1200 ಖಾಸಗಿ ಶಾಲಾ ಶಿಕ್ಷಕರಿಗೆ ಆಹಾರ ಕಿಟ್

ಹೊಸಪೇಟೆ (ವಿಜಯನಗರ): ಇಸ್ಕಾನ್ ಅಕ್ಷಯ ಪಾತ್ರೆ ಯೋಜನೆ ಹಾಗೂ ಸ್ಥಳೀಯ ದಾನಿಗಳ ನೆರವಿನೊಂದಿಗೆ ಭಾನುವಾರ ನಗರದಲ್ಲಿ 1,200 ಖಾಸಗಿ ಶಾಲಾ ಶಿಕ್ಷಕರಿಗೆ ಆಹಾರದ ಕಿಟ್ ವಿತರಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಸುನಂದಾ ಕಿಟ್ ವಿತರಿಸಿ, ‘ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಶಿಕ್ಷಕರು ಬಹಳ ತೊಂದರೆ ಅನುಭವಿಸಿದ್ದಾರೆ. ಸರ್ಕಾರಿ ಹಾಗೂ ಖಾಸಗಿ ಶಿಕ್ಷಕರಿಗೆ ಅವರದ್ದೇ ಪ್ರತ್ಯೇಕವಾದ ಸಮಸ್ಯೆಗಳಿದ್ದವು. ಮುಖ್ಯವಾಗಿ ಶಿಕ್ಷಕರಿಗೆ ಭೌತಿಕವಾಗಿ ಮಕ್ಕಳು ಸಿಗಲಿಲ್ಲ. ಪಾಲಕರಿಗೆ ಕೋವಿಡ್ ಕುರಿತ ಭಯ ಇನ್ನೂ ಇದೆ. ಮಕ್ಕಳಿದ್ದರೆ ಶಿಕ್ಷಕರಿರುತ್ತಾರೆ. ಶಿಕ್ಷಕರು ಮಕ್ಕಳೊಂದಿಗೆ ಸದಾ ಸಂಪರ್ಕ ಹೊಂದಿರಬೇಕು’ ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರ ಆಪ್ತ ಸಹಾಯಕ ಧರ್ಮೇಂದ್ರ ಸಿಂಗ್ ಮಾತನಾಡಿ, ‘ವಿದ್ಯಾರ್ಥಿಗಳಿಗೆ ಊಟ ಕೊಡುವ ಇಸ್ಕಾನ್ ಸಂಸ್ಥೆಯ ಅಕ್ಷಯ ಪಾತ್ರೆ ಯೋಜನೆಯು ಶಿಕ್ಷಕರಿಗೆ ಆಹಾರ ಕಿಟ್ ಕೊಡುವ ಮಹತ್ಕಾರ್ಯ ಶ್ಲಾಘನೀಯವಾಗಿದೆ. ಅದೇ ರೀತಿ ಸ್ಥಳೀಯ ದಾನಿಗಳು ಸಹ ಶಿಕ್ಷಕರ ಕಷ್ಟಕ್ಕೆ ಸ್ಪಂದಿಸಿ ಆಹಾರ ಕಿಟ್ ವಿತರಣೆಗೆ ಮುಂದೆ ಬಂದಿರುವುದು ಖುಷಿಯ ವಿಚಾರ’ ಎಂದರು.
ಇದೇ ವೇಳೆ ಖಾಸಗಿ ಶಿಕ್ಷಕರ ಬಳಗ ವಿಜಯನಗರ ಜಿಲ್ಲಾ ಘಟಕ ಉದ್ಘಾಟಿಸಲಾಯಿತು. ಕಾಂಗ್ರೆಸ್ ಮುಖಂಡ ಮೊಹಮ್ಮದ್ ಇಮಾಮ್ ನಿಯಾಜಿ, ಚಿತ್ತವಾಡ್ಗಿ ಠಾಣೆಯ ಎಸ್‌ಐ ಸರೋಜಮ್ಮ, ತಾಲ್ಲೂಕು ವೈದ್ಯಾಧಿಕಾರಿ ಡಾ.ಭಾಸ್ಕರ್, ಅಕ್ಷಯ ಪಾತ್ರೆ ಯೋಜನೆಯ ವ್ಯವಸ್ಥಾಪಕ ಶ್ರೀಧರ್, ಖಾಸಗಿ ಶಾಲಾ ಶಿಕ್ಷಕರ ಬಳಗದ ರಾಜ್ಯ ಘಟಕದ ಅಧ್ಯಕ್ಷ ನಾಗೇಶ್, ಕಾರ್ಯದರ್ಶಿ ರಂಜನ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.