ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಂಡಾಟಿಕೆ ಮೆರೆದ ಸದಸ್ಯರಿಗೆ ಮೂಗುದಾರ ಹಾಕಿದ ಸರ್ಕಾರ:ಮಹಾನಗರ ಪಾಲಿಕೆ ಮತ್ತೆ ಸೂಪರ್‌ಸೀಡ್

Last Updated 4 ಜುಲೈ 2012, 8:10 IST
ಅಕ್ಷರ ಗಾತ್ರ

ಬೆಳಗಾವಿ: ಸದಾ ವಿವಾದದ ಕೇಂದ್ರವಾಗಿರುತ್ತಿರುವ ಬೆಳಗಾವಿ ಮಹಾನಗರ ಪಾಲಿಕೆಯನ್ನು ರಾಜ್ಯ ಸರ್ಕಾರವು ಮಂಗಳವಾರ ಪುನಃ `ಸೂಪರ್‌ಸೀಡ್~ ಮಾಡುವ ಮೂಲಕ ಅಭಿವೃದ್ಧಿಯನ್ನು ಮರೆತು ಪುಂಡಾಟಿಕೆ ಮೆರೆಯುತ್ತಿದ್ದ ಪಾಲಿಕೆಯ ಸದಸ್ಯರಿಗೆ `ಮೂಗುದಾರ~ ಹಾಕಿದೆ.

ಡಿಸೆಂಬರ್ 15, 2011ರಂದು ಪಾಲಿಕೆಯನ್ನು `ಸೂಪರ್‌ಸೀಡ್~ ಮಾಡಿದ್ದ ರಾಜ್ಯ ಸರ್ಕಾರದ ಆದೇಶವನ್ನು ಧಾರವಾಡದ ಸಂಚಾರಿ ಹೈಕೋರ್ಟ್ ಪೀಠವು ಜೂನ್ 19ರಂದು ರದ್ದುಗೊಳಿಸಿದ್ದರಿಂದ ಇನ್ನೇನು `ಅಧಿಕಾರ~ ಸಿಕ್ಕೇ ಬಿಟ್ಟಿತು ಎಂದು ಅಬ್ಬರಿಸುತ್ತ ಸದಸ್ಯರು ಪಾಲಿಕೆಯ ಸುತ್ತ ಮುತ್ತ ಸುಳಿದಾಡುತ್ತಿದ್ದರು. ಸರ್ಕಾರವು ಮಂಗಳವಾರ ಪುನಃ ಹೊಸ ಆದೇಶ ಹೊರಡಿಸಿ ಪಾಲಿಕೆಯನ್ನು `ಸೂಪರ್‌ಸೀಡ್~ ಮಾಡಿದ್ದರಿಂದ ಸದಸ್ಯರ ಸ್ಥಿತಿಯು ಮಳೆಯಲ್ಲಿ ನೆನೆದು ಮೂಲೆ ಹಿಡಿದು ಕುಳಿತ ಗುಬ್ಬಿಯಂತಾಗಿದೆ.

ಅಭಿವೃದ್ಧಿಯ ವಿಷಯವನ್ನು ಬದಿಗೊತ್ತಿ, ಪಾಲಿಕೆಯನ್ನು `ರಾಜಕೀಯ~ ಅಖಾಡವನ್ನಾಗಿ ಮಾಡಿಕೊಂಡಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಸದಸ್ಯರಿಗೆ ಸರ್ಕಾರವು ಮತ್ತೆ `ಸೂಪರ್‌ಸೀಡ್~ ಮಾಡಿ ಆದೇಶ ಹೊರಡಿಸಿದ್ದರಿಂದ ತೀವ್ರ ಮುಖ ಭಂಗವಾದಂತಾಗಿದೆ. ಹೈಕೋರ್ಟ್ ಆದೇಶದ ಬಳಿಕ ತಮಗೆ ಪಾಲಿಕೆ ಸದಸ್ಯರಾಗಿ ಕಾರ್ಯನಿರ್ವಹಿಸಲು ಅವಕಾಶ ಕೊಡಿ ಎಂದು ಮೇಲಿಂದ ಮೇಲೆ ಒತ್ತಡ ಹೇರುತ್ತಿದ್ದರಿಂದ ಇಕ್ಕಟ್ಟಿನಲ್ಲಿ ಸಿಲುಕಿದ್ದ ಪಾಲಿಕೆ ಆಯುಕ್ತೆ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಹಾಗೂ ಆಡಳಿತಾಧಿಕಾರಿ ವಿ. ಅನ್ಬುಕುಮಾರ ಅವರು ಸರ್ಕಾರದ ಆದೇಶದಿಂದಾಗಿ ನಿರಾಳರಾಗಿದ್ದಾರೆ.

2008-09ನೇ ಸಾಲಿನಲ್ಲಿ ಅಸ್ತಿತ್ವಕ್ಕೆ ಬಂದ ಪಾಲಿಕೆ ಸಭೆಯು ಇದುವರೆಗೆ 44 ಸಾಮಾನ್ಯ ಸಭೆಗಳನ್ನು ನಡೆಸಬೇಕಿತ್ತು. ಆದರೆ, ಕೇವಲ 18 ಸಭೆಗಳನ್ನು ಮಾತ್ರ ಸರಿಯಾಗಿ ನಡೆಸಲಾಗಿದೆ. ಪಾಲಿಕೆಯಲ್ಲಿ ಸರಿಯಾಗಿ ಸಭೆ ನಡೆಯದೇ ಇರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಡಿಸೆಂಬರ್ 3, 2009ರಲ್ಲಿ ಮೊದಲ ಬಾರಿಗೆ ಪಾಲಿಕೆಗೆ ಕಾರಣ ಕೇಳಿ ನೋಟಿಸ್ ನೀಡಿತ್ತು. ಇಷ್ಟಾದರೂ ಎಚ್ಚೆತ್ತುಕೊಳ್ಳದ ಪಾಲಿಕೆಯ ಸದಸ್ಯರು, ನಗರದ `ಅಭಿವೃದ್ಧಿ~ ವಿಷಯವನ್ನು ಮರೆತು `ರಾಜಕೀಯ~ವನ್ನೇ ಮುಂದು ವರಿಸಿಕೊಂಡು ಹೊರಟಿದ್ದರು.

ಸೆಪ್ಟೆಂಬರ್ 29, 2011ರಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರರ ಅಭಿನಂದನಾ ನಿರ್ಣಯಕ್ಕೆ ಎಂಇಎಸ್ ಸದಸ್ಯರು ಅಡ್ಡಿಪಡಿಸಿದರು. ಸಭೆಗೆ ಅಡ್ಡಿಪಡಿಸಿದ ಸದಸ್ಯರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ ಮೇಯರ್ ಕರ್ತವ್ಯಚ್ಯುತಿ ಮಾಡಿದ್ದರು. ಬಳಿಕ ನವೆಂಬರ್ 1ರಂದು ರಾಜ್ಯೋತ್ಸವದ ದಿನ ಎಂಇಎಸ್ ಆಯೋಜಿಸಿದ್ದ ಕರಾಳ ದಿನಾಚರಣೆಯಲ್ಲಿ ಮೇಯರ್ ಮಂದಾ ಬಾಳೇಕುಂದ್ರಿ ಹಾಗೂ ಉಪ ಮೇಯರ್ ಪಾಲ್ಗೊಳ್ಳುವ ಮೂಲಕ ಕನ್ನಡ ವಿರೋಧಿ ಚಟುವಟಿಕೆ ಕೈಗೊಂಡಿದ್ದರು.

ಈ ಹಿನ್ನೆಲೆಯಲ್ಲಿ `ಪಾಲಿಕೆಯನ್ನು ಏಕೆ ವಿಸರ್ಜಿ ಸಬಾರದು~ ನವೆಂಬರ್ 24ರಂದು ರಾಜ್ಯ ಸರ್ಕಾರವು ಕಾರಣ ಕೇಳಿ ನೋಟಿಸ್ ನೀಡಿತು. ಇದಾದ ಬಳಿಕವೂ ನವೆಂಬರ್ 30ರಂದು ನಡೆದ ಪಾಲಿಕೆ ಸಭೆಯಲ್ಲಿ ಕಂಬಾರರ ಅಭಿ ನಂದನಾ ನಿರ್ಣಯಕ್ಕೆ ಎಂಇಎಸ್ ಸದ ಸ್ಯರಿಂದ ವಿರೋಧ ವ್ಯಕ್ತವಾಯಿತು. ಪಾಲಿಕೆಯ ಆಡಳಿತ ವೈಫಲ್ಯ ಹಾಗೂ ಕನ್ನಡ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಸರ್ಕಾರವು ಡಿಸೆಂಬರ್ 15ರಂದು `ಸೂಪರ್‌ಸೀಡ್~ ಮಾಡಿ ಆದೇಶ ಹೊರಡಿಸಿತ್ತು.

ಧಾರವಾಡದ ಸಂಚಾರಿ ಹೈಕೋರ್ಟ್ ಪೀಠವು ಸದಸ್ಯರ ಅಭಿಪ್ರಾಯ ಪಡೆದು ಕ್ರಮ ಕೈಗೊಳ್ಳು ವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿ ್ದದರಿಂದ ಜೂನ್ 25ರಂದು ಸದಸ್ಯರ ಅಭಿಪ್ರಾಯವನ್ನೂ ಸಂಗ್ರಹಿಸಲಾಗಿತ್ತು. `ನವೆಂಬರ್ 24, 2011ರಂದು ನೋಟಿಸ್‌ನಲ್ಲಿ ಕೇಳಿದ್ದ 20 ಅಂಶಗಳ ಪ್ರಶ್ನೆಗಳಿಗೆ ಪಾಲಿಕೆಯ ಸದಸ್ಯರಿಂದ ಸಮರ್ಪಕವಾದ ಉತ್ತರ ಸಿಕ್ಕಿಲ್ಲ. ಪಾಲಿಕೆಯನ್ನು ವಿಸರ್ಜಿಸಿ ಸರ್ಕಾರ ತೆಗೆದುಕೊಂಡ ತೀರ್ಮಾನವನ್ನು ಬದಲಾಯಿಸಿ ಭಿನ್ನ ಅಭಿಪ್ರಾಯಕ್ಕೆ ಬರಲು ಸಕಾರಣ ಕಂಡುಬರುತ್ತಿಲ್ಲ.

ಕೆಎಂಸಿ ಕಾಯ್ದೆ 1976ರ ಪ್ರಕಾರ ಪಾಲಿ ಕೆಯು ತನ್ನ ಕರ್ತವ್ಯವನ್ನು ಸಮರ್ಪ ಕವಾಗಿ ನಿರ್ವಹಿಸದೇ ಇರುವುದು ಹಾಗೂ ತನ್ನ ಅಧಿಕಾ ರವನ್ನು ಮೀರಿ ರುವುದರಿಂದ ಕಲಂ 99(1)ರ ಪ್ರಕಾರ ಪಾಲಿಕೆಯನ್ನು ತಕ್ಷಣದಿಂದಲೇ `ಸೂಪರ್‌ಸೀಡ್~ ಮಾಡಲಾಗಿದೆ~ ಎಂದು ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಎಂ.ಆರ್. ಮಹೇಶ ಕುಮಾರ ಅವರು ಹೊರಡಿಸಿದ ಸುದೀರ್ಘ ಆದೇಶದಲ್ಲಿ ತಿಳಿಸಿದ್ದಾರೆ.

ಪಾಲಿಕೆ `ಸೂಪರ್‌ಸೀಡ್~ ಕುರಿತ ಜನಾಭಿಪ್ರಾಯ
ನಿರೀಕ್ಷೆ ಮೀರಿದ ಆದೇಶ
ಸದಸ್ಯರ ಅಭಿಪ್ರಾಯವನ್ನು ಪಡೆದು ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ಆದೇಶ ನೀಡಿತ್ತು. ನಮ್ಮೆಲ್ಲರ ಅಭಿಪ್ರಾಯಗಳನ್ನು ಆಲಿಸಿದ ಬಳಿಕ ಸರ್ಕಾರವು ಪುನಃ `ಸೂಪರ್‌ಸೀಡ್~ ಮಾಡಬಹುದು ಎಂದು ನಾವು ನಿರೀಕ್ಷಿಸಿರಲಿಲ್ಲ. ಸರ್ಕಾರದ ಆದೇಶ ಬೇಸರ ತಂದಿದೆ. ಇದರ ವಿರುದ್ಧ ಪುನಃ ಹೈಕೋರ್ಟ್ ಮೆಟ್ಟಿಲು ಏರುವ ಬಗ್ಗೆ ನನಗೆ ಆಸಕ್ತಿ ಇಲ್ಲ.
- ಸಂಜೀವ ಪ್ರಭು, ಪಾಲಿಕೆ ಮಾಜಿ ಸದಸ್ಯ

ಶೀಘ್ರವೇ ಚುನಾವಣೆ ನಡೆಸುವುದು ಒಳಿತು
ಪಾಲಿಕೆಯಲ್ಲಿ ಕೆಲವು ಸದಸ್ಯರು ಆಡಿದ್ದ ಆಟಕ್ಕೆ ಸರ್ಕಾರವು `ಸೂಪರ್‌ಸೀಡ್~ ಮಾಡಿರುವುದನ್ನು ನಾವು ಸ್ವಾಗತಿಸುತ್ತೇವೆ.

ಜನತಂತ್ರ ವ್ಯವಸ್ಥೆಯಲ್ಲಿ ಜಾಸ್ತಿ ದಿನಗಳ ಕಾಲ ಆಡಳಿತಾಧಿಕಾರಿಗಳನ್ನು ನೇಮಿಸುವುದು ಸರಿಯಲ್ಲ. ಶೀಘ್ರದಲ್ಲೇ ಪುನಃ ಚುನಾವಣೆ ನಡೆಸುವ ಮೂಲಕ ಜನರ ಅಧಿಕಾರವನ್ನು ಜನರಿಗೇ ನೀಡುವ ಮೂಲಕ ಜನತಂತ್ರ ವ್ಯವಸ್ಥೆಯನ್ನು ಪುನರ್‌ಸ್ಥಾಪಿಸಬೇಕು.
- ಅಶೋಕ ಚಂದರಗಿ, ಕನ್ನಡ ಹೋರಾಟಗಾರ

 ಸರ್ಕಾರ ಮಾಡಿದ್ದು ಯೋಗ್ಯ ವಾಗಿದೆ
“ಪಾಲಿಕೆಯನ್ನು ಸೂಪರ್‌ಸೀಡ್ ಮಾಡಿ ಆಡಳಿತಾಧಿಕಾರಿಯನ್ನು ನೇಮಿಸಿರುವ ಸರ್ಕಾರದ ಕ್ರಮವು ಯೋಗ್ಯವಾಗಿದೆ. ನಾವು ಅದನ್ನು ಆನಂದದಿಂದ ಸ್ವಾಗತಿಸುತ್ತೇವೆ.

ಬೆಳಗಾವಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ, ಅನಧಿಕೃತ ಕಟ್ಟಡಗಳ ನಿರ್ಮಾಣದಂತಹ ಹಲವು ಸಮಸ್ಯೆಗಳಿವೆ. ಕಳೆದ 4 ವರ್ಷಗಳಲ್ಲಿ ಯಾವುದೇ ಕೆಲಸವನ್ನು ಸರಿಯಾಗಿ ಮಾಡದ ಪಾಲಿಕೆ ಸದಸ್ಯರು ಬಾಕಿ ಉಳಿದ 8 ತಿಂಗಳಲ್ಲಿ ಏನು ಮಾಡಲು ಸಾಧ್ಯವಿತ್ತು? ಸರ್ಕಾರದ ಕ್ರಮವನ್ನು ಅಭಿನಂದಿಸುತ್ತೇನೆ”
-ಸಿದ್ಧನಗೌಡ ಪಾಟೀಲ, ಮಾಜಿ ಮೇಯರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT