ಬುಧವಾರ, ಆಗಸ್ಟ್ 17, 2022
27 °C
ವಕೀಲರ ಸಂಘದ ಅಭಿನಂದ ಸಮಾರಂಭದಲ್ಲಿ ಅರಣ್ಯ ಸಚಿವ ಆನಂದ್‌ ಸಿಂಗ್‌ ಹೇಳಿಕೆ

ಹಣವಂತರೇ ಸಮಾಜ ಸೇವೆ ಮಾಡಬೇಕೆಂದಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ‘ಹಣವಂತರೇ ಸಮಾಜ ಸೇವೆ ಮಾಡಬೇಕಂತಿಲ್ಲ. ಆ ಭಾವನೆ ಯಾರಲ್ಲೂ ಇರಬಾರದು. ಎಲ್ಲ ವೃತ್ತಿಯವರು ಆ ಕೆಲಸ ಮಾಡಬಹುದು’ ಎಂದು ಅರಣ್ಯ ಸಚಿವ ಆನಂದ್‌ ಸಿಂಗ್‌ ಹೇಳಿದರು.

ವಕೀಲರ ಸಂಘದಿಂದ ಭಾನುವಾರ ಸಂಜೆ ನ್ಯಾಯಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಅಭಿನಂದನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

‘ಕೆಲವು ವೈದ್ಯರು ರೋಗಿಗಳಿಂದ ಹಣ ವಸೂಲಿ ಮಾಡುತ್ತಾರೆ. ಅದೇ ರೀತಿ ವಕೀಲರು ಸೇರಿದಂತೆ ಇತರೆ ವೃತ್ತಿಯಲ್ಲಿ ಇರುವವರು ಮಾಡುತ್ತಾರೆ. ಅದು ದೂರವಾಗಬೇಕು. ವಕೀಲರು ಸೇರಿ ಆಯಾ ವೃತ್ತಿಯಲ್ಲಿರುವವರು ಆ ವೃತ್ತಿಯ ಮೂಲಕವೇ ಸಮಾಜ ಸೇವೆ ಮಾಡಬಹುದು. ಹತ್ತು ಜನ ಬಡವರು ನ್ಯಾಯಾಲಯಕ್ಕೆ ಬಂದರೆ ಕನಿಷ್ಠ ಒಬ್ಬರ ಪರವಾದರೂ ಉಚಿತವಾಗಿ ವಾದ ಮಾಡಿ, ಅವರಿಗೆ ನ್ಯಾಯ ಒದಗಿಸಿಕೊಡಬೇಕು’ ಎಂದು ತಿಳಿಸಿದರು.

‘ಮನುಷ್ಯನ ಆಸೆಗಳಿಗೆ ಮಿತಿಯೇ ಇಲ್ಲ. ಆದರೆ, ಇರುವವರೆಗೆ ಕನಿಷ್ಠ ಸಹಾಯ ಮಾಡಬೇಕು. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕಾ ರಂಗದ ಮೇಲೆಯೇ ಈ ದೇಶ ನಿಂತಿದೆ. ದೇಶದ ಎಲ್ಲ ಆಗು–ಹೋಗು ಈ ಮಾಧ್ಯಮಗಳಿಂದ ಗೊತ್ತಾಗುತ್ತದೆ. ಅವುಗಳು ಇನ್ನಷ್ಟು ಉತ್ತಮವಾಗಿ ನಡೆಯಬೇಕು’ ಎಂದರು.

‘ರಾಣಿಪೇಟೆಯಲ್ಲಿ ನನ್ನ ಮನೆ ಇರುವುದರಿಂದ ಬಾಲ್ಯದಲ್ಲಿ ಶಾಲೆಗೆ ಹೋಗುವಾಗ ನ್ಯಾಯಾಲಯದ ಅಂಗಳದಲ್ಲಿ ಆಟವಾಡಿ ಹೋಗುತ್ತಿದ್ದೆ. ಇಲ್ಲಿಗೆ ಬಂದಾಗಲೆಲ್ಲ ನನ್ನ ಬಾಲ್ಯ ನೆನಪಾಗುತ್ತದೆ. ಒಂದು ದಿನ ನಿಮ್ಮನ್ನು ಉದ್ದೇಶಿಸಿ ಮಾತನಾಡುತ್ತೇನೆ ಎಂದು ಕನಸಲ್ಲೂ ಭಾವಿಸಿರಲಿಲ್ಲ. ಆದರೆ, ಅದು ಪರಮಾತ್ಮನ ಲೀಲೆ’ ಎಂದು ಹೇಳಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮೊಹಮ್ಮದ್‌ ಇಮಾಮ್‌ ನಿಯಾಜಿ, ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಾಂಗ ಬಹಳ ಮಹತ್ವದ ಅಂಗ. ಇದು ಉತ್ತಮವಾಗಿ ಕೆಲಸ ನಿರ್ವಹಿಸಬೇಕು’ ಎಂದು ತಿಳಿಸಿದರು.

ಅಂಜುಮನ್‌ ಸಮಿತಿ ಕಾರ್ಯದರ್ಶಿ ಸೈಯದ್‌ ಅಹಮ್ಮದ್‌, ವಕೀಲರ ಸಂಘದ ತಾಲ್ಲೂಕು ಅಧ್ಯಕ್ಷ ತಾರಿಹಳ್ಳಿ ಹನುಮಂತಪ್ಪ, ಕಾರ್ಯದರ್ಶಿ ಕೊಟ್ರಗೌಡ, ವಕೀಲರಾದ ರತ್ನಾಕರ, ಎಸ್‌.ವಿ. ಜವಳಿ, ಗುಜ್ಜಲ್‌ ನಾಗರಾಜ ಇದ್ದರು.

 

/ಬಾಕ್ಸ್‌/

‘ಆಕಾಂಕ್ಷಿಗಳು ಹೆದರಬೇಕಿಲ್ಲ’
‘ಮತ್ತೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಒಂದುವೇಳೆ ಜನ ಒತ್ತಾಯಿಸಿದರೆ ಆಲೋಚನೆ ಮಾಡುವೆ. ಆದರೆ, ಅನ್ಯ ಪಕ್ಷದ ಆಕಾಂಕ್ಷಿಗಳು ಹೆದರಬೇಕಿಲ್ಲ. ಜನ ತೀರ್ಮಾನಿಸುತ್ತಾರೆ. ಎಲ್ಲರ ಆಸೆ ಆ ಹಂಪಿ ವಿರೂಪಾಕ್ಷ ಈಡೇರಿಸಲಿ ಎಂದು ಪ್ರಾರ್ಥಿಸುವೆ’ ಎಂದು ಸಚಿವ ಆನಂದ್‌ ಸಿಂಗ್‌ ಹೇಳಿದಾಗ ಸಭೆ ನಗೆಗಡಲಲ್ಲಿ ತೇಲಿತು.
‘ವಿಜಯನಗರ ಜಿಲ್ಲೆ ಮಾಡಿದ್ದೀರಿ. ಅದರ ಅಭಿವೃದ್ಧಿಗೆ ನೀವೇ ಚುನಾವಣೆಗೆ ನಿಲ್ಲಬೇಕು ಅಂದರೆ ನಿಲ್ಲುವೆ. ಏತ ನೀರಾವರಿ ಕೆಲಸ ಆರಂಭವಾಗಿದೆ. ಶೀಘ್ರದಲ್ಲೇ ಜಿಲ್ಲೆ ರಚನೆ ಅಧಿಸೂಚನೆ ಹೊರಬೀಳಲಿದೆ. ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆಗೇರಿಸಲಾಗುವುದು. ಜೋಳದರಾಶಿ ಗುಡ್ಡ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಹೊಸಪೇಟೆ ಭವಿಷ್ಯ ಬಹಳ ಉಜ್ವಲವಾಗಿದೆ’ ಎಂದು ತಿಳಿಸಿದರು.

‘ಎಂಎಲ್‌ಎ ಆಗಲು ಆಶೀರ್ವದಿಸಿ’
‘ಎಂಎಲ್‌ಎ ಆಗಲು ನನಗೆ ಆಶೀರ್ವದಿಸಿ’ ಎಂದು ಮಾಜಿಶಾಸಕ ಸೂರ್ಯನಾರಾಯಣ ರೆಡ್ಡಿ ಅವರು ಸಭೆಯಲ್ಲಿ ಹೇಳಿದರು. ಅದಕ್ಕೆ ಸಭಿಕರೊಬ್ಬರು, ‘ಯಾವ ಕ್ಷೇತ್ರದಿಂದ’ ಎಂದು ಪ್ರಶ್ನಿಸಿದರು. ಅದಕ್ಕೆ ರೆಡ್ಡಿ, ‘ಎಲ್ಲಾದರೂ ಆಗುವೆ’ ಎಂದು ಚುಟುಕಾಗಿ ಉತ್ತರಿಸಿದರು.
‘ದಾನ ಮಾಡುವುದರಿಂದ ನನಗೆ ಖುಷಿ ಸಿಗುತ್ತದೆ. ದೇವರು ನನಗೆ ಕೊಟ್ಟಿದ್ದಾರೆ ನಾನು ಬೇರೆಯವರಿಗೆ ಕೊಡುತ್ತಿರುವೆ. ಆದರೆ, ಕುಡುಕರಿಗೆ ದಾನ ಮಾಡಬಾರದು. ಹಣ ಬರುತ್ತದೆ, ಹೋಗುತ್ತದೆ. ಆದರೆ, ಸದಾ ನಗ್ತಾ ಇರಬೇಕು. ನಾನು ಎಂಟನೇ ತರಗತಿ ಪಾಸಾದವನು. ನಾನು ₹10 ಲಕ್ಷ ಕೊಟ್ಟಿದ್ದಕ್ಕೆ ನನಗೆ ಸನ್ಮಾನ ಮಾಡುತ್ತಿರುವುದಕ್ಕೆ ಆಶ್ಚರ್ಯವಾಗಿದೆ. ಈ ರೀತಿ ಸನ್ಮಾನ ಮಾಡುತ್ತೀರಿ ಎಂದು ಗೊತ್ತಿದ್ದರೆ ಇನ್ನೂ ಜಾಸ್ತಿ ಕೊಡುತ್ತಿದ್ದೆ’ ಎಂದು ಹಾಸ್ಯ ಚಟಾಕಿ ಹಾರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.