ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ: ಸಹಕಾರ ಕ್ಷೇತ್ರಕ್ಕೂ ಆನಂದ್‌ ಸಿಂಗ್‌

ಮುಂದಿನ ಗುರಿ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಸ್ಥಾನ
Last Updated 23 ನವೆಂಬರ್ 2020, 11:18 IST
ಅಕ್ಷರ ಗಾತ್ರ

ಹೊಸಪೇಟೆ: ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಅವರು ಈಗ ಸಹಕಾರ ಕ್ಷೇತ್ರಕ್ಕೂ ಲಗ್ಗೆ ಇಟ್ಟಿದ್ದಾರೆ.

ಹೊಸಪೇಟೆ ತಾಲ್ಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ (ಟಿಎಪಿಸಿಎಂಎಸ್‌) ಮೂಲಕ ಸಹಕಾರ ರಂಗಕ್ಕೆ ಕಾಲಿರಿಸಿದ್ದಾರೆ. ಇತ್ತೀಚೆಗೆ ನಡೆದ ಸಂಘದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬರುವ ದಿನಗಳಲ್ಲಿ ಬಳ್ಳಾರಿ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಗಾದಿಯ ಮೇಲೆ ಅವರು ಕಣ್ಣಿಟ್ಟಿದ್ದಾರೆ ಎಂಬ ಗುಸುಗುಸು ಚರ್ಚೆ ನಡೆಯುತ್ತಿವೆ. ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಕೆ.ಎಂ. ಗಂಗಾಧರ ಡಿಸಿಸಿ ಬ್ಯಾಂಕಿನಲ್ಲಿ ತಾಲ್ಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘ ಪ್ರತಿನಿಧಿಸುತ್ತಿದ್ದರು. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಅವರು ಸೋಲು ಕಂಡಿದ್ದಾರೆ.

ಡಿಸಿಸಿ ಬ್ಯಾಂಕಿನಲ್ಲಿ ಟಿಎಪಿಸಿಎಂಎಸ್‌ ಪ್ರತಿನಿಧಿ ಸ್ಥಾನ ಖಾಲಿ ಉಳಿದಿದೆ. ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗಿದೆ. ಬರುವ ಜನವರಿಯಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಡಿಸಿಸಿ ಬ್ಯಾಂಕಿನ ನಿರ್ದೇಶಕ ಸ್ಥಾನಕ್ಕೆ ಆನಂದ್‌ ಸಿಂಗ್‌ ಸ್ಪರ್ಧಿಸಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಈ ಕುರಿತು ‘ಪ್ರಜಾವಾಣಿ’ ಆನಂದ್‌ ಸಿಂಗ್‌ ಅವರನ್ನು ಸಂಪರ್ಕಿಸಿದಾಗ, ‘ಈಗಷ್ಟೇ ಈ ಕ್ಷೇತ್ರಕ್ಕೆ ಬಂದಿರುವೆ. ಮುಂದೆ ಯೋಚಿಸಲಾಗುವುದು’ ಎಂದಷ್ಟೇ ಹೇಳಿದ್ದಾರೆ.

ಇದಕ್ಕೆ ಪೂರಕವೆಂಬಂತೆ ಇತ್ತೀಚೆಗೆ ನಗರದಲ್ಲಿ ಆಯೋಜಿಸಿದ್ದ ಸಹಕಾರ ಸಪ್ತಾಹದಲ್ಲಿ ಆನಂದ್‌ ಸಿಂಗ್‌ ಅವರು, ‘ತಾಲ್ಲೂಕಿನಲ್ಲಿ ಸಹಕಾರ ಸಕ್ಕರೆ ಕಾರ್ಖಾನೆ ಆರಂಭಿಸಲು ಪ್ರಯತ್ನಿಸುತ್ತೇನೆ. ಅದಕ್ಕೆ ಎಲ್ಲರ ಸಹಕಾರ ಬೇಕು. ಇನ್ನೂ ಸರ್ಕಾರದ ಅವಧಿ ಮುಗಿಯಲು ಸಾಕಷ್ಟು ಸಮಯ ಇದೆ. ಅಷ್ಟರೊಳಗೆ ಎಲ್ಲರ ಜತೆ ಚರ್ಚಿಸಿ, ಕಾರ್ಖಾನೆ ಆರಂಭಿಸಲು ಶ್ರಮಿಸುತ್ತೇನೆ’ ಎಂದು ಹೇಳಿದ್ದರು.

‘ಸಹಕಾರ ಕ್ಷೇತ್ರ ರಾಜಕೀಯದಿಂದ ಹೊರತಾಗಿಲ್ಲ. ಮಾಜಿ ಅಥವಾ ಹಾಲಿ ಶಾಸಕರು ಅಧ್ಯಕ್ಷರಾಗುತ್ತ ಬಂದಿದ್ದಾರೆ. ಆನಂದ್‌ ಸಿಂಗ್‌ ಅವರು ಬಂದರೆ ಅಚ್ಚರಿ ಪಡಬೇಕಿಲ್ಲ’ ಎಂದು ಹೆಸರು ಹೇಳಲಿಚ್ಛಿಸದ ಡಿಸಿಸಿ ಬ್ಯಾಂಕಿನ ನಿರ್ದೇಶಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಅಂದಹಾಗೆ, ತಾಲ್ಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘ, ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ಸೌಹಾರ್ದ ಸಹಕಾರ ಬ್ಯಾಂಕ್‌ಗಳ ತಲಾ ಒಬ್ಬ ಮತ್ತು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಏಳು ಜನ ನಿರ್ದೇಶಕರು ಅಥವಾ ಅಧ್ಯಕ್ಷರು ಡಿಸಿಸಿ ಬ್ಯಾಂಕಿನ ನಿರ್ದೇಶಕರಾಗುತ್ತಾರೆ. ಮೊದಲಿನಿಂದಲೂ ಡಿಸಿಸಿ ಬ್ಯಾಂಕಿನ ಮೇಲೆ ಕಾಂಗ್ರೆಸ್‌ ಹಿಡಿತ ಇದೆ.

****

ಡಿಸಿಸಿ ಬ್ಯಾಂಕ್‌ ಚುನಾವಣೆಗೆ ಸ್ಪರ್ಧಿಸುವ ಕುರಿತು ತೀರ್ಮಾನಿಸಿಲ್ಲ. ಸಹಕಾರ ಕ್ಷೇತ್ರದ ಹಿರಿಯರ ಸಲಹೆ ಮೇರೆಗೆ ಹೆಜ್ಜೆ ಇಡುವೆ.
–ಆನಂದ್‌ ಸಿಂಗ್‌, ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT