ಬುಧವಾರ, ಏಪ್ರಿಲ್ 21, 2021
30 °C
ವಿಶ್ವ ಗುಬ್ಬಿ ದಿನ ಮಾರ್ಚ್‌ 20ರಂದು

ವೀರಣ್ಣ ಮಡಿವಾಳರ ಪಕ್ಷಿಪ್ರೇಮ: ನಿಡಗುಂದಿ ಶಾಲೆಯಲ್ಲಿ ಚಿಂವ್ ಚಿಂವ್

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಜಿಲ್ಲೆಯ ರಾಯಬಾಗ ತಾಲ್ಲೂಕು ನಿಡಗುಂಡಿಯ ಡಾ.ಬಿ.ಆರ್. ಅಂಬೇಡ್ಕರ್‌ ನಗರ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಸ್ವಂತ ಹಣ ವ್ಯಯಿಸಿ ಹಾಗೂ ಸಮುದಾಯದ ಸಹಭಾಗಿತ್ವ ಪಡೆದುಕೊಂಡು ಖಾಸಗಿ ಕಾನ್ವೆಂಟ್‌ಗಿಂತಲೂ ಅತ್ಯುತ್ತಮವಾಗಿ ರೂಪಿಸಿರುವ ಮುಖ್ಯಶಿಕ್ಷಕ ಹಾಗೂ ಕವಿ ವೀರಣ್ಣ ಮಡಿವಾಳರ, ಅಲ್ಲೇ ಗುಬ್ಬಿಗಳಿಗೂ ತಾವು ಕಲ್ಪಿಸಿರುವುದು ಗಮನಸೆಳೆಯುತ್ತಿದೆ. ಪರಿಣಾಮ, ಆ ಅಂಗಳಗುಬ್ಬಿಗಳ ಚಿಂವ್ ಚಿಂವ್‌ ಮತ್ತು ಚಿಲಿಪಿಲಿಯಿಂದ ತುಂಬಿ ಹೋಗಿದೆ.

ಶಾಲೆಯ ಕಟ್ಟಡದ ವರಾಂಡದ ಅಲ್ಲಲ್ಲಿ ಕೃತಕ ಗೂಡುಗಳನ್ನು ಹಾಕಲಾಗಿದ್ದು, ಅಲ್ಲಿ ಗುಬ್ಬಚ್ಚಿಗಳು ಮನೆ ಮಾಡಿಕೊಂಡು ಸಂಸಾರ ನಡೆಸುತ್ತಿವೆ. ಪ್ಲಾಸ್ಟಿಕ್‌ ಪೈಪ್‌ನಿಂದ (ಎರಡೂ ಬದಿಯಲ್ಲಿ ಪ್ಯಾಕ್ ಮಾಡಿ, ಗುಬ್ಬಿಗಳು ಒಳ ಹೋಗಲು ಹಾಗೂ ಬರಲು ಮೂರು ಕಿಂಡಿಗಳನ್ನು ಬಿಡಲಾಗಿದೆ) ಸಿದ್ಧಪಡಿಸಿದ 36 ಗೂಡುಗಳನ್ನು ಜೋಡಿಸಲಾಗಿದೆ. ಶಾಲೆ ನಡೆಯುತ್ತಿರಲಿ ಅಥವಾ ರಜೆ ಇರಲಿ ಅಲ್ಲೀಗ ಗುಬ್ಬಚ್ಚಿಗಳದ್ದೇ ಪ್ರೀತಿಯ ಸಾಮ್ರಾಜ್ಯ. ಅವುಗಳೊಂದಿಗೆ ಶಿಕ್ಷಕರು ಹಾಗೂ ಮಕ್ಕಳ ಒಡನಾಟವೂ ಬೆಳೆದಿದೆ.

ಅರ್ಥಪೂರ್ಣವಾಗಿ ಬಳಕೆ:

ವ್ಯರ್ಥವಾಗಿ ಹೋಗಬಹುದಾದ ಜಾಗವನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳಲಾಗಿದೆ. ಎರಡು ವರ್ಷಗಳಿಂದಲೂ ಹೀಗೆ ಗುಬ್ಬಚ್ಚಿಗಳ ಸಾಕಣೆ ಪ್ರಕ್ರಿಯೆ ಇಲ್ಲಿ ನಡೆಯುತ್ತಿದೆ. ಆರಂಭದಲ್ಲಿ ಬರುವುದಕ್ಕೆ ಹೆದರುತ್ತಿದ್ದ ಗುಬ್ಬಿಗಳು ಈಗ ಧೈರ್ಯ ಪಡೆದುಕೊಂಡಿವೆ. ಅಲ್ಲಿ ಶಿಕ್ಷಕರು ಹಾಗೂ ಮಕ್ಕಳು ವಾತಾವರಣಕ್ಕೆ ಹೊಂದಿಕೊಂಡು ಬಿಟ್ಟಿವೆ. ಅವುಗಳಿಗೆ ಅಲ್ಲಲ್ಲಿ ಕಾಳುಗಳನ್ನು ಹಾಕುವುದು, ನೀರನ್ನು ಇಡುವ ಚಟುವಟಿಕೆಯನ್ನು ಮಕ್ಕಳಿಗೆ ವಹಿಸಲಾಗಿರುತ್ತದೆ. ಅದನ್ನು ಅವರು ಅಕ್ಕರೆಯಿಂದ ನಿರ್ವಹಿಸಿ, ಗುಬ್ಬಿಚ್ಚಿಗಳೊಂದಿಗೆ ಸಖ್ಯ ಬೆಳೆಸಿಕೊಂಡಿದ್ದಾರೆ.

‘ಶಾಲೆಯ ಅಂಗಳದ ಅಲ್ಲಲ್ಲಿ ಸಜ್ಜೆ, ನವಣೆ, ಅಕ್ಕಿ ಅಥವಾ ಜೋಳದ ನುಚ್ಚನ್ನು ಹಾಕುತ್ತಿದ್ದೆವು. ಅವನ್ನು ಹಕ್ಕಿಗಳು ತಿನ್ನುತ್ತಿದ್ದವು. ಮಕ್ಕಳು ಹಾಗೂ ಪಕ್ಷಿಗಳೊಂದಿಗೆ ವಿಶೇಷವಾಗಿ ಗುಬ್ಬಚ್ಚಿಗಳೊಂದಿಗೆ ಸಹ ಸಂಬಂಧ ಬೆಳೆಸಬೇಕು ಎನ್ನುವ ನನ್ನ ಆಶಯದಿಂದ ಗುಬ್ಬಿಗೂಡುಗಳನ್ನು ಹಾಕಿದ್ದೇವೆ. ನನ್ನ ಆ ಆಶಯ ಈಡೇರಿದೆ. ಸ್ಥಳೀಯ ಸಂಪನ್ಮೂಲವನ್ನೇ ಬಳಸಿಕೊಂಡು ಗೂಡುಗಳನ್ನು ಸಿದ್ಧಪಡಿಸಿ ಕಟ್ಟಿದ್ದೇವೆ. ಆರಂಭದಲ್ಲಿ ಹಿಂಜರಿಯುತ್ತಿದ್ದವು. ಕ್ರಮೇಣ ಹೊಂದಿಕೊಂಡಿವೆ. ಅವುಗಳಿಗೆ ಸಹ್ಯವಾದ ವಾತಾವರಣ ನಿರ್ಮಾಣವಾದ್ದರಿಂದ ಬರುತ್ತಿವೆ. ಈಗ, ಎಲ್ಲ ಗೂಡುಗಳೂ ಹೌಸ್‌ಫುಲ್ ಆಗಿವೆ’ ಎಂದು ಖುಷಿ ವ್ಯಕ್ತಪಡಿಸಿದರು ವೀರಣ್ಣ ಮಡಿವಾಳರ.

ಪ್ರಾಯೋಗಿಕ ಕಲಿಕೆ:

‘ಅಂಗಳದಲ್ಲೆಲ್ಲಾ ಸ್ವಚ್ಛಂದವಾಗಿ ಹಾರಾಡುತ್ತವೆ. ತರಗತಿ ಕೋಣೆಯೊಳಕ್ಕೂ ಬಂದು ಹೋಗುತ್ತವೆ. ಶಾಲೆಯ ‘ತೇಜಸ್ವಿ ಜೀವ ತಾಣ–ಪರಿಸರ ಕ್ಲಬ್’ನಿಂದ ಈ ಚಟುವಟಿಕೆಗಳನ್ನು ನಡೆಸುತ್ತಿದ್ದೇವೆ. ನಾವು ಮತ್ತು ನಿಸರ್ಗ ಬೇರೆ ಬೇರೆಯಲ್ಲ ಮತ್ತು ಎಲ್ಲ ಜೀವಿಗಳೊಂದಿಗೂ ಸಹ ಸಂಬಂಧ ಬೆಳೆಸಿಕೊಳ್ಳಬೇಕು ಎನ್ನುವುದನ್ನು ಮಕ್ಕಳಿಗೆ ತಿಳಿಸಿಕೊಡುವ ಉಪಕ್ರಮವೂ ಇದಾಗಿದೆ. ಗಿಡಗಳನ್ನು ನೆಟ್ಟು ಪೋಷಿಸುವ ಜೊತೆಗೆ ಪಕ್ಷಿಗಳ ಸಂರಕ್ಷಣೆಯ ಪ್ರಾಯೋಗಿಕ ಪಾಠವನ್ನೂ ಕಲಿಸುತ್ತಿದ್ದೇವೆ. ಮಕ್ಕಳು ಖುಷಿಯಿಂದ ಈ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ’ ಎನ್ನುತ್ತಾರೆ ಅವರು.

‘ಇಂತಹ ಪ್ರಯತ್ನಗಳು ಇತರ ಕಡೆಗಳಲ್ಲೂ ಆಗಬೇಕು. ಆಗ, ಪಕ್ಷಿಗಳಿಗೆ ಅದರಲ್ಲೂ ಗುಬ್ಬಚ್ಚಿಗಳಿಗೆ ಅನುಕೂಲ ಆಗುತ್ತದೆ’ ಎನ್ನುವ ಸಲಹೆ ಅವರದು.

ಶಾಲೆಯಲ್ಲಿ ಪ್ರಾರ್ಥನೆ ನಂತರ ಪಕ್ಷಿಗಳಿಗೆ ಅಲ್ಲಲ್ಲಿ ಕಾಳುಗಳನ್ನು ಹಾಕುವುದು ಹಾಗೂ ನೀರನ್ನು ಇಡುವ ದಿನಚರಿಯನ್ನು ಮಕ್ಕಳಿಗೆ ವಹಿಸಲಾಗಿದೆ. ಪ್ರಕೃತಿ ‍ಪ್ರೇಮ ನಮ್ಮೊಳಗಿನ ಗುಣವಾಗಿ ಬೆಳೆಯಬೇಕು ಎನ್ನುವುದು ಇದರ ಆಶಯ.
ವೀರಣ್ಣ ಮಡಿವಾಳರ, ಮುಖ್ಯಶಿಕ್ಷಕ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು