ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನಂದ್‌ ಸಿಂಗ್‌ ಗೆದ್ದಾಗಿದೆ, ಅಂತರದ ಚರ್ಚೆ

ಬಿಜೆಪಿ ಬಹಿರಂಗ ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿಕೆ
Last Updated 25 ನವೆಂಬರ್ 2019, 11:19 IST
ಅಕ್ಷರ ಗಾತ್ರ

ಹೊಸಪೇಟೆ: ‘ವಿಜಯನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಆನಂದ್‌ ಸಿಂಗ್‌ ಅವರು ಈಗಾಗಲೇ ಗೆದ್ದಾಗಿದೆ. ಅವರು ಎಷ್ಟು ಅಂತರದಿಂದ ಗೆಲ್ಲಲ್ಲಿದ್ದಾರೆ ಎಂಬುದರ ಬಗ್ಗೆ ಚರ್ಚೆ ನಡೆದಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ತಾಲ್ಲೂಕಿನ ಕಮಲಾಪುರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಿಜೆಪಿ ಬಹಿರಂಗ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ‘ನಮ್ಮ ಪಕ್ಷದ ಮುಖಂಡರು ಈ ಕ್ಷೇತ್ರದ ಚಿಂತೆ ಬಿಟ್ಟು ಬಿಡಿ. ಇಲ್ಲಿ ಭಾಷಣ ಮಾಡುವ ಅಗತ್ಯವೇ ಇಲ್ಲ. ಬೇರೆ ಕ್ಷೇತ್ರಗಳತ್ತ ಮುಖ ಮಾಡಬೇಕು’ ಎಂದು ತಿಳಿಸಿದರು.

‘ತಾಲ್ಲೂಕಿನ ಪಾಪಿನಾಯಕನಹಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯಲ್ಲಿ ಏತ ನೀರಾವರಿ ಯೋಜನೆ ಅನುಷ್ಠಾನಕ್ಕಾಗಿ ₹243 ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ವಿಜಯನಗರ ಉಪಕಾಲುವೆಗಳ ಆಧುನೀಕರಣಕ್ಕೆ ₹430 ಕೋಟಿ ಮೀಸಲಿಡಲಾಗಿದೆ. ಆನಂದ್‌ ಸಿಂಗ್‌ ಅವರು ಗೆದ್ದು, ಮಂತ್ರಿಯಾದ ನಂತರ ಈ ಕ್ಷೇತ್ರದ ಜನರ ಏನೆಲ್ಲ ಬೇಡಿಕೆಗಳಿವೆಯೋ ಅವುಗಳನ್ನು ಪಟ್ಟಿ ಮಾಡಿ ಕೊಟ್ಟರೆ ಬಗೆಹರಿಸಲಾಗುವುದು’ ಎಂದು ಭರವಸೆ ನೀಡಿದರು.

‘ತಿರುಕನ ಕನಸು ಕಾಣುತ್ತಿರುವ ಕಾಂಗ್ರೆಸ್‌, ಜೆ.ಡಿ.ಎಸ್‌. ಬಗ್ಗೆ ನಾನೇನೂ ಮಾತನಾಡಲಾರೆ. ನಾನೆಂದೂ ಸುಳ್ಳು ಹೇಳುವುದಿಲ್ಲ. ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ 22 ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ನಾನು ಹೇಳಿದಾಗ ವಿರೋಧ ಪಕ್ಷಗಳು ವ್ಯಂಗ್ಯ ಮಾಡಿದವು. ಆದರೆ, ನಾವು 25 ಕ್ಷೇತ್ರಗಳಲ್ಲಿ ಗೆದ್ದೆವು. ಕಾಂಗ್ರೆಸ್‌ ಅಡ್ರೆಸ್‌ ಇಲ್ಲದಂತಾಗಿದೆ. ಕಾಂಗ್ರೆಸ್‌ ಪಕ್ಷ ಕರ್ನಾಟಕದಿಂದ, ಭಾರತದಿಂದ ಮುಕ್ತವಾಗಬೇಕು’ ಎಂದು ಹೇಳಿದರು.

ಬಿಜೆಪಿ ಅಭ್ಯರ್ಥಿ ಆನಂದ್‌ ಸಿಂಗ್‌ ಮಾತನಾಡಿ, ‘2018ರ ನಂತರ ರಾಜ್ಯಕ್ಕೆ ಗ್ರಹಣ ಹಿಡಿದಿತ್ತು. ಮೈತ್ರಿ ಸರ್ಕಾರ ಆರು ಕೋಟಿ ಜನರೊಂದಿಗೆ ಚೆಲ್ಲಾಟವಾಡಿತು. ಜನರ ಸಮಸ್ಯೆಗೆ ಸ್ಪಂದಿಸಲಿಲ್ಲ. ಯಾವ ರೀತಿ ಸರ್ಕಾರ ಉಳಿಸಬೇಕು ಎಂಬುದರಲ್ಲೇ ಮುಖಂಡರು ಕಾಲಹರಣ ಮಾಡಿದರು. ಅದಕ್ಕೆ ಬೇಸತ್ತು ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದೆ’ ಎಂದು ಹೇಳಿದರು.

‘ಸಮ್ಮಿಶ್ರ ಸರ್ಕಾರದಲ್ಲಿ ಬಹಳಷ್ಟು ಕಾಡಿಬೇಡಿದರೂ ಕ್ಷೇತ್ರದಲ್ಲಿ ಏತ ನೀರಾವರಿ ಯೋಜನೆಗೆ ಅನುದಾನ ಬಿಡುಗಡೆ ಮಾಡಿರಲಿಲ್ಲ. ಆದರೆ, ಯಡಿಯೂರಪ್ಪನವರು ಒಂದೇ ಸಲಕ್ಕೆ ಹಣ ಬಿಡುಗಡೆ ಮಾಡಿದರು. ಈಗಾಗಲೇ ಟೆಂಡರ್‌ ಕೂಡ ಕರೆಯಲಾಗಿದೆ’ ಎಂದರು.

‘ಕಾಂಗ್ರೆಸ್‌ ಲೆಕ್ಕಾಚಾರದಲ್ಲಿ ಕಾಲ ಕಳೆಯುತ್ತಿದೆ. ಅವರಲ್ಲೇ ನಾಲ್ಕು ಗುಂಪುಗಳಿವೆ. ಯಾರು, ಎಲ್ಲಿಗೆ ಹೋಗಬೇಕು ಎನ್ನುವುದು ಗೊತ್ತಿಲ್ಲ’ ಎಂದು ಟೀಕಿಸಿದರು.

ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿ, ‘ಕಾಂಗ್ರೆಸ್‌ ಪಕ್ಷದ 70 ವರ್ಷಗಳ ದುರಾಡಳಿತದಿಂದ ಜನ ಬೇಸತ್ತಿದ್ದಾರೆ. ಆ ಪಕ್ಷದಿಂದ ರೈತರು, ದೀನ ದಲಿತರು, ಅಲ್ಪಸಂಖ್ಯಾತರು ದೂರವಾಗಿದ್ದು, ಅವರೆಲ್ಲ ಈಗ ಬಿಜೆಪಿ ಬೆಂಬಲಿಸುತ್ತಿದ್ದಾರೆ’ ಎಂದರು.

ಸಂಸದರಾದ ವೈ.ದೇವೇಂದ್ರಪ್ಪ, ಕರಡಿ ಸಂಗಣ್ಣ, ಶಾಸಕರಾದ ಜಿ. ಸೋಮಶೇಖರ್‌ ರೆಡ್ಡಿ, ಎನ್‌.ವೈ.ಗೋಪಾಲಕೃಷ್ಣ, ಹಾಲಪ್ಪ ಆಚಾರ್‌, ರಾಜುಗೌಡ, ಪರಣ್ಣ ಮುನವಳ್ಳಿ, ಸೋಮಲಿಂಗಪ್ಪ, ಅನರ್ಹ ಶಾಸಕ ಪ್ರತಾಪಗೌಡ ಪಾಟೀಲ, ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ, ಜಿಲ್ಲಾ ಘಟಕದ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ, ತಾಲ್ಲೂಕು ಅಧ್ಯಕ್ಷ ಅನಂತ ಪದ್ಮನಾಭ, ಮುಖಂಡರಾದ ಬಸವರಾಜ ನಾಲತ್ವಾಡ, ನೇಮಿರಾಜ ನಾಯ್ಕ, ಚಂದ್ರ ನಾಯ್ಕ, ಬಸವರಾಜ ಧಡೇಸಗೂರ, ಕಾರ್ತಿಕ್‌ ಘೋರ್ಪಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT