ಮಂಗಳವಾರ, ಜನವರಿ 19, 2021
19 °C

ಹೊಸ ಬಡಾವಣೆಗೆ ಯಡಿಯೂರಪ್ಪ ಹೆಸರು: ಬುಡಾ ಸಭೆಯಲ್ಲಿ ನಿರ್ಣಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಹೊರವಲಯದ ಕಣಬರ್ಗಿಯಲ್ಲಿ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ)ದಿಂದ ಅಭಿವೃದ್ಧಿಪಡಿಸಲಾಗುತ್ತಿರುವ ಬಡಾವಣೆಗೆ (ಸ್ಕೀಂ ನಂ.61) ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹೆಸರಿಡಲು ನಿರ್ಧರಿಸಲಾಗಿದೆ.

ಬುಡಾದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು ಎಂದು ಅಧ್ಯಕ್ಷ ಘೂಳಪ್ಪ ಹೊಸಮನಿ ನಂತರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರಾಧಿಕಾರದಿಂದ 15 ವರ್ಷಗಳಿಂದ ಹೊಸ ಬಡಾವಣೆ ನಿರ್ಮಾಣ ಸಾಧ್ಯವಾಗಿಲ್ಲ. ಸರ್ಕಾರದಿಂದ ಸೂಕ್ತ ಅನುಮತಿ ಪಡೆದು ಈ ಬಾರಿ ತ್ವರಿತವಾಗಿ ಬಡಾವಣೆ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಕಣರ್ಗಿಯಲ್ಲಿ ವ್ಯಾಜ್ಯಕ್ಕೆ ಒಳಗಾಗದಿರುವ 23 ಎಕರೆಯಲ್ಲಿ ಅಪಾರ್ಟ್‌ಮೆಂಟ್‌ಗಳ ಮಾದರಿಯಲ್ಲಿ 3,750 ಮನೆಗಳನ್ನು ನಿರ್ಮಿಸಲು ಯೋಜಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಆಟೊ ನಗರದಲ್ಲಿರುವ ಕೆಎಸ್‌ಸಿಎ ಮೈದಾನದ ಸಮೀಪದಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಹಾಕಿ ಮೈದಾನ ನಿರ್ಮಿಸಲಾಗುವುದು. ಇದಕ್ಕೆ ಸಭೆ ಅನುಮೋದನೆ ನೀಡಿದೆ. ಮುಂದಿನ ದಿನಗಳಲ್ಲಿ ನಗರದಲ್ಲಿ ಅಕ್ರಮ ಬಡಾವಣೆಗಳು ಮೈದಳೆಯದಂತೆ ನೋಡಿಕೊಳ್ಳುವುದಕ್ಕಾಗಿ ಸಮಿತಿ ರಚಿಸಲಾಗಿದೆ. ಈಗಾಗಲೇ ಬುಡಾದಿಂದ ನಿವೇಶನ ಖರೀದಿಸಿ ಮನೆ ಕಟ್ಟಿಕೊಳ್ಳದಿರುವವರು ಎನ್‌ಒಸಿ ತೆಗೆದುಕೊಂಡು, 6 ತಿಂಗಳ ಒಳಗೆ ಕಟ್ಟಿಕೊಳ್ಳಲು ಅವಕಾಶ ನೀಡಲಾಗಿದೆ. ಇದನ್ನು ಸಂಬಂಧಿಸಿದವರು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದರು.

‘2022ರ ವೇಳೆಗೆ ಎಲ್ಲರಿಗೂ ಸೂರು ಎನ್ನುವ ಪ್ರಧಾನಿ ನರೇಂದ್ರ ಮೋದಿ ಅವರ ಕನಸು ನನಸು ಮಾಡಲು ಬುಡಾ ಸಿದ್ಧವಾಗಿದೆ. ಇದಕ್ಕಾಗಿ ಕ್ರಮವನ್ನೂ ಕೈಗೊಳ್ಳಲಾಗಿದೆ. ನನೆಗುದಿಗೆ ಬಿದ್ದಿರುವ ಯೋಜನೆಗಳಿಗೆ ಜೀವ ನೀಡಲಾಗುವುದು’ ಎಂದು ತಿಳಿಸಿದರು.

ಶಾಸಕರಾದ ಅನಿಲ ಬೆನಕೆ, ಅಭಯ ಪಾಟೀಲ, ಆಯುಕ್ತ ಪ್ರೀತಂ ನಸಲಾಪುರೆ, ಮಹಾನಗರ ಪಾಲಿಕೆ ಆಯುಕ್ತ  ಕೆ.ಎಚ್. ಜಗದೀಶ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.