ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಬೆಳಗಾವಿಯಲ್ಲಿ: ‘ಯುವ ಹವಾ’ಕ್ಕೆ ತಾಲೀಮು

ಕುಡಿಗಳಿಗೆ ‘ಅಖಾಡ’ ಸಜ್ಜುಗೊಳಿಸುತ್ತಿರುವ ರಾಜಕೀಯ ನಾಯಕರು
Last Updated 10 ಡಿಸೆಂಬರ್ 2020, 8:07 IST
ಅಕ್ಷರ ಗಾತ್ರ
ADVERTISEMENT
""
""
""
""
""

ಬೆಳಗಾವಿ: ಕುಟುಂಬ ರಾಜಕಾರಣಕ್ಕೆ ಹೆಸರಾಗಿರುವ ಬೆಳಗಾವಿ ಜಿಲ್ಲೆಯ ಪ್ರಭಾವಿ ರಾಜಕಾರಣಿಗಳು ತಮ್ಮ ಕುಡಿಗಳನ್ನು ಈ ಕ್ಷೇತ್ರಕ್ಕೆ ತರಲು ‘ತಾಲೀಮು’ ನಡೆಸಿದ್ದಾರೆ. ಕೆಲ ವರ್ಷಗಳಲ್ಲಿ ‘ಯುವ ಹವಾ’ ಜೋರಾಗಿಯೇ ವ್ಯಾಪಿಸುವ ಲಕ್ಷಣಗಳು ಗೋಚರಿಸುತ್ತಿವೆ.

ತಮ್ಮ ಮಕ್ಕಳನ್ನು ಜನರ ಮಧ್ಯದಲ್ಲಿ ಬಿಟ್ಟು ಪ್ರಾಯೋಗಿಕ ತರಬೇತಿ ನೀಡುತ್ತಿರುವ ನಾಯಕರು, ಸದ್ದಿಲ್ಲದೇ ಅವರನ್ನು ರಾಜಕೀಯ ರಂಗದಲ್ಲಿ ಬೆಳೆಸುತ್ತಿದ್ದಾರೆ. 2ನೇ ತಲೆಮಾರಿನ ನಾಯಕರನ್ನಾಗಿ ತಮ್ಮವರನ್ನೇ ಬೆಳೆಸಲು ಕಾರ್ಯತಂತ್ರ ರೂಪಿಸಿದ್ದಾರೆ. ಅವರಿಗೆ ಭದ್ರ ‘ಭವಿಷ್ಯ’ಕ್ಕೆ ಯೋಜನೆ ಸಿದ್ಧಪಡಿಸಿ ಅನುಷ್ಠಾನಕ್ಕೆ ತರುತ್ತಿದ್ದಾರೆ. ಇದರಲ್ಲಿ ಯಾವ ರಾಜಕೀಯ ಪಕ್ಷದವರೂ ಹಿಂದೆ ಬಿದ್ದಿಲ್ಲ.

ಬಹುತೇಕರು ನೇರವಾಗಿ ಜಿಲ್ಲಾ ಪಂಚಾಯಿತಿ ಅಥವಾ ವಿಧಾನಸಭಾ ಕ್ಷೇತ್ರದ ಚುನಾವಣೆಗಳ ಮೇಲೆಯೇ ‘ದೃಷ್ಟಿ ನೆಟ್ಟು’ ಆ ಹಾದಿಯಲ್ಲಿ ಮುಂದಡಿ ಇಟ್ಟಿದ್ದಾರೆ.

ಯಾರಾರಿದ್ದಾರೆ?

ಸರ್ಕಾರ ಯಾವುದೇ ಇದ್ದರೂ ಒಬ್ಬರಿಲ್ಲದಿದ್ದರೆ ಇನ್ನೊಬ್ಬರು ಸದಾ ಅಧಿಕಾರದಲ್ಲಿರುವಂತೆ ‘ವ್ಯವಸ್ಥೆ’ ಮಾಡಿಕೊಂಡಿರುವ ಜಾರಕಿಹೊಳಿ ಮನೆತನದವರು ಸದ್ಯಕ್ಕೆ ಜಿಲ್ಲೆಯ ರಾಜಕಾರಣದಲ್ಲಿ ಹೆಚ್ಚಿನ ಹಿಡಿತ ಹೊಂದಿದ್ದಾರೆ. ಕೆಲವೇ ವರ್ಷಗಳ ಹಿಂದೆ ಕೇವಲ ಗೋಕಾಕಕ್ಕೆ ಸೀಮಿತವಾಗಿದ್ದ ರಮೇಶ ಜಾರಕಿಹೊಳಿ, ಜೆಡಿಎಸ್‌– ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದ ವಿರುದ್ಧ ತಿರುಗಿ ಬಿದ್ದು ಆ ಸರ್ಕಾರವನ್ನು ‘ಪತನಗೊಳಿಸಿದ ಕಾರ್ಯಾಚರಣೆ’ಯಲ್ಲಿ ‍ಪ್ರಮುಖ ಪಾತ್ರವಹಿಸಿದರು. ಬಿಜೆಪಿ ಸೇರಿದ ನಂತರ ಮತ್ತಷ್ಟು ಪ್ರಭಾವಿಯಾಗಿದ್ದಾರೆ. ಮಹತ್ವದ ಜಲಸಂಪನ್ಮೂಲ ಸಚಿವ ಸ್ಥಾನದೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿ ವರ್ಚಸ್ಸನ್ನು ವೃದ್ಧಿಸಿಕೊಂಡಿದ್ದಾರೆ. ತಮ್ಮಿಬ್ಬರು ಪುತ್ರರಾದ ಅಮರನಾಥ ಜಾರಕಿಹೊಳಿ ಹಾಗೂ ಸಂತೋಷ ಜಾರಕಿಹೊಳಿ ಅವರನ್ನು ಉತ್ತರಾಧಿಯಾಗಿ ಮಾಡಲು ಬೇಕಾದ ವೇದಿಕೆ ಸಜ್ಜುಗೊಳಿಸುತ್ತಿದ್ದಾರೆ.

ಅಮರನಾಥ ಜಾರಕಿಹೊಳಿ ಅವರನ್ನು ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ (ಬೆಮುಲ್) ನಿರ್ದೇಶಕ ಸ್ಥಾನಕ್ಕೆ ಅವಿರೋಧ ಆಯ್ಕೆಯಾಗುವಂತೆ ‘ಸದ್ದಿಲ್ಲದೆ’ ಕಾರ್ಯಾಚರಣೆ ನಡೆಸಿದ ಅವರು, ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್‌)ದ ನಿರ್ದೇಶಕರಾಗಿಯೂ ಅವಿರೋಧ ಆಯ್ಕೆ ಆಗುವಂತೆ ನೋಡಿಕೊಂಡರು. ರಾಜಕಾರಣಕ್ಕೆ ಪ್ರವೇಶ ಪಡೆಯಲು ಚಿಮ್ಮುಹಲಗೆಯಂತಿರುವ ಸಹಕಾರ ರಂಗದಲ್ಲಿ ಪುತ್ರನನ್ನು ಬೆಳೆಸುತ್ತಿದ್ದಾರೆ.

ಹೆಸರು ತೇಲಿಬಿಟ್ಟಿದ್ದರು

ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅಕಾಲಿಕ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಎದುರಾಗಲಿರುವ ಉಪ ಚುನಾವಣೆಗೆ ಅಮರನಾಥ್ ಅಭ್ಯರ್ಥಿಯಾಗಬೇಕು ಎಂಬ ಆಗ್ರಹವನ್ನು ರಮೇಶ ಜಾರಕಿಹೊಳಿ ಬೆಂಬಲಿಗರು ಸಾಮಾಜಿಕ ಮಾಧ್ಯಮದಲ್ಲಿ ಈಚೆಗೆ ಆರಂಭಿಸಿದ್ದರು. ಯುವ ನಾಯಕನ ‍ಪರವಾಗಿ ಬೆಂಬಲಿಗರು ಇದ್ದಾರೆ ಎನ್ನುವ ಸಂದೇಶವನ್ನೂ ರವಾನಿಸಿದ್ದರು. ‘ತನಗೆ ಆಸಕ್ತಿ ಇಲ್ಲ’ ಎಂದು ಅಮರನಾಥ್ ಪತ್ರಿಕಾ ಪ್ರಕಟಣೆ ನೀಡಿದ ನಂತರ, ಸಾಮಾಜಿಕ ಮಾಧ್ಯಮದಲ್ಲಿ ‘ತಾತ್ಕಾಲಿಕ’ವಾಗಿ ಚರ್ಚೆ ನಿಂತಿದೆ!

ರಮೇಶ ಜಾರಕಿಹೊಳಿ ಅವರ ಇನ್ನೊಬ್ಬ ಪುತ್ರ ಸಂತೋಷ ಜಾರಕಿಹೊಳಿ ಗೋಕಾಕದಲ್ಲಿ ಶಿಕ್ಷಣ ಸಂಸ್ಥೆ ಹಾಗೂ ಸಕ್ಕರೆ ಕಾರ್ಖಾನೆಯ ನಿರ್ವಹಣೆಯ ಹೊಣೆ ಹೊತ್ತಿದ್ದಾರೆ. ಮುಂದೊಂದು ದಿನ ಅವರೂ ರಾಜಕಾರಣದತ್ತ ಮುಖ ಮಾಡಿದರೆ ಅಚ್ಚರಿ ಪಡಬೇಕಿಲ್ಲ ಎನ್ನುತ್ತಾರೆ ರಮೇಶ ಜಾರಕಿಹೊಳಿ ಬೆಂಬಲಿಗರು.

ಇಲ್ಲೂ ಪ್ರಿಯಾಂಕಾ, ರಾಹುಲ್‌

ರಾಹುಲ್ &ಪ್ರಿಯಾಂಕಾ

ಜಾರಕಿಹೊಳಿ ಮನೆತನದ ‘ಮಾಸ್ಟರ್‌ ಮೈಂಡ್’ ಎಂದೇ ರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸಲಾಗುವ ಸತೀಶ ಜಾರಕಿಹೊಳಿ ಪ್ರಸ್ತುತ ಯಮಕನಮರಡಿ ಕ್ಷೇತ್ರದ ಶಾಸಕರಾಗಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿದ್ದಾರೆ. ಇವರೂ ತಮ್ಮ ಪುತ್ರ ರಾಹುಲ್ (21) ಹಾಗೂ ಪ್ರಿಯಾಂಕಾ ಜಾರಕಿಹೊಳಿ (23) ಅವರನ್ನು ರಾಜಕಾರಣಕ್ಕೆ ಕರೆ ತರಲು ‘ತರಬೇತಿ’ ಕೊಡುತ್ತಿದ್ದಾರೆ. ಇದನ್ನು ಅಧಿಕೃತವಾಗಿಯೇ ಘೋಷಿಸಿರುವ ಅವರು ಸಾಮಾಜಿಕ, ಶೈಕ್ಷಣಿಕ ಹಾಗೂ ಸಂಘಟನಾತ್ಮಕ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸುತ್ತಿದ್ದಾರೆ.

ಪುತ್ರಿ ಪ್ರಿಯಾಂಕಾ ಎಂಬಿಎ ಪದವೀಧರೆ. ಪುತ್ರ ರಾಹುಲ್ ಎಂಜಿನಿಯರಿಂಗ್‌ 6ನೇ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಪ್ರತಿ ವರ್ಷ ಈ ಭಾಗದ ಅಲ್ಲಲ್ಲಿ ನಡೆಸಲಾಗುವ ಸತೀಶ ಶುಗರ್ಸ್‌ ಅವಾರ್ಡ್ಸ್‌ ಪ್ರತಿಭಾನ್ವೇಷಣೆ ಕಾರ್ಯಕ್ರಮದ ಮೂಲಕ ಅವರನ್ನು ಪರಿಚಯಿಸುತ್ತಿದ್ದಾರೆ. ಅಲ್ಲದೇ, ಗೋಕಾಕದ ತಮ್ಮ ಮನೆ ‘ಹಿಲ್ ಗಾರ್ಡನ್‌’ನಲ್ಲಿ ನಡೆಯುವ ಮಹಾಪುರುಷರ ಜಯಂತಿ ಆಚರಣೆ, ಸಾಮಾಜಿಕ ಕಾರ್ಯಕ್ರಮ ಹಾಗೂ ಸೌಲಭ್ಯಗಳ ವಿತರಣೆಯಲ್ಲಿ ಅವರು ಭಾಗವಹಿಸುವಂತೆ ನೋಡಿಕೊಳ್ಳುತ್ತಿದ್ದಾರೆ.

ತರಬೇತಿ ಕೊಡುತ್ತಿದ್ದೇನೆ

‘ಮಕ್ಕಳಿಬ್ಬರೂ ರಾಜಕೀಯಕ್ಕೆ ಬರುವುದು ಖಂಡಿತ. ಇದಕ್ಕಾಗಿ ಅವರಿಗೆ ಅಗತ್ಯ ತರಬೇತಿ ಕೊಡುತ್ತಿದ್ದೇನೆ. ನಾವು ವೇದಿಕೆ ಸಜ್ಜುಗೊಳಿಸಿದ್ದೇವೆ ಎನ್ನುವ ಕಾರಣಕ್ಕೆ ಅವರು ಸುಲಭವಾಗಿ ಈ ರಂಗಕ್ಕೆ ಬರಬಾರದು. ಎಲ್ಲವನ್ನೂ ತಿಳಿದುಕೊಂಡು ಪ್ರವೇಶಿಸಬೇಕು ಎನ್ನುವುದು ನನ್ನ ಆಶಯ. ಅವರಿಗೂ ಆಸಕ್ತಿ ಇದೆ’ ಎನ್ನುತ್ತಾರೆ ಸತೀಶ ಜಾರಕಿಹೊಳಿ.

ರಮೇಶ ಹಾಗೂ ಸತೀಶ ಜಾರಕಿಹೊಳಿ ಪುತ್ರರಿಗೆ ಚಿಕ್ಕಪ್ಪ ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಬೆನ್ನೆಲುಬಾಗಿ ನಿಂತಿದ್ದಾರೆ.

ಸವದಿ, ಕತ್ತಿ

ಚಿದಾನಂದ ಸವದಿ

ಉಪ ಮುಖ್ಯಮಂತ್ರಿ ಆಗಿರುವ ಅಥಣಿಯ ಲಕ್ಷ್ಮಣ ಸವದಿ ಪುತ್ರ ಚಿದಾನಂದ ಸವದಿ ಈಗಾಗಲೇ ರಾಜಕೀಯ ಪ್ರವೇಶಿಸಿದ್ದಾರೆ. ಪ್ರಸ್ತುತ ಬಿಜೆಪಿ ಯುವ ಮೋರ್ಚಾ ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಸಂಘಟನೆಯಲ್ಲಿ ತೊಡಗಿದ್ದಾರೆ.

ಜಿಲ್ಲೆಯ ಹಿರಿಯ ಶಾಸಕ ಎನಿಸಿರುವ ಉಮೇಶ ಕತ್ತಿ ಅವರ ಪುತ್ರ ನಿಖಿಲ್ ಕತ್ತಿ ಅಮ್ಮಣಗಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯ ಹಾಗೂ ಹಿರಾ ಶುಗರ್ಸ್‌ ಕಾರ್ಖಾನೆಯ ಅಧ್ಯಕ್ಷರಾಗಿದ್ದಾರೆ.

ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆಗಿರುವ ಮಾಜಿ ಸಂಸದ ರಮೇಶ ಕತ್ತಿ ಅವರಿಗೆ ಅವಳಿ ಪುತ್ರರಿದ್ದಾರೆ. ಪುತ್ರ ಪವನ್ ಕತ್ತಿ ನಾಗರಮುನ್ನೋಳಿ ಕ್ಷೇತ್ರದ ಸದಸ್ಯ ಮತ್ತು ಬೆಲ್ಲದಬಾಗೇವಾಡಿ ಅರ್ಬನ್ ಸೌಹಾರ್ದ ಸಹಕಾರಿಯ ಅಧ್ಯಕ್ಷರೂ ಆಗಿದ್ದಾರೆ. ಪೃ‌ಥ್ವಿ ಕತ್ತಿ ವಿಶ್ವರಾಜ ಶುಗರ್ಸ್‌ ಲಿಮಿಟೆಡ್ ಮತ್ತು ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕರಾಗಿದ್ದಾರೆ.

ಗಡಿಯಲ್ಲಿ ಜೊಲ್ಲೆ

ಬಸವಪ್ರಸಾದ ಜೊಲ್ಲೆ

ಗಡಿ ಭಾಗವಾದ ನಿಪ್ಪಾಣಿ ಹಾಗೂ ಚಿಕ್ಕೋಡಿ ಭಾಗದಲ್ಲಿ ಪ್ರಭಾವ ವೃದ್ಧಿಸಿಕೊಳ್ಳುತ್ತಿರುವ ನಿಪ್ಪಾಣಿ ಶಾಸಕಿಯೂ ಆಗಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಚಿಕ್ಕೋಡಿ ಸಂಸದರೂ ಆಗಿರುವ ಅಣ್ಣಾಸಾಹೇಬ ಜೊಲ್ಲೆ ದಂಪತಿ ತಮ್ಮ ಪುತ್ರ ಬಸವಪ್ರಸಾದ ಜೊಲ್ಲೆ ಅವರನ್ನು ಬೆಳೆಸುತ್ತಿದ್ದಾರೆ. ಬಸವಜ್ಯೋತಿ ಯೂತ್ ಫೌಂಡೇಷನ್ ಅಧ್ಯಕ್ಷರೂ ಆಗಿರುವ ಅವರು, ಕ್ಷೇತ್ರದಲ್ಲಿ ತಂದೆ–ತಾಯಿ ಅನುಪಸ್ಥಿತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವುದು ಮೊದಲಾದ ಕಾರ್ಯಕ್ರಮಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಯುವ ಉದ್ಯಮಿಯೂ ಹೌದು.

ಚಿಕ್ಕೋಡಿಯ ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಪುತ್ರ ಗಣೇಶ ಹುಕ್ಕೇರಿ ಈಗಾಗಲೇ ಚಿಕ್ಕೋಡಿ ಕ್ಷೇತ್ರದ ಶಾಸಕರಾಗಿದ್ದಾರೆ.

ಮೃಣಾಲ್ ಹೆಬ್ಬಾಳಕರ

ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ, ಕೆಪಿಸಿಸಿ ವಕ್ತಾರೆಯೂ ಆಗಿರುವ ಲಕ್ಷ್ಮಿ ಹೆಬ್ಬಾಳಕರ ಪುತ್ರ ಮೃಣಾಲ್ ಹೆಬ್ಬಾಳಕರ ಅವರನ್ನು ರಾಜಕೀಯ ಗರಡಿಯಲ್ಲಿ ಪಳಗಿಸುತ್ತಿದ್ದಾರೆ. ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಮೃಣಾಲ್, ತಾಯಿ ಅನುಪಸ್ಥಿತಿಯಲ್ಲಿ ಕ್ಷೇತ್ರದಲ್ಲಿ ಸೇವಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಈ ನಾಯಕಿಯು, ತಮ್ಮ ಸಹೋದರ ಹಾಗೂ ಹರ್ಷ ಶುಗರ್ಸ್‌ ವ್ಯವಸ್ಥಾಪಕ ನಿರ್ದೇಶಕ ಚನ್ನರಾಜ ಹಟ್ಟಿಹೊಳಿ ಅವರಿಗೆ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್‌ಗೆ ಲಾಬಿ ನಡೆಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ.

ಸಹಕಾರ ರಂಗದ ಮೂಲಕ

ಇತ್ತೀಚೆಗೆ ರಾಜ್ಯಸಭಾ ಸದಸ್ಯ ಸ್ಥಾನ ಗಳಿಸಿದ ಬಿಜೆಪಿಯ ಈರಣ್ಣ ಕಡಾಡಿ ಅವರು ತಮ್ಮ ಪುತ್ರ ಸತೀಶ ಕಡಾಡಿ ಅವರನ್ನು ಪಟ್ಟಣ ಸಹಕಾರ ಬ್ಯಾಂಕ್‌ಗಳು ಹಾಗೂ ಕೃಷಿಯೇತರ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಸದ್ದಿಲ್ಲದೆ ಅವಿರೋಧ ಆಯ್ಕೆ ಮಾಡಿಸಿ, ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕರನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ವಿಧಾನಪರಿಷತ್ ಸದಸ್ಯ ವಿವೇಕರಾವ್ ಪಾಟೀಲ ಅವರ ಪುತ್ರ ಪ್ರಣಯ ಪಾಟೀಲ ಪ್ರಸ್ತುತ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿರುವ ಇಂತಹ ಪ್ರಭಾವಿ ನಾಯಕರ ‘ಪ್ರಭಾವಳಿ’ಯಿಂದಾಗಿ ಇತರರು ರಾಜಕಾರಣದಲ್ಲಿ ನೆಲೆಯೂರಲು ಹರಸಾಹಸ ಪಡಬೇಕಾದ ಪರಿಸ್ಥಿತಿ ಇರುವುದಂತೂ ದಿಟ! ಕೆಲವು ತಾಲ್ಲೂಕುಗಳಲ್ಲಿ ಕುಟುಂಬ ರಾಜಕಾರಣದ ಪ್ರಭಾವ ಮೇಲುಗೈ ಸಾಧಿಸಿರುವುದರಿಂದ ಅಥವಾ ಹಿಡಿತದಿಂದಾಗಿ ಬೇರೆಯವರಿಗೆ ಅವಕಾಶ ಸಿಕ್ಕಿಲ್ಲ ಅಥವಾ ಇತರರು ಮುಂದೆ ಬಂದಿಲ್ಲ ಎಂದೂ ಹೇಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT