ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂವಿನಹಡಗಲಿ: ಬಸವೇಶ್ವರ ರಥೋತ್ಸವ ಸಂಪನ್ನ

ಕೋವಿಡ್ ಕಾರಣ ಜಾತ್ರೆಗೆ ನಿರ್ಬಂಧ: ಸರಳ ಧಾರ್ಮಿಕ ಆಚರಣೆ
Last Updated 14 ಮಾರ್ಚ್ 2021, 4:52 IST
ಅಕ್ಷರ ಗಾತ್ರ

ಹೂವಿನಹಡಗಲಿ: ತಾಲ್ಲೂಕಿನ ಸುಕ್ಷೇತ್ರ ಕುರುವತ್ತಿಯಲ್ಲಿ ಶನಿವಾರ ಸಂಜೆ ಬಸವೇಶ್ವರ ಹಾಗೂ ಮಲ್ಲಿಕಾರ್ಜುನ ಸ್ವಾಮಿಯ ರಥೋತ್ಸವ ಸಂಭ್ರಮದಿಂದ ಜರುಗಿತು.

ದೇವಸ್ಥಾನದಿಂದ ಸಾಗಿ ಭವ್ಯ ಮೆರವಣಿಗೆಯಲ್ಲಿ ಬಂದ ಸ್ವಾಮಿಯ ಉತ್ಸವ ಮೂರ್ತಿ ರಥಾರೋಹಣ ಮಾಡುತ್ತಿದ್ದಂತೆ ರಥೋತ್ಸವ ಚಾಲನೆ ಪಡೆದುಕೊಂಡಿತು. ರಥೋತ್ಸವದ ಉದ್ದಕ್ಕೂ ಹರ ಹರ ಮಹಾದೇವ ಜಯಘೋಷ, ಹರ್ಷೋದ್ಘಾರ ಮುಗಿಲು ಮುಟ್ಟಿತು. ರಥಬೀದಿಯಲ್ಲಿ ನೆರೆದಿದ್ದ ಭಕ್ತರು ರಥದ ಚಕ್ರಕ್ಕೆತೆಂಗಿನಕಾಯಿ ಒಡೆದು, ಬಾಳೆ ಹಣ್ಣು ಎಸೆದು ಭಕ್ತಿ ಸಮರ್ಪಿಸಿದರು.

ಕೋವಿಡ್ ಹಿನ್ನೆಲೆಯಲ್ಲಿ ಧಾರ್ಮಿಕ ಆಚರಣೆಗಳನ್ನು ಸರಳವಾಗಿ ನಡೆಸಲು ಜಿಲ್ಲಾಡಳಿತ ಸೂಚಿಸಿದ್ದರಿಂದ ರಥವನ್ನು ಸಾಂಕೇತಿಕವಾಗಿ ಮೂಲ ಸ್ಥಳದಿಂದ 100 ಮೀಟರ್ ದೂರದವರೆಗೆ ಮಾತ್ರ ಎಳೆದು,ಮೂಲ ಸ್ಥಳಕ್ಕೆ ತಂದು ನಿಲ್ಲಿಸಲಾಯಿತು.

ಉತ್ತರ ಕರ್ನಾಟಕದ ಪ್ರಮುಖ ಜಾತ್ರೆಗಳಲ್ಲಿ ಒಂದಾಗಿರುವ ಕುರುವತ್ತಿ ಜಾತ್ರೆಗೆ ಜಿಲ್ಲಾಡಳಿತ ನಿರ್ಬಂಧ ಹೇರಿದ್ದರಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿರಲಿಲ್ಲ. ದಾವಣಗೆರೆ, ಹಾವೇರಿ, ಕೊಪ್ಪಳ ಜಿಲ್ಲೆಗಳಿಂದ ಸುಕ್ಷೇತ್ರಕ್ಕೆ ಬರುತ್ತಿದ್ದ ಪಾದಯಾತ್ರಿಗಳ ಸಂಖ್ಯೆಯೂ ಗಣನೀಯವಾಗಿ ಕಡಿಮೆ ಇತ್ತು.

ತಹಶೀಲ್ದಾರ್ ವಿವೇಕಾನಂದ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಯು.ಎಚ್.ಸೋಮಶೇಖರ, ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಎಂ.ಎಚ್.ಪ್ರಕಾಶರಾವ್, ದೇವಸ್ಥಾನ ಸಮಿತಿ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಗಂಗಾಧರಪ್ಪ ಭಾಗವಹಿಸಿದ್ದರು.

ವಿಶೇಷ ಪೂಜೆ: ಬಸವೇಶ್ವರ ಹಾಗೂ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದ ವಿಶೇಷ ಪೂಜೆ, ಧಾರ್ಮಿಕ ಆಚರಣೆಗಳು ಜರುಗಿದವು. ಭಕ್ತರು ಸರದಿ ಸಾಲಿನಲ್ಲಿ ತೆರಳಿ ಸ್ವಾಮಿಯ ದರ್ಶನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT