ಸೋಮವಾರ, ಜೂನ್ 21, 2021
29 °C
ಶ್ರದ್ಧಾ, ಭಕ್ತಿಯಿಂದ ಸರಳವಾಗಿ ಬಸವ ಜಯಂತಿ ಆಚರಣೆ

ಮನೆಯಲ್ಲೇ ಬಸವಣ್ಣನ ಪೂಜೆ, ಪ್ರಾರ್ಥನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ನಗರ ಸೇರಿದಂತೆ ತಾಲ್ಲೂಕಿನ ಹಲವು ಕಡೆಗಳಲ್ಲಿ ಶುಕ್ರವಾರ ಬಸವೇಶ್ವರರ ಜಯಂತಿ ಶ್ರದ್ಧಾ, ಭಕ್ತಿ ಹಾಗೂ ಸರಳ ರೀತಿಯಲ್ಲಿ ಆಚರಿಸಲಾಯಿತು.

ದೇವಸ್ಥಾನ, ಮಠಗಳಲ್ಲಿ ಸಾಂಕೇತಿಕ ಆಚರಣೆಗಷ್ಟೇ ಬಸವ ಜಯಂತಿ ಸೀಮಿತವಾಗಿತ್ತು. ಬಸವ ಭಕ್ತರು ಮನೆಯಲ್ಲೇ ಸರಳವಾಗಿ ಪೂಜೆ, ಪ್ರಾರ್ಥನೆ ನೆರವೇರಿಸಿ ಜಯಂತಿ ಆಚರಿಸಿದರು.

ನಗರದ ಬಸವೇಶ್ವರ ಬಡಾವಣೆ, ಚಿತ್ತವಾಡ್ಗಿ, ಪಟೇಲ್‌ ನಗರ, ಸ್ಟೇಶನ್‌ ರಸ್ತೆ, ಅಮರಾವತಿ, ಆಕಾಶವಾಣಿ ಸೇರಿದಂತೆ ಇತರೆ ಬಡಾವಣೆಗಳಲ್ಲಿ ಜನ ಅವರ ಮನೆಯಲ್ಲೇ ಬಸವ ಜಯಂತಿ ಆಚರಿಸಿದರು. ವಿವಿಧೆಡೆ ಬಸವ ಜಯಂತಿ ಆಚರಿಸಿದ ವಿವರ ಇಂತಿದೆ.

ತಾಲ್ಲೂಕು ಆಡಳಿತ

ನಗರದ ತಾಲ್ಲೂಕು ಕಚೇರಿಯಲ್ಲಿ ಏರ್ಪಡಿಸಿದ್ದ ಸರಳ ಕಾರ್ಯಕ್ರಮದಲ್ಲಿ ತಹಶೀಲ್ದಾರ್‌ ಎಚ್‌. ವಿಶ್ವನಾಥ್‌ ಅವರು ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪನಮನ ಸಲ್ಲಿಸಿದರು. ಗ್ರೇಡ್– 2 ತಹಶೀಲ್ದಾರ್ ಮೇಘನಾ, ಶಿರಸ್ತೇದಾರ ಶ್ರೀಧರ್, ರಮೇಶ್, ಆಹಾರ ಇಲಾಖೆಯ ಮಂಜುನಾಥ್, ಬಸವ ಬಳಗದ ಸದಸ್ಯ ಬಸವಲಿಂಗಪ್ಪ ಇದ್ದರು.

ಕೊಟ್ಟೂರುಸ್ವಾಮಿ ಮಠ

ನಗರದ ಕೊಟ್ಟೂರು ಸ್ವಾಮಿ ಮಠದಲ್ಲಿ ಬಸವೇಶ್ವರರ ಭಾವಚಿತ್ರಕ್ಕೆ ಸಂಗನಬಸವ ಸ್ವಾಮೀಜಿ, ಮುಪ್ಪಿನ ಬಸವಲಿಂಗ ದೇವರು ಹಾಲ್ಕೆರೆ ಪೂಜೆ ನೆರವೇರಿಸಿದರು.

ಸಂಗನಬಸವ ಸ್ವಾಮೀಜಿ ಮಾತನಾಡಿ, ‘ಮಠದಿಂದ ಪ್ರತಿವರ್ಷ ಬಸವ ಜಯಂತಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಸಾಮೂಹಿಕ ವಿವಾಹ, ಪ್ರವಚನ ಸೇರಿದಂತೆ ಇತರೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಆದರೆ, ಕೋವಿಡ್‌ನಿಂದ ಎರಡು ವರ್ಷಗಳಿಂದ ಸರಳವಾಗಿ ಜಯಂತಿ ಆಚರಿಸಲಾಗುತ್ತಿದೆ’ ಎಂದರು.

‘ಕೊರೊನಾ ಮಹಾಮಾರಿಯಿಂದ ಇಡೀ ಜಗತ್ತು ಸಂಕಷ್ಟಕ್ಕೆ ಒಳಗಾಗಿದೆ. ಈ ರೋಗ ದೂರವಾಗುವವರೆಗೆ ಪ್ರತಿಯೊಬ್ಬರೂ ಮಾಸ್ಕ್‌ ಧರಿಸಿ, ಅಂತರ ಕಾಯ್ದುಕೊಂಡು ವ್ಯವಹರಿಸಬೇಕು. ಬಡವರು, ನಿರ್ಗತಿಕರಿಗೆ ಕೈಲಾದಷ್ಟು ಸಹಾಯ ಮಾಡಬೇಕು. ಆದಷ್ಟು ಬೇಗ ಈ ರೋಗ ದೂರವಾಗಿ ಜನಜೀವನ ಸಹಜ ಸ್ಥಿತಿಗೆ ಮರಳಬೇಕು’ ಎಂದು ಹಾರೈಸಿದರು.

ಶರಣಯ್ಯ ಸ್ವಾಮಿ, ಶರಣು ಸ್ವಾಮಿ, ಕೊಟ್ಟೂರು ದೇಶಿಕರು ದರೂರು, ಕುಮಾರಸ್ವಾಮಿ, ಎಚ್‌.ಎಂ. ಜಂಬಯ್ಯ ಇತರರಿದ್ದರು.

ಇಷ್ಟಲಿಂಗ ಸಂಶೋಧನಾ ಕೇಂದ್ರ

ತಾಲ್ಲೂಕಿನ ಧರ್ಮದಗುಡ್ಡ ಬಳಿಯ ಇಷ್ಟಲಿಂಗ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಲ್ಲಿ ಸರಳವಾಗಿ ಬಸವ ಜಯಂತಿ ಆಚರಿಸಲಾಯಿತು. ಡಾ. ಅಜಯಕುಮಾರ್‌ ತಾಂಡೂರು, ಬಸವರಾಜ, ಬಸವರಾಜ ಮಾವಿನಹಳ್ಳಿ, ಓಂಪ್ರಕಾಶ, ಶ್ರೀನಿವಾಸ ಇದ್ದರು.

ಅಕ್ಕನ ಬಳಗ

ನಗರದ ಬಸವೇಶ್ವರ ಬಡಾವಣೆಯ ಅಕ್ಕಮಹಾದೇವಿ ಭವನದಲ್ಲಿ ಅಕ್ಕನ ಬಳಗ ಹಾಗೂ ಬಸವ ಬಳಗದಿಂದ ಬಸವ ಜಯಂತಿ ಆಚರಿಸಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು