ಮಂಗಳವಾರ, ಅಕ್ಟೋಬರ್ 27, 2020
22 °C
ಕೆಸರು ಗದ್ದೆಯಂತಾದ ಇಡೀ ವಾತಾವರಣ; ತ್ಯಾಜ್ಯದ ಬಳಿಯೇ ವ್ಯಾಪಾರ ನಡೆಸುವ ಅನಿವಾರ್ಯತೆ

ಎಪಿಎಂಸಿಯಲ್ಲಿ ತರಕಾರಿಗಿಂತ ಕಸವೇ ಹೆಚ್ಚು!

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಪ್ರಾಂಗಣದಲ್ಲಿ ಈಗ ತರಕಾರಿಗಿಂತ ಕಸದ ರಾಶಿಯೇ ಹೆಚ್ಚಾಗಿ ಕಣ್ಣಿಗೆ ರಾಚುತ್ತದೆ!

ಸತತ ಮಳೆಗೆ ಇಲ್ಲಿನ ಬಹುತೇಕ ರಸ್ತೆಗಳು ಹಾಳಾಗಿದ್ದು, ಅವುಗಳು ಕೆಸರಿನ ಗದ್ದೆ ಸ್ವರೂಪ ಪಡೆದುಕೊಂಡಿವೆ. ನಿತ್ಯ ಇಲ್ಲಿ ಸೃಷ್ಟಿಯಾಗುವ ತ್ಯಾಜ್ಯದ ರಾಶಿ ಅಪಾರ. ಆದರೆ, ಕಸ ಹಾಕುವುದಕ್ಕೆ ನಿರ್ದಿಷ್ಟ ಜಾಗ ಗೊತ್ತು ಪಡಿಸಿದರೂ ಅಲ್ಲಿ ಯಾರೊಬ್ಬರೂ ಹಾಕುವುದಿಲ್ಲ. ತರಕಾರಿ, ಹಣ್ಣು ಮಾರಾಟಗಾರರು ವ್ಯಾಪಾರ ಮುಗಿದ ಬಳಿಕ ಬೇಕಾಬಿಟ್ಟಿಯಾಗಿ ಕೊಳೆತ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡಿ ಹೋಗುತ್ತಾರೆ.

ನಿತ್ಯ ವಿವಿಧ ಕಡೆಗಳಿಂದ ರೈತರು ಬಂದು ವ್ಯಾಪಾರ ಮಾಡುವುದರಿಂದ ಅಪಾರ ಪ್ರಮಾಣದ ಕಸ ಸಂಗ್ರಹವಾಗುತ್ತದೆ. ಆದರೆ, ಅದಕ್ಕೆ ತಕ್ಕುದಾಗಿ ವಿಲೇವಾರಿ ಆಗುವುದಿಲ್ಲ ಎನ್ನುವುದು ಸ್ಥಳೀಯರ ದೂರು. ಅಸಮರ್ಪಕ ತ್ಯಾಜ್ಯ ವಿಲೇವಾರಿಯಿಂದ ಎಲ್ಲೆಡೆ ಕಸದ ರಾಶಿ ಬಿದ್ದಿದ್ದು, ಅದರ ಬಳಿಯೇ ಕುಳಿತುಕೊಂಡು ವ್ಯಾಪಾರಿಗಳು ವ್ಯಾಪಾರ ಮಾಡುವಂತಾಗಿದೆ.

ಸತತವಾಗಿ ಸುರಿಯುತ್ತಿರುವ ಮಳೆಗೆ ತ್ಯಾಜ್ಯದ ರಾಶಿ ಕೊಳೆತು ಎಲ್ಲೆಡೆ ದುರ್ಗಂಧ ಹರಡಿದೆ. ತರಕಾರಿ, ಹಣ್ಣು ಖರೀದಿಸಲು ಬಂದವರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ಎಪಿಎಂಸಿಯ ದುರವಸ್ಥೆ ಕಂಡು ಕೆಲವರು ಈ ಕಡೆ ಬರುವುದೇ ಬಿಟ್ಟಿದ್ದಾರೆ.

‘ಎಪಿಎಂಸಿಯಲ್ಲಿ ಕಡಿಮೆ ಬೆಲೆಗೆ ತರಕಾರಿ, ಹಣ್ಣು ಸಿಗುತ್ತದೆ ಎಂದು ಖರೀದಿಸಲು ಅನಂತಶಯನಗುಡಿಯಿಂದ ಬಂದು ಹೋಗುವೆ. ಆದರೆ, ಕೆಲವು ದಿನಗಳಿಂದ ಅಲ್ಲಿನ ಹೊಲಸು ನೋಡಿದರೆ ಭಯವಾಗುತ್ತದೆ. ಏನೇನೋ ಹೊಸ ರೋಗಗಳು ಬರುತ್ತಿವೆ. ಸ್ವಚ್ಛತೆಗೆ ಹೆಚ್ಚಿನ ಒತ್ತು ಸಿಗಬೇಕು. ಅದರಲ್ಲೂ ಮಳೆಗಾಲದಲ್ಲಿ. ಆದರೆ, ಆಗುತ್ತಿರುವುದೇ ಬೇರೆ. ಹೀಗಾಗಿ ಮಾರುಕಟ್ಟೆಗೆ ಹೋಗುವುದನ್ನೇ ಬಿಟ್ಟಿರುವೆ’ ಎಂದು ಅನಂತಶಯನಗುಡಿ ನಿವಾಸಿ ನಂದೀಶ್ವರ ತಿಳಿಸಿದರು.

‘ಮಾರುಕಟ್ಟೆಯ ಇಡೀ ಆವರಣ ಕೆಸರಿನ ಗದ್ದೆಯಾಗಿದೆ. ನಡೆಯಲು ಆಗುವುದಿಲ್ಲ; ಬೈಕ್‌ ಓಡಿಸಲು ಬರೊಲ್ಲ. ನನ್ನಂತಹ ಮಧ್ಯ ವಯಸ್ಕನಿಗೆ ಇಷ್ಟೆಲ್ಲ ಸಮಸ್ಯೆ ಆಗುವುದಾದರೆ ಹಿರಿಯರು ಹೇಗೆ ತಾನೆ ಓಡಾಡಲು ಸಾಧ್ಯ. ಸಂಬಂಧಪಟ್ಟವರು ಕೂಡಲೇ ಈ ಕಡೆ ಗಮನಹರಿಸಿ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ನಿಜ ಹೇಳಬೇಕೆಂದರೆ ಎಪಿಎಂಸಿಯಲ್ಲಿ ಶಿಸ್ತು ಎನ್ನುವುದೇ ಇಲ್ಲ. ವ್ಯಾಪಾರಿಗಳು ಎಲ್ಲೆಂದರಲ್ಲಿ ವ್ಯಾಪಾರ ಮಾಡುತ್ತಾರೆ. ನಂತರ ಕೊಳೆತು ಹೋದ ವಸ್ತುಗಳನ್ನು ಬೇಕಾಬಿಟ್ಟಿ ಎಸೆದು ಹೋಗುತ್ತಾರೆ. ಇದರಿಂದಾಗಿ ನಿತ್ಯ ಕಸ ಹೆಚ್ಚಾಗುತ್ತ ಹೋಗುತ್ತಿದೆ. ಮಳೆ ಬಂದಾಗ ಕೊಳೆತು ಎಲ್ಲೆಡೆ ದುರ್ವಾಸನೆ ಬರುತ್ತದೆ. ಮತ್ತೊಂದೆಡೆ, ನಗರಸಭೆಯವರು ಸರಿಯಾಗಿ ಕಸ ವಿಲೇವಾರಿ ಮಾಡುವುದಿಲ್ಲ. ಹಾಗಾಗಿ ಇಲ್ಲಿ ವ್ಯಾಪಾರ ಮಾಡುವುದೇ ಕಷ್ಟವಾಗುತ್ತಿದೆ. ಆದರೆ, ಹೊಟ್ಟೆಪಾಡಿಗೆ ಅದರಲ್ಲೇ ಕೆಲಸ ಮಾಡುತ್ತಿದ್ದೇವೆ’ ಎಂದು ತರಕಾರಿ ವ್ಯಾಪಾರಿ ಹುಲುಗಣ್ಣ ತಿಳಿಸಿದರು.

***

ಕೊರೊನಾದಂತಹ ಸಾಂಕ್ರಾಮಿಕ ರೋಗಗಳು ವ್ಯಾಪಕವಾಗಿ ಹರಡುತ್ತಿವೆ. ಸ್ವಚ್ಛತೆಗೆ ಮೊದಲ ಆದ್ಯತೆ ಸಿಗಬೇಕು. ಆದರೆ, ಅದು ಕೊನೆಯ ಆದ್ಯತೆಯಾಗಿದ್ದು ದುರಂತ.
-ನಂದೀಶ್ವರ, ಅನಂತಶಯನಗುಡಿ ನಿವಾಸಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು