ಶನಿವಾರ, ಮೇ 28, 2022
30 °C

ಯಲ್ಲಮ್ಮನಗುಡ್ಡದಲ್ಲಿ 'ಬನದ ಹುಣ್ಣಿಮೆ': ಸಾರ್ವಜನಿಕರಿಗೆ ಪ್ರವೇಶವಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಗರಗೋಳ (ಬೆಳಗಾವಿ): ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡದಲ್ಲಿ ‘ಬನದ ಹುಣ್ಣಿಮೆ’ ಅಂಗವಾಗಿ ಸೋಮವಾರ (ಜ.17) ನಡೆಯಬೇಕಿದ್ದ ಜಾತ್ರೆಯನ್ನು ಕೋವಿಡ್ ಕಾರಣದಿಂದ ರದ್ದುಪಡಿಸಲಾಗಿದೆ. ಧಾರ್ಮಿಕ ಕಾರ್ಯಕ್ರಮಗಳು ಸರಳವಾಗಿ ನಡೆಯಲಿವೆ. ಬೆಳಿಗ್ಗೆ ಮತ್ತು ಸಂಜೆ ರೇಣುಕಾ ಯಲ್ಲಮ್ಮ ದೇವಿಗೆ ವಿಶೇಷ ಪೂಜೆ ಜರುಗಲಿದೆ. ಆದರೆ, ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ.

ದೇವಸ್ಥಾನಕ್ಕೆ ಸೀಮಿತವಾಗಿ ಅಧಿಕಾರಿಗಳು, ಅರ್ಚಕರು ಹಾಗೂ ಕೆಲವೇ ಗಣ್ಯರ ಉಪಸ್ಥಿತಿಯಲ್ಲಿ ಧಾರ್ಮಿಕ ಆಚರಣೆ ಕೈಗೊಳ್ಳಲಾಗುವುದು ಎಂದು ಯಲ್ಲಮ್ಮ ದೇವಸ್ಥಾನ ಅಧಿಕಾರಿಗಳು ತಿಳಿಸಿದ್ದಾರೆ.

ನಿಷೇಧದ ನಡುವೆಯೂ ಗುಡ್ಡದತ್ತ ಹರಿದುಬರುತ್ತಿರುವ ಭಕ್ತಸಮೂಹವನ್ನು ಬ್ಯಾರಿಕೇಡ್‌ ಅಳವಡಿಸಿ ತಡೆಯಲಾಗುತ್ತಿದೆ.

ಗುಡ್ಡಕ್ಕೆ ಸಂಪರ್ಕ ಕಲ್ಪಿಸುವ ಉಗರಗೋಳ, ಹಿರೇಕುಂಬಿ, ಚುಳಕಿ, ಮುನವಳ್ಳಿಯ ಶಿಂಧೋಗಿ ಕ್ರಾಸ್, ರಾಮದುರ್ಗ ಮಾರ್ಗದ ಹೂಲಿಕಟ್ಟಿ, ಬೈಲಹೊಂಗಲ ಮಾರ್ಗದ ಕರಿಕಟ್ಟಿ ಹಾಗೂ ಧಾರವಾಡ ಮಾರ್ಗದ ಹಿರೇಉಳ್ಳಿಗೇರಿಯಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ. 4 ಸಿಪಿಐ, 10 ಪಿಎಸ್‌ಐ, 16 ಎಎಸ್‌ಐ ಹಾಗೂ 160 ಪೊಲೀಸರು ಮತ್ತು ಗೃಹರಕ್ಷಕ ದಳದ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಸವದತ್ತಿ ಠಾಣೆ ಸಿಪಿಐ ಮಂಜುನಾಥ ನಡುವಿನಮನಿ ತಿಳಿಸಿದರು.

ಕೊರೊನಾ ಪರಿಸ್ಥಿತಿಗೆ ಮುಂಚೆ, ಬನದ ಹುಣ್ಣಿಮೆ ಮುಖ್ಯ ಜಾತ್ರೆಯಂದು ಲಕ್ಷಾಂತರ ಭಕ್ತರು ಸೇರುತ್ತಿದ್ದರು. ಕೋವಿಡ್ ನಿಯಂತ್ರಣ ಸಲುವಾಗಿ ಈ ಸಲ ನಿರ್ಬಂಧ ಹೇರಲಾಗಿದೆ. ಸರಳವಾಗಿ ಕಾರ್ಯಕ್ರಮ ನಡೆಯಲಿದೆ. ಭಕ್ತರು ಸಹಕರಿಸಬೇಕು ಎಂದು ದೇವಸ್ಥಾನದ ಇಒ ರವಿ ಕೋಟಾರಗಸ್ತಿ ಕೋರಿದರು.

‘ಜನರ ಆರೋಗ್ಯ ಕಾಪಾಡುವ ಸಲುವಾಗಿ ಸರ್ಕಾರ ಭಕ್ತರಿಗೆ ನಿಷೇಧ ಹೇರಿದೆ. ಎಲ್ಲರೂ ತಮ್ಮ ಮನೆಗಳಲ್ಲೇ ದೇವಿ ಆರಾಧಿಸಬೇಕು’ ಎಂದು ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಸಯ್ಯ ಹಿರೇಮಠ ಮನವಿ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು