚಟುವಟಿಕೆಗಳಲ್ಲಿ ಮಾನವೀಯತೆ, ನಿಷ್ಪಕ್ಷಪಾತ, ತಟಸ್ಥತೆ, ಸ್ವಯಂಸೇವೆ, ಏಕತೆ ಮತ್ತು ವಿಶ್ವವ್ಯಾಪಕತೆಯ ಮೂಲತತ್ವವನ್ನು ಪಾಲಿಸಲಾಗುತ್ತಿದೆ. ಸಂಸ್ಥೆಯ ಸಂಸ್ಥಾಪಕ ಹೆನ್ರಿ ಡುನಂಟ್ ಅವರ ಜನ್ಮದಿನವಾದ ಮೇ 8ರಂದು ವಿಶ್ವ ರೆಡ್ ಕ್ರಾಸ್ ದಿನವನ್ನಾಗಿ ಆಚರಿಸಲಾಗುತ್ತದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ರೆಡ್ ಕ್ರಾಸ್ ಜಿಲ್ಲಾ ಶಾಖೆ ಅಧ್ಯಕ್ಷ ಅಶೋಕ ಬಾದಾಮಿ ಮಾತನಾಡಿದರು. ಇತ್ತೀಚೆಗೆ ರಕ್ತದಾನ ಮಾಡಿದ ಕೊರೊನಾ ಯೋಧರಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.

ಕರ್ನಲ್ ವಿನೋದಿನಿ ಶರ್ಮಾ, ಪ್ರಾಚಾರ್ಯ ಬಸವರಾಜ ಕೋಳುಚೆ, ಶ್ರವಣದೋಷವುಳ್ಳ ಮಕ್ಕಳ ಶಾಲೆಯ ಸೂಪರಿಂಟೆಂಡೆಂಟ್‌ ಆರ್.ಎಸ್. ಬನಶಂಕರಿ, ಪ್ರೊ.ಶಿವಾನಂದ ಮೂಲಿಮನಿ, ಕೊರೊನಾ ಯೋಧರಾದ ಅವಧೂತ್ ಮಾನಗೆ, ಪ್ರವೀಣ ಹಿರೇಮಠ, ಶಿವಾನಂದ ಗುಮ್ಮಗೋಳ, ಎಲ್.ವಿ. ಶ್ರೀನಿವಾಸ್, ಕೋಮಲಾ ಕೊಳ್ಳಿಮಠ, ರಾಜಶೇಖರ ಕೊಳ್ಳಿಮಠ, ಪ್ರವೀಣ ಪವಾರ, ಆಶಿಷ್ ಭಾವಿಕಟ್ಟಿ, ಅಭಿ ಬಡಿಗೇರ ಇದ್ದರು.

ಯುವ ರೆಡ್ ಕ್ರಾಸ್ ಸಂಸ್ಥೆಯ ನೋಡಲ್ ಅಧಿಕಾರಿ ವಿಜಯಲಕ್ಷ್ಮಿ ಶೀಗಿಹಳ್ಳಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT