ಸೋಮವಾರ, ಫೆಬ್ರವರಿ 24, 2020
19 °C

ಪಂಚಮಸಾಲಿ ಸಮಾಜ ತುಳಿಯುವ ಯತ್ನ: ವಚನಾನಂದ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹರಪನಹಳ್ಳಿ: ‘ರಾಜ್ಯ ಬಿಜೆಪಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಲ್ಲಿ ಉದ್ದೇಶಪೂರ್ವಕವಾಗಿ ಪಂಚಮಸಾಲಿ ಸಮಾಜ ತುಳಿಯುವ ಪ್ರಯತ್ನ ನಡೆದಿದೆ’ ಎಂದು ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ಎಡಿಬಿ ಕಾಲೇಜಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಗೆದ್ದ 11 ಜನರಲ್ಲಿ 10 ಜನರಿಗೆ ಸಚಿವ ಸ್ಥಾನ ಕೊಡಲಾಗಿದೆ. ಮಹೇಶ ಕುಮಟಹಳ್ಳಿ ಅವರಿಗೆ ಮಾತ್ರ ಸಚಿವ ಸ್ಥಾನ ನೀಡದಿರುವುದು ಏನನ್ನು ತೋರಿಸುತ್ತದೆ’ ಎಂದು ಪ್ರಶ್ನಿಸಿದರು.

‘ಮಹೇಶ ಕುಮಟಹಳ್ಳಿ ನನ್ನ ಜೊತೆ ಸಂಪರ್ಕದಲ್ಲಿದ್ದಾರೆ. ವಿಚಾರ ವಿನಿಮಯ ನಾನು ಬಹಿರಂಗ ಪಡಿಸಲ್ಲ. ನಿಗಮ ಮಂಡಳಿ ಸ್ಥಾನವನ್ನು ಅವರೂ ಒಪ್ಪಿಕೊಂಡಿಲ್ಲ. ಬಿಜೆಪಿ ಸರ್ಕಾರ ರಚನೆಗೆ ಸಹಕರಿಸಿದ ಇನ್ನೂ ಕೆಲವರಿಗೆ ಅನ್ಯಾಯವಾಗಿದೆ. ಮುರುಗೇಶ ನಿರಾಣಿಯವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ನಿಲುವಿಗೆ ಈಗಲೂ ಬದ್ಧ ನಾಗಿದ್ದೇನೆ. ಸುಮ್ಮನಾಗಿಲ್ಲ ವೇಟ್ ಅಂಡ ಸೀ’ ಎಂದರು.

ಹರಜಾತ್ರೆಯಲ್ಲಿ ನಡೆದ ಸಮಾರಂಭದಲ್ಲಿ ನಾನು ಮುರುಗೇಶ ನಿರಾಣಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿದ್ದೇನೆ. ಇದನ್ನು ನಮ್ಮ ಸಮಾಜ ಬಾಂಧವರು ಒಪ್ಪಿಕೊಂಡಿದ್ದಾರೆ. ಜಾತ್ರೆ, ದಾಸೋಹದಲ್ಲಿ ಸಣ್ಣಪುಟ್ಟ ತಪ್ಪುಗಳಿದ್ದರೆ ಹೊಟ್ಟೆಗೆ ಹಾಕಿಕೊಳ್ಳಿ ಎಂದು ಭಕ್ತರನ್ನು ಕೇಳಿರುವುದಾಗಿ ಸ್ಪಷ್ಟನೆ ನೀಡಿದರು.

ಪಂಚಮಸಾಲಿ ಸಮಾಜದ ಕೂಡಲಸಂಗಮ ಹಾಗೂ ಹರಿಹರ ಪೀಠಗಳು ಒಂದಾಗುವಂತಹ ವಾತಾವರಣವಿದೆ. ಸದ್ಯಕ್ಕೆ ಅದರ ಬಗ್ಗೆ ಏನೂ ಹೇಳುವುದಿಲ್ಲ ಎಂದರು.

ಪಂಚಮಸಾಲಿ ಸಮಾಜದ ಹರಪನಹಳ್ಳಿ ತಾಲೂಕು ಅಧ್ಯಕ್ಷ ಪಟೇಲ್ ಬೆಟ್ಟನಗೌಡ, ಮುಖಂಡರಾದ ತಲುವಾಗಲು ಮಲ್ಲಿಕಾರ್ಜುನ, ಶಶಿಧರ ಪೂಜಾರ, ಆರುಂಡಿ ಸುವರ್ಣ, ಆರುಂಡಿ ನಾಗರಾಜ, ಓಂಕಾರಗೌಡ ಅವರೂ ಇದ್ದರು.

ಕುಮಠಳ್ಳಿಗೆ ಸಚಿವ ಸ್ಥಾನ ಕೊಡದಿದ್ದರೆ ಸಿಎಂ ವಚನ ಭ್ರಷ್ಟ: ಯತ್ನಾಳ

ವಿಜಯಪುರ: ‘ಶಾಸಕ ಮಹೇಶ ಕುಮಠಳ್ಳಿ ಅವರಿಗೆ ಸಚಿವ ಸ್ಥಾನ ನೀಡಲೇಬೇಕು. ಇಲ್ಲವಾದಲ್ಲಿ ಮುಖ್ಯಮಂತ್ರಿ ವಚನ ಭ್ರಷ್ಟರಾಗುತ್ತಾರೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

‘ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕುಮಠಳ್ಳಿ ಕೂಡ ತ್ಯಾಗ ಮಾಡಿದ್ದಾರೆ. ಅವರಿಗೆ ಬಾಯಿ ಇಲ್ಲ, ಸಂಭಾವಿತರು ಎಂಬ ಕಾರಣಕ್ಕೆ ಕೊಡುವುದಿಲ್ಲವೇ’ ಎಂದು ಇಲ್ಲಿ ಮಂಗಳವಾರ ಖಾರವಾಗಿ ಪ್ರಶ್ನಿಸಿದರು.

‘ಎಂಎಸ್‌ಐಎಲ್‌ ಅಧ್ಯಕ್ಷ ಸ್ಥಾನ ಬೇಡ ಎಂಬ ಕುಮಠಳ್ಳಿ ಹೇಳಿಕೆ ಸರಿಯಾಗಿದೆ. ಪಾಪ ಕುಮಠಳ್ಳಿ ಮದ್ಯ ಸೇವನೆ ಮಾಡುವುದಿಲ್ಲ. ಅಂತಹವರಿಗೆ ಎಂಎಸ್‌ಐಎಲ್‌ ಕೊಟ್ಟರೆ ಏನು ಪ್ರಯೋಜನ’ ಎಂದು ವ್ಯಂಗ್ಯವಾಡಿದರು.

‌ಶಾಸಕಾಂಗ ಸಭೆ ಕರೆಯಲು ಒತ್ತಾಯ: ‘ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಕೆಲವು ಬಿಜೆಪಿಯ ಮೂಲ ಶಾಸಕರಲ್ಲಿ ಅಸಮಾಧಾನ ಉಂಟಾಗಿದೆ. ಹೀಗಾಗಿ, ತಕ್ಷಣ ಶಾಸಕಾಂಗ ಸಭೆ ಕರೆಯುವಂತೆ ಮುಖ್ಯಮಂತ್ರಿಗೆ ಪತ್ರ ಬರೆದಿದ್ದೇನೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

‘ಇಷ್ಟೇ ಜನರಿಗೆ ಅಸಮಾಧಾನ ಆಗಿದೆ, ಇಷ್ಟು ಜನ ನನ್ನೊಂದಿಗೆ ಮಾತನಾಡಿದ್ದಾರೆ ಎಂಬ ಸಂಖ್ಯೆಯನ್ನು ಹೇಳಲಾರೆ. ಆದರೆ, ಅಸಮಾಧಾನ ಇರುವುದು ನಿಜ. ಹಾಗಂತ ನಾವು ಪ್ರತ್ಯೇಕ ಸಭೆ ನಡೆಸುವುದಿಲ್ಲ ’ ಎಂದು ಮಂಗಳವಾರ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು